ನವದೆಹಲಿ(ಆ. 29): ಜಮ್ಮುವಿನ ಭಾರತ-ಪಾಕ್ ಅಂತರರಾಷ್ಟ್ರೀಯ ಗಡಿಯ ಬೇಲಿಯ ಕೆಳಭಾಗದಲ್ಲಿ ಸುರಂಗಮಾರ್ಗ ನಿರ್ಮಾಣವಾಗಿರುವುದನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಪತ್ತೆ ಹಚ್ಚಿದೆ. ಜಮ್ಮುವಿನ ಸಾಂಬಾ ಸೆಕ್ಟರ್ನಲ್ಲಿ ಬಿಎಸ್ಎಫ್ ಸೈನಿಕರು ಗಡಿಯಲ್ಲಿ ಪಹರೆ ನಡೆಸುವಾಗ ಇದು ಕಂಡುಬಂದಿದೆ. ನೆಲದಿಂದ 25 ಮೀಟರ್ ಆಳದಲ್ಲಿ ಗಡಿಯಿಂದ 50 ಮೀಟರ್ನೊಳಗೆ ಒಳಗೆ ಈ ಸುರಂಗ ಚಾಚಿದೆ. ಇದು ಬೆಳಕಿಗೆ ಬಂದ ನಂತರ ಬಿಎಸ್ಎಫ್ ತುಕಡಿಗಳು ಗಡಿಯಾದ್ಯಂತ ಶೋಧ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಭಾಗದಿಂದ ಭಾರತದೊಳಗೆ ನುಸುಳಲು ಈ ಸುರಂಗ ತೋಡಲಾಗಿರುವುದಕ್ಕೆ ಕೆಲ ಸಾಕ್ಷ್ಯಗಳೂ ಸಿಕ್ಕಿರುವಂತಿದೆ.
ಸುರಂಗದ ತುದಿಯಲ್ಲಿ 8-10 ಪ್ಲಾಸ್ಟಿಕ್ ಸ್ಯಾಂಡ್ ಬ್ಯಾಗ್ಗಳು ಸಿಕ್ಕಿವೆ. ಆ ಬ್ಯಾಗ್ನಲ್ಲಿ ಪಾಕಿಸ್ತಾನೀ ಗುರುತುಗಳಿವೆ. ಕರಾಚಿ ಮತ್ತು ಶಕರ್ಗಡ್ ಎಂಬ ಹೆಸರುಗಳು ಈ ಕವರ್ಗಳಲ್ಲಿ ಕಾಣಿಸಿವೆ. ಇತ್ತೀಚೆಗಷ್ಟೇ ಈ ಬ್ಯಾಗುಗಳನ್ನ ತಯಾರಿಸುವುದೂ ಅದರ ಮ್ಯಾನುಫ್ಯಾಕ್ಚರಿಂಗ್ ಡೇಟ್ನಿಂದ ತಿಳಿದುಬಂದಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ; 24 ಗಂಟೆಗಳಲ್ಲಿ 7 ಉಗ್ರರ ಹತ್ಯೆ
ಜಮ್ಮು, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಪಾಕಿಸ್ತಾನದ ಜೊತೆ ಒಟ್ಟು ಇರುವ ಗಡಿ ಸುಮಾರು 3,300 ಕಿಮೀ ಇದೆ. ಇಷ್ಟು ಉದ್ದದ ಗಡಿಭಾಗವನ್ನು ಬಿಎಸ್ಎಫ್ ಕಾವಲು ಕಾಯುತ್ತದೆ. ಬಹಳಷ್ಟು ಎಚ್ಚರಿಕೆಯಿಂದ ಗಡಿಕಾವಲು ಮಾಡಲಾಗುತ್ತಿದೆ. ಇತ್ತೀಚೆಗೆ ಉಗ್ರಗಾಮಿಗಳು ಒಳನುಸುಳಿರುವ ಐದಾರು ಘಟನೆಗಳು ಬೆಳಕಿಗೆ ಬಂದ ಬಳಿಕ ಇನ್ನಷ್ಟು ತೀವ್ರವಾಗಿ ಗಡಿ ಕಾಯಲಾಗುತ್ತದೆ.
ಈಗ ಸುರಂಗ ಮಾರ್ಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಸುರಂಗ ಮಾರ್ಗಳಿವೆಯೇ ಎಂಬುದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಸುರಂಗಗಳನ್ನ ಪತ್ತೆಹಚ್ಚಬಲ್ಲ ರಾಡಾರ್ಗಳ ಬಳಕೆಯಾಗುತ್ತಿದೆ. ಇದೇ ವೇಳೆ, ಜಮ್ಮು, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಹೆಚ್ಚು ಅಲರ್ಟ್ ಘೋಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ