ಮೊನ್ನೆಯಷ್ಟೇ ಭಾರತೀಯ (Indian) ವಯಕ್ತಿಯೊಬ್ಬ ಸಂಸ್ಕೃತದ ಹಳೆಯ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಂಡು ಎಲ್ಲರ ಗಮನಸೆಳೆದಿದ್ದರು. ಇದೀಗ ಭಾರತೀಯ ಮೂಲದ ಇಬ್ಬರು ವಿಜ್ಞಾನಿಗಳು ಜಾಗತಿಕವಾಗಿರುವ ಎರಡು ದೊಡ್ಡ ಸಮಸ್ಯೆಗಳಿಗೆ ಪರಿಹಾರ ಸೂತ್ರವೊಂದನ್ನು ಮಂಡಿಸಿದ್ದು ಮತ್ತೆ ಎಲ್ಲರ ಗಮನಸೆಳೆದಿದ್ದಾರೆ. ಜಗತ್ತಿನಲ್ಲಿ ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅಭಿವೃದ್ಧಿಯು ಇನ್ನಿಲ್ಲದಂತೆ ಎಗ್ಗಿಲ್ಲದೆ ಮುಂದೆ ಸಾಗುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚಿನ ಸೌಕರ್ಯ ಇಂದಿನ ಮಾನವ ಪಡೆದಿದ್ದಾನೆ. ಆದರೂ ಜಾಗತಿಕವಾಗಿ ಇಂದು ನಮಗೆ ಎರಡು ದೊಡ್ಡ ಸಮಸ್ಯೆಗಳಿವೆ (Problem).ಒಂದು ಪರಿಸರ ಅದರಲ್ಲೂ ವಿಶೇಷವಾಗಿ ಜಾಗತಿಕ ಹಸಿರು ಅನಿಲ ಸಮಸ್ಯೆ ಹಾಗೂ ಹೆಚ್ಚಾಗುತ್ತಿರುವ ಪ್ಲಾಸ್ಟಿಕ್ (Plastic) ಸಮಸ್ಯೆ.
ಈ ಎರಡೂ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಹು ಸಮಯದಿಂದ ವಿಜ್ಞಾನಿಗಳು ಪರಿಣಾಮಕಾರಿ ಪರಿಹಾರದ ಬಗ್ಗೆ ಕೆಲಸ ಮಾಡುತ್ತಲೇ ಇದ್ದಾರೆ. ಆದರೂ ಅದಕ್ಕೆ ಸಮರ್ಪಕವಾದ, ವಸ್ತುನಿಷ್ಠವಾದ ಪರಿಹಾರ ಲಭ್ಯವಾಗಿಲ್ಲ.
ಇಂತಹ ಸಂದರ್ಭದಲ್ಲಿ ಕೆಂಬ್ರಿಜ್ ವಿಶ್ವವಿದ್ಯಾಲಯದ ಇಬ್ಬರು ಭಾರತೀಯ ವಿಜ್ಞಾನಿಗಳು ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ಏಕ ಕಾಲದಲ್ಲೇ ಈ ಎರಡೂ ಸಮಸ್ಯೆಗಳನ್ನು ಆ ವ್ಯವಸ್ಥೆ ಸಮರ್ಪಕವಾಗಿ ಎದುರಿಸಬಹುದಾಗಿದೆ. ಪ್ರೊಫೆಸರ್ ಎರ್ವಿನ್ ರೈಸ್ನರ್ ಅವರು ಸುಸ್ಥಿರ ಭವಿಷ್ಯ ನಿರ್ಮಾಣಕ್ಕಾಗಿ ಎಂದು ತಮ್ಮದೆ ಆದ ರೈಸ್ನರ್ ಲ್ಯಾಬ್ ಒಂದನ್ನು ಹೊಂದಿದ್ದು ಅದರಲ್ಲಿ ಸಂಶೋಧನೆಗಳು ಹಾಗೂ ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿರುತ್ತದೆ.
ಪ್ರಸ್ತುತ ಭಾರತ ಮೂಲದ ಇಬ್ಬರು ವಿಜ್ಞಾನಿಗಳು ಇದೇ ಪ್ರಯೋಗಾಲಯದಲ್ಲಿ ಹಾಗೂ ಎರ್ವಿನ್ ಅವರ ಮೇಲ್ವಿಚಾರಣೆಯಲ್ಲಿ ರಿಯಾಕ್ಟರ್ ಒಂದನ್ನು ಅಭಿವೃದ್ಧಿಪಡಿಸಿದ್ದು ಅದು ಹಸಿರು ಅನಿಲ ಹಾಗೂ ಪ್ಲಾಸ್ಟಿಕ್ ಅನ್ನು ಸುಸ್ಥಿರ ಇಂಧನಶಕ್ತಿ ಹಾಗೂ ಇತರೆ ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುತ್ತದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಮತವಾಗಿ ಪರಿವರ್ತಿತವಾಗಬಲ್ಲುದೇ? ಇಲ್ಲಿದೆ ಜನರ ಅಭಿಪ್ರಾಯ
ನೇಚರ್ ಸಿಂಥೆಸಿಸ್ ಎಂಬ ಜರ್ನಲ್ ನಲ್ಲಿ ಇದೀಗ ಈ ಸಂಶೋಧನೆಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ಪ್ರಕಟಿಸಲಾಗಿದೆ. ಸದ್ಯ ಅಭಿವೃದ್ಧಿಪಡಿಸಲಾಗಿರುವ ರಿಯಾಕ್ಟರ್ ತನ್ನ ಕಾರ್ಯಾಚರಣೆಗಾಗಿ ಸೌರಶಕ್ತಿ ಹಾಗೂ ಪೆರೋವ್ಸ್ಕೈಟ್ (Perovskite) ಆಧಾರಿತ ಲೈಟ್ ಅಬ್ಸೋರ್ಬರ್ ಅನ್ನು ಬಳಸುತ್ತದೆ. Perovskite ಎಂಬುದು ಒಂದು ವಸ್ತುವಾಗಿದ್ದು ಸೌರ ಕೋಶಗಳನ್ನು ನಿರ್ಮಿಸಲು ಸಿಲಿಕಾನ್ ಪದಾರ್ಥದ ಪರ್ಯಾಯವಾಗಿ ಇದನ್ನು ಬಳಸಲಾಗುತ್ತದೆ ಹಾಗೂ ಇದು ಸಿಲಿಕಾನ್ ಗೆ ಹೋಲಿಸಿದರೆ ಮಿತವ್ಯಯದ ವಸ್ತುವಾಗಿದೆ.
"ಈ ರಿಯಾಕ್ಟರ್ ಎರಡು ಘಟಕಗಳನ್ನು ಹೊಂದಿದೆ. ಒಂದು ಘಟಕವು ಇಂಗಾಲದ ಡೈ ಆಕ್ಸೈಡ್ ಅನ್ನು ಪರಿವರ್ತಿಸಿದರೆ ಇನ್ನೊಂದು ಘಟಕವು ಪ್ಲಾಸ್ಟಿಕ್ ಅನ್ನು ಇತರೆ ಉಪಯುಕ್ತ ಉತ್ಪನ್ನವಾಗಿ ಪರಿವರ್ತಿಸುತ್ತದೆ" ಎಂದು ಈ ಸಂಶೋಧನೆಯ ಒಬ್ಬ ಲೇಖಕರಾದ ಡಾ. ಮೋತಿಯಾರ್ ರಹಮಾನ್ ಎನ್.ಡಿ.ಟಿ.ವಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಡಾ. ರಹಮಾನ್ ಹೇಳುವಂತೆ ಈ ರಿಯಾಕ್ಟರ್ ಇಂಗಾಲ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿವರ್ತಿಸುವ ಮೂಲಕ ಸಿನ್ ಗ್ಯಾಸ್, ಫಾರ್ಮಿಕ್ ಆಸಿಡ್, ಗ್ಲೈಕೋಲಿಕ್ ಆಸಿಡ್ ಗಳಂತಹ ಉಪಯುಕ್ತ ಉತ್ಪನ್ನಗಳನ್ನು ಉತ್ಪಾದಿಸುತ್ತದೆ ಎಂದಾಗಿದೆ.
ಇದರಿಂದ ಪರಿವರತನೆಗೊಂಡು ಲಭಿಸುವ ಉತ್ಪನ್ನಗಳು ಅನೇಕ ಕೈಗಾರಿಕಾ ಉಪಯೋಗಗಳನ್ನು ಹೊಂದಿದೆ. ಸಿನ್ ಗ್ಯಾಸ್ ಅನ್ನು ದ್ರವ ರೂಪದ ಇಂಧನ ಉತ್ಪಾದಿಸಲು ಬಳಸಲಾಗುತ್ತದೆ. ಫಾರ್ಮಿಕ್ ಆಸಿಡ್ ಅನ್ನು ಚರ್ಮ ಹಾಗೂ ಜವಳಿ ಉದ್ಯಮದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇನ್ನು ಗ್ಲೈಕೋಲಿಕ್ ಆಸಿಡ್ ಅನ್ನು ಫಾರ್ಮಾದಲ್ಲಿ ಅದರಲ್ಲೂ ವಿಶೇಷವಾಗಿ ಚರ್ಮದ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.
ಸಾಮಾನ್ಯವಾಗಿ ಈ ಹಿಂದೆ ತಿಳಿಸಲಾಗಿರುವ ಪ್ರಯೋಜನಕರಿ ಉತ್ಪನ್ನಗಳನ್ನು ಪ್ರಸ್ತುತ ಇಂಗಾಲವನ್ನು ತಗ್ಗಿಸುವ ಪ್ರಕ್ರಿಯೆ ಮೂಲಕ ಉತ್ಪಾದಿಸಲಾಗುತ್ತದೆ. ಆದರೆ, ರಿಯಾಕ್ಟರ್ ಮೂಲಕ ಈ ಉತ್ಪನ್ನಗಳನ್ನು ಸಾಂಪ್ರದಾಯಿಕವಾಗಿ ಉತ್ಪಾದಿಸಲಾಗುವ ದರಕ್ಕಿಂತ ಹೆಚ್ಚಿನ ದರದಲ್ಲಿ ಉತ್ಪಾದಿಸಲಾಗಿರುವುದಾಗಿ ಕೆಂಬ್ರಿಜ್ ವಿವಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಡಾ. ರಹಮಾನಿ ಅವರ ಪ್ರಕಾರ, ಈ ರಿಯಾಕ್ಟರ್ ನಲ್ಲಿರುವ ಫೊಟೊಎಲೆಕ್ಟ್ರೋಡ್ ಗಳು ಇದರ ಅತಿ ಮುಖ್ಯ ಘಟಕವಾಗಿದೆ. ಏಕೆಂದರೆ ಈ ಎಲೆಕ್ಟ್ರೋಡ್ ಗಳು ತ್ಯಾಜ್ಯವನ್ನು ಪರಿವರ್ತಿಸುವಂತಹ ಕ್ಷಮತೆಯುಳ್ಳ ಕ್ಯಾಟಾಲಿಸ್ಟ್ ಪದಾರ್ಥಗಳನ್ನು ಹೊಂದಿರುತ್ತದೆ. ಈ ಕ್ಯಾಟಾಲಿಸ್ಟ್ ಗಳು ರಾಸಾಯನಿಕ ಪ್ರಕ್ರಿಯೆಗಳು ವೇಗವಾಗಿ ಜರುಗುವಂತೆ ಮಾಡುತ್ತವೆ. ಮುಖ್ಯ ವಿಷಯವೆಂದರೆ ಅವು ಒಟ್ಟಾರೆಯಾಗಿ ಹೊಸ ಉತ್ಪನ್ನವನ್ನೇ ಸೃಷ್ಟಿ ಮಾಡಬಹುದಾಗಿದೆ ಎಂಬುದು ಗಮನದಲ್ಲಿರಿಸಬೇಕು.
ಈ ಸಂಶೋಧನೆಯಿಂದ ಸಾಕಷ್ಟು ಪ್ರಭಾವಿತರಾಗಿರುವ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಇನ್ನಷ್ಟು ನಾವೀನ್ಯತೆಯನ್ನು ಸಾಧಿಸುವ ಕೆಲಸಕ್ಕೀಗ ಕೈಹಾಕಿದ್ದಾರೆ. "ಪ್ರಸ್ತುತ ನಾವು ಇಂಗಾಲವಿರುವ ಸರಳ ವಸ್ತುಗಳನ್ನು ಮಾಡುತ್ತಿದ್ದು ಭವಿಷ್ಯದಲ್ಲಿ ಅತಿ ಸಂಕೀರ್ಣ ಪದಾರ್ಥಗಳನ್ನೂ ಸಹ ಬಳಸಿ ಕೇವಲ ಕ್ಯಾಟಾಲಿಸ್ಟ್ ಅನ್ನು ಬದಲಾಯಿಸುವ ಮೂಲಕ ಉಪಯುಕ್ತ ಉತ್ಪನ್ನಗಳನ್ನು ಉತ್ಪಾದಿಸುವ ಬಗ್ಗೆ ಕೆಲಸ ಮಾಡಬಹುದಾಗಿದೆ" ಎಂದು ಇನ್ನೊಬ್ಬ ಭಾರತೀಯ ವಿಜ್ಞಾನಿ ಹಾಗೂ ಸಂಶೋಧನೆಯ ಲೇಖಕರಾದ ಸುಭಜೀತ್ ಭಟ್ಟಾಚಾರ್ಜೀ ಅವರು ತಿಳಿಸುತ್ತಾರೆ.
ಜಾಗತಿಕ ಪರಿಸರ ಸಮಸ್ಯೆಗೆ ಇದು ರಾಮಬಾಣವಾಗಬಹುದೇ?
ಇದೀಗ ಪರಿಸರ ಸಮಸ್ಯೆ ಎಂಬುದು ಜಾಗತಿಕ ಬಿಕ್ಕಟ್ಟಾಗಿದೆ. ಇದರ ವಿರುದ್ಧ ಹೋರಾಡಲು ಅಭಿವೃದ್ಧಿಗೊಳ್ಳುತ್ತಿರುವ ದೇಶಗಳು ಸಾಕಷ್ಟು ಕಷ್ಟಪಡುತ್ತಿವೆ. ಇಂತಹ ಸಂದರ್ಭದಲ್ಲಿ ಈ ಪರಿಣಾಮಕಾರಿ ಆವಿಷ್ಕಾರ ಒಂದು ರಾಮಬಾಣವಾಗಿ ಬದಲಾಗಬಹುದಾಗಿದ್ದು ಇದೇ ಆಶಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.
ಸೌರಶಕ್ತಿ ಚಾಲಿತ ಈ ತಂತ್ರಜ್ಞಾನವು ಏಕಕಾಲದಲ್ಲೇ ಎರಡು ದೊಡ್ಡ ಸಮಸ್ಯೆಗಳಾದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಹಸಿರು ಮನೆ ಅನಿಲದಂತಹ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಸೂತ್ರವಾಗಬಹುದಾಗಿದ್ದು ಈ ನಿಟ್ಟಿನಲ್ಲಿ ದೊಡ್ಡ ಬದಲಾವಣೆಯನ್ನೇ ತರಬಹುದು ಎಂದು ಸುಭಜೀತ್ ಭಟ್ಟಾಚಾರ್ಜೀ ತಿಳಿಸುತ್ತಾರೆ.
ಏನಿದು ಹಸಿರುಮನೆ ಅನಿಲ
ಸರಳವಾಗಿ ವ್ಯಾಖ್ಯಾನಿಸುವುದಾದರೆ ಇದು ಇಂಗಾಲದ ಡೈ ಆಕ್ಸೈಡ್ ಆಗಿದ್ದು ಸೂರ್ಯನ ಶಾಖವನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಜಾಗತಿಕವಾಗಿ ತಾಪಮಾದಲ್ಲಿ ಏರಿಕೆಯಾಗಿ ಅದು ಪರಿಸರದ ಮೇಲೆ ವ್ಯತಿರಿಕ್ತ ಪ್ರಭಾವವನ್ನು ಬೀರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ