ಪಾಕ್ ಆಕ್ರಮಿತ ಕಾಶ್ಮೀರವನ್ನು ಮೊದಲು ತನ್ನಿ ಆನಂತರ ಕರಾಚಿಯ ಬಗ್ಗೆ ಯೋಚಿಸಿ; ಸಂಜಯ್ ರಾವತ್
ನಾವು ಅಖಂಡ ಭಾರತದ ಬಗ್ಗೆ ನಂಬಿಕೆ ಹೊಂದಿದ್ದು, ಭವಿಷ್ಯದಲ್ಲಿ ಪಾಕಿಸ್ತಾನದ ಕರಾಚಿ ನಗರವೂ ಭಾರತದ ಪಾಲಾಗಲಿದೆ" ಎಂದು ನೀಡಿರುವ ಭಾವೋದ್ವೇಗದ ಹೇಳಿಕೆ ಇದೀಗ ಚರ್ಚೆ ಮತ್ತು ನಗೆಪಾಟಲಿಗೆ ಗುರಿಯಾಗಿದೆ.
ಮುಂಬೈ (ನವೆಂಬರ್ 23); ನಾವು ಅಖಂಡ ಭಾರತದ ಬಗ್ಗೆ ನಂಬಿಕೆ ಹೊಂದಿದ್ದು, ಮುಂದೊಂದು ದಿನ ಪಾಕಿಸ್ತಾನದ ಕರಾಚಿ ನಗರವೂ ಭಾರತದ ಭಾಗವಾಗಲಿದೆ ಎಂದು ಬಿಜೆಪಿ ನಾಯಕ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ ಬೆನ್ನಿಗೆ ಅವರಿಗೆ ಟಾಂಗ್ ನೀಡಿರುವ ಶಿವಸೇನೆ ನಾಯಕ ಸಂಜಯ್ ರಾವತ್, "ಮೊದಲು ಕೊಟ್ಟ ಮಾತಿನಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗವನ್ನು ಭಾರತಕ್ಕೆ ತನ್ನಿ. ಆನಂತರ ಕರಾಚಿ ಬಗೆಗೆ ಯೋಚಿಸುವ" ಎಂದು ಹರಿಹಾಯ್ದಿದ್ದಾರೆ. ಅಸಲಿಗೆ ಮುಂಬೈ ನಗರದ ಬಾಂದ್ರಾದಲ್ಲಿ ಕರಾಚಿ ಸ್ವೀಟ್ ಹೌಸ್ ಎಂಬ ಹೆಸರಿನಲ್ಲಿ ಒಂದು ಬೇಕರಿ ಇದೆ. ಈ ಬೇಕರಿ ಹೆಸರನ್ನು ಬದಲಿಸಬೇಕು ಎಂಬ ಕೂಗು ಇದೀಗ ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ದೇವೇಂದ್ರ ಫಡ್ನವೀಸ್ ನೀಡಿರುವ ಈ ಹೇಳಿಕೆ ಇದೀಗ ದೇಶದಾದ್ಯಂತ ನಗೆಪಾಟಲಿಗೆ ಗುರಿಯಾಗಿದೆ.
ಕರಾಚಿ ಸ್ವೀಟ್ ಹೌಸ್ ಬೇಕರಿಯ ಹೆಸರನ್ನು ಬದಲಿಸುವಂತೆ ಶಿವಸೇನೆ ಮುಖಂಡ ನಿತೀನ್ ನಂದ್ಗಾವಂಕರ್ ಮಾಲೀಕರಿಗೆ ಬೆದರಿಕೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದರ ಬೆನ್ನಿಗೆ ಈ ಕುರಿತು ಮಾತನಾಡಿದ್ದ ದೇವೇಂದ್ರ ಫಡ್ನವೀಸ್, "ಪಾಕಿಸ್ತಾನ ಮತ್ತು ಭಯೋತ್ಪಾದಕರೊಂದಿಗೆ ಒಡನಾಟವಿರುವ ಹೆಸರನ್ನು ರಾಷ್ಟ್ರೀಯವಾದಿಗಳಾದ ನಾವು ದ್ವೇಷಿಸುತ್ತೇವೆ. ಆ ಅಂಗಡಿಗೆ ಯಾವ ಹೆಸರನ್ನಾದರೂ ಇಡಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕರಾಚಿ ಎಂಬ ಹೆಸರು ಮಾತ್ರ ಬದಲಾಗಬೇಕು. ಏಕೆಂದರೆ ಅದು ಭಯೋತ್ಪಾದನೆಯ ಜೊತೆಗೆ ಥಳಕು ಹಾಕಿಕೊಂಡಿರುವ ಹೆಸರು" ಎಂದು ಕಿಡಿಕಾರಿದ್ದರು.
ಇಷ್ಟಕ್ಕೆ ಮಾತನ್ನು ಮುಗಿಸದ ದೇವೇಂದ್ರ ಫಡ್ನವೀಸ್, "ನಾವು ಅಖಂಡ ಭಾರತದ ಬಗ್ಗೆ ನಂಬಿಕೆ ಹೊಂದಿದ್ದು, ಭವಿಷ್ಯದಲ್ಲಿ ಪಾಕಿಸ್ತಾನದ ಕರಾಚಿ ನಗರವೂ ಭಾರತದ ಪಾಲಾಗಲಿದೆ" ಎಂದು ನೀಡಿರುವ ಭಾವೋದ್ವೇಗದ ಹೇಳಿಕೆ ಇದೀಗ ಚರ್ಚೆ ಮತ್ತು ನಗೆಪಾಟಲಿಗೆ ಗುರಿಯಾಗಿದೆ.
ಹೀಗಾಗಿ ದೇವೇಂದ್ರ ಫಡ್ನವೀಸ್ ಅವರ ಈ ಹೇಳಿಕೆ ತಿರುಗೇಟು ನೀಡಿರುವ ಶಿವಸೇನೆ ಮುಖಂಡ ಹಾಗೂ ಸಂಸದ ಸಂಜಯ್ ರಾವತ್, "ಮೊದಲು ಪಾಕಿಸ್ತಾನ ಆಕ್ರಮಿತ ಭಾರತದ ಕಾಶ್ಮೀರದ ಭೂ ಪ್ರದೇಶವನ್ನು ಮರಳಿ ತನ್ನಿ. ನಂತರ ಕರಾಚಿಯನ್ನು ಭಾರತಕ್ಕೆ ಸೇರಿಸಿಕೊಳ್ಳೋಣ” ಎಂದು ಹೇಳಿದ್ದಾರೆ.
ಇನ್ನೂ ವಿವಾದದ ಕೇಂದ್ರವಾಗಿರುವ ಕರಾಚಿ ಬೇಕರಿಯ ಹೆಸರನ್ನು ಬದಲಿಸುವ ಕುರಿತು ಮಾತನಾಡಿರುವ ಸಂಜಯ್ ರಾವತ್, "ಅಂಗಡಿಯ ಹೆಸರನ್ನು ಬದಲಾಯಿಸುವ ಬೇಡಿಕೆ ಪಕ್ಷದ ಅಧಿಕೃತ ನಿಲುವಲ್ಲ. ಕರಾಚಿ ಬೇಕರಿ ಮತ್ತು ಕರಾಚಿ ಸಿಹಿತಿಂಡಿಗಳು ಕಳೆದ 60 ವರ್ಷಗಳಿಂದ ಮುಂಬೈನಲ್ಲಿದೆ. ಅವರಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಪೂರ್ವಜರು ಕರಾಚಿಯಿಂದ ಶತಮಾನಗಳ ಹಿಂದೆಯೇ ವಲಸೆಬಂದ ಕಾರಣ ಆ ಬೇಕರಿಗೆ ನೆನಪಿನಾರ್ಥವಾಗಿ ಕರಾಚಿ ಎಂದು ಹೆಸರಿಡಲಾಗಿದೆ. ಆದರೆ, ಈಗ ಅದರ ಹೆಸರುಗಳನ್ನು ಬದಲಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ