ಮಗು ಅತ್ತಿದ್ದಕ್ಕೆ ವಿಮಾನದಿಂದಲೇ ಕೆಳಗಿಳಿಸಿದ ಬ್ರಿಟಿಷ್​ ಏರ್​ವೇಸ್​!

news18
Updated:August 9, 2018, 11:12 AM IST
ಮಗು ಅತ್ತಿದ್ದಕ್ಕೆ ವಿಮಾನದಿಂದಲೇ ಕೆಳಗಿಳಿಸಿದ ಬ್ರಿಟಿಷ್​ ಏರ್​ವೇಸ್​!
news18
Updated: August 9, 2018, 11:12 AM IST
ನ್ಯೂಸ್​18 ಕನ್ನಡ

ನವದೆಹಲಿ (ಆ.4): ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಮಗು ಅಳಲಾರಂಭಿಸಿದ್ದಕ್ಕೆ ಭಾರತೀಯ ಅಧಿಕಾರಿಯ ಕುಟುಂಬವನ್ನು ವಿಮಾನದಿಂದಲೇ ಕೆಳಗಿಳಿಸಿದ ಘಟನೆ ಲಂಡನ್​ನಲ್ಲಿ ನಡೆದಿದೆ.

ಲಂಡನ್​-ಬೆರ್ಲಿನ್​ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಂಡಿಯನ್ ಇಂಜಿನಿಯರಿಂಗ್​ ಸರ್ವಿಸಸ್​ನ ಅಧಿಕಾರಿಯ 3 ವರ್ಷದ ಮಗು ವಿಮಾನದಲ್ಲಿ ಜೋರಾಗಿ ಅಳಲಾರಂಭಿಸಿದೆ. ಇದರಿಂದ ಕಿರಿಕಿರಿಗೊಂಡ ವಿಮಾನದ ಸಿಬ್ಬಂದಿ ಆ ಮಗು, ಅದರ ಅಪ್ಪ-ಅಮ್ಮನನ್ನು ವಿಮಾನದಿಂದ ಕೆಳಕ್ಕಿಳಿಸಿದ್ದಾರೆ. ಬ್ರಿಟಿಷ್​ ಏರ್​ವೇಸ್​ ಸಿಬ್ಬಂದಿಯ ಈ ನಡವಳಿಕೆಯಿಂದ ಅವಮಾನಿತರಾದ ಭಾರತೀಯ ಅಧಿಕಾರಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್​ ಪ್ರಭು ಅವರಿಗೆ ಪತ್ರ ಬರೆದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಬ್ರಿಟಿಷ್​ ಏರ್​ಲೈನ್​ನ ಅವಮಾನ ಮತ್ತು ಜನಾಂಗೀಯ ನಡವಳಿಕೆ ತೋರಿದೆ ಎಂದು ಆರೋಪಿಸಿದ್ದಾರೆ.

ಲಂಡನ್​ ವಿಮಾನ ನಿಲ್ದಾಣದಿಂದ ವಿಮಾನ ಟೇಕ್​ಆಫ್​ ಆಗುತ್ತಿದ್ದಂತೆ ಗಾಬರಿಗೊಂಡ 3 ವರ್ಷದ ಮಗು ಅಳಲಾರಂಭಿಸಿದೆ. ಮಗುವಿನ ತಾಯಿ ಸಂತೈಸಲು ಪ್ರಯತ್ನಿಸಿದರೂ ಅದು ಸುಮ್ಮನಾಗಿಲ್ಲ. ಆಗ ವಿಮಾನದ ಗಗನಸಖಿಯರು ಮಗುವನ್ನು ಸುಮ್ಮನಾಗುವಂತೆ ಹೆದರಿಸಿದ್ದರಿಂದ ಅದು ಇನ್ನೂ ಜೋರಾಗಿ ಅಳತೊಡಗಿದೆ. ಟರ್ಮಿನಲ್​ಗೆ ವಾಪಾಸು ಬಂದು ಲ್ಯಾಂಡ್​ ಆದ ವಿಮಾನದೊಳಗೆ ಧಾವಿಸಿದ ಅಧಿಕಾರಿಗಳು ಜೋರಾದ ಧ್ವನಿಯಲ್ಲಿ ನಮ್ಮ ಮೇಲೆ ರೇಗಾಡಿದರು. ಅಳುತ್ತಿದ್ದ ನಮ್ಮ ಮಗುವಿಗೆ ಬಿಸ್ಕೆಟ್​ ಕೊಟ್ಟು ಸುಮ್ಮನಿರಿಸಲು ಮುಂದಾದ ನಮ್ಮ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಭಾರತೀಯ ಕುಟುಂಬದವರ ಮತ್ತು ನಮ್ಮ ಬೋರ್ಡಿಂಗ್​ ಪಾಸ್​ಗಳನ್ನು ತೆಗೆದುಕೊಂಡು ವಿಮಾನದಿಂದ ಕೆಳಗಿಳಿಸಿದರು ಎಂದು ಆ ಮಗುವಿನ ಅಪ್ಪ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಬ್ರಿಟಿಷ್​ ಏರ್​ವೇಸ್​, ನಾವು ಯಾವುದೇ ರೀತಿಯ ಭೇದಭಾವ ಮಾಡುವುದನ್ನು ಪ್ರೋತ್ಸಾಹಿಸುವುದಿಲ್ಲ. ಈ ಆರೋಪವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು, ಈಗಾಗಲೇ ತನಿಖೆಯನ್ನು ಆರಂಭಿಸಿದ್ದೇವೆ. ಬಳಿಕ, ನಮ್ಮ ಗ್ರಾಹಕರನ್ನು ಸಂಪರ್ಕಿಸಿ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ