New Traffic Rules - ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಮಾನ ಹರಾಜು ಮಾಡುತ್ತೆ ಸರ್ಕಾರ
ಪದೇ ಪದೇ ಟ್ರಾಫಿಕ್ ನಿಯಮ ಉಲ್ಲಂಘಿಸಿ ಡಿಎಲ್ ಸೀಜ್ ಆದ ವ್ಯಕ್ತಿಗಳ ಹೆಸರನ್ನು ಸಾರಿಗೆ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಇಂಥ ವ್ಯಕ್ತಿಗಳ ಪಟ್ಟಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರಲಿದೆ. ವಾಹನ ಚಾಲನೆಯಲ್ಲಿ ಶಿಸ್ತು ತರಲು ಇಂಥ ಕ್ರಮ ಕೈಗೊಳ್ಳಲಾಗುತ್ತಿದೆ.
ನವದೆಹಲಿ: ಹೊಸ ಮೋಟಾರು ವಾಹನ ಕಾಯ್ದೆ ಪ್ರಕಾರ ಟ್ರಾಫಿಕ್ ನಿಯಮಾವಳಿಗಳ ಸಣ್ಣ ಉಲ್ಲಂಘನೆಯಾದರೂ ದೊಡ್ಡ ಬೆಲೆ ತೆರಬೇಕಾಗುತ್ತದೆ. ಕನಿಷ್ಠ ದಂಡವೇ 500 ರೂ ಇದೆ. ಕುಡಿದು ವಾಹನ ಚಲಾಯಿಸಿದರೆ ನಿನ್ನ ತಿಂಗಳ ಸಂಬಳದ ಮೊತ್ತವನ್ನೇ ಕೊಡಬೇಕಾದೀತು. ಈಗ ಇದಕ್ಕಿಂತಲೂ ಮೀರಿದ ಶಿಕ್ಷೆಯೊಂದಿದೆ. ನೀವು ಬಾರಿ ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದೇ ಆದಲ್ಲಿ ಸರ್ಕಾರ ನಿಮ್ಮ ಮಾನ ಹರಾಜು ಹಾಕಲು ಸಿದ್ಧವಿದೆ. ವೇಗದ ವಾಹನ ಚಾಲನೆ, ಡ್ರಂಕ್ ಅಂಡ್ ಡ್ರೈವಿಂಗ್, ರೇಸಿಂಗ್ ಇತ್ಯಾದಿ ಅಪಾಯಕಾರಿ ಡ್ರೈವಿಂಗ್ ಮೂಲಕ ಹಲವು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ಹೆಸರುಗಳ ಪಟ್ಟಿಯನ್ನು ಸಾರಿಗೆ ಇಲಾಖೆಯ ಪೋರ್ಟಲ್ಗಳಲ್ಲಿ ಹಾಕಲಾಗುತ್ತದಂತೆ. ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಿ ಸಿಕ್ಕಿಬೀಳುವವರಿಗೂ ಇದೇ ಗತಿಯೇ.
ಟ್ರಾಫಿಕ್ ನಿಯಮಗಳ ಭಂಜಕರನ್ನು ಈ ರೀತಿ ಸಾರ್ವಜನಿಕವಾಗಿ ಹೆಸರಿಸಿ ಮಾನ ಹರಾಜು ಹಾಕುವ ಅಂಶವನ್ನು ಕೇಂದ್ರೀಯ ಮೋಟಾರು ವಾಹನ ಕಾಯ್ದೆಯ ಹೊಸ ತಿದ್ದುಪಡಿಯಲ್ಲಿ ಸೇರಿಸಲಾಗಿದೆ. ಇದು ಜವಾಬ್ದಾರಿಯುತ ವಾಹನ ಚಾಲನೆಗೆ ಪ್ರೋತ್ಸಾಹ ನೀಡಲು ಇಂಥದ್ದೊಂದು ಕಾನೂನು ರೂಪಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯೊಂದರಲ್ಲಿ ತಿಳಿಸಲಾಗಿದೆ.
ಆದರೆ, ಸಾರ್ವಜನಿಕವಾಗಿ ಹೆಸರಿಸುವ ಈ ಕ್ರಮವನ್ನು ಏಕಾಏಕಿ ಕೈಗೊಳ್ಳಲಾಗುವುದಿಲ್ಲ. ಟ್ರಾಫಿಕ್ ನಿಯಮ ಉಲ್ಲಂಘನೆಗಳಾಗಿ ಡಿಎಲ್ ಅನ್ನು ರದ್ದುಗೊಳಿಸಿದ ಒಂದು ತಿಂಗಳೊಳಗಾಗಿ ವ್ಯಕ್ತಿ ಮನವಿ ಸಲ್ಲಿಸದಿದ್ದರೆ, ಅಥವಾ ಅಂಥ ಮನವಿಯನ್ನು ಸಂಬಂಧಿತ ಪ್ರಾಧಿಕಾರದಿಂದ ತಿರಸ್ಕೃತವಾಗಿದ್ದರೆ ಮಾತ್ರ ಆತನ ಹೆಸರನ್ನು ವೆಬ್ಸೈಟ್ಗಳಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ.
ಸಾರಿಗೆ ಇಲಾಖೆಯ ಪೋರ್ಟಲ್ಗಳಲ್ಲಿ “Revocation of Driving License under subsection (1A) of section 19 of the Act” ಎಂದು ಪ್ರತ್ಯೇಕವಾದ ಸೆಕ್ಷನ್ ರಚಿಸಲಾಗಲಿದ್ದು, ಅದರಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ಡ್ರೈವಿಂಗ್ ಲೈಸೆನ್ಸ್ ರದ್ದುಗೊಂಡ ವ್ಯಕ್ತಿಗಳ ಪಟ್ಟಿ ಈ ಸೆಕ್ಷನ್ನಲ್ಲಿ ಪ್ರಕಟಿತವಾಗಲಿದೆ. ಇದು ಪಿಡಿಎಫ್ ರೂಪದಲ್ಲೂ ಸಾರ್ವಜನಿಕರಿಗೆ ಲಭ್ಯವಿರುತ್ತದೆ.
ಮೋಟಾರು ವಾಹನ ನಿಯಮದಲ್ಲಿ ಆಗಿರುವ ಮಾರ್ಪಾಡು ಇದೊಂದೇ ಅಲ್ಲ. ಎಲ್ಎಲ್ (ಕಲಿಕಾ ಪರವಾನಗಿ) ಗೆ ಅರ್ಜಿ ಸಲ್ಲಿಸಲು ಮತ್ತು ಪಡೆಯಲು ಹಾಗೂ ಡಿಎಲ್ (ಡ್ರೈವಿಂಗ್ ಲೈಸೆನ್ಸ್) ರಿನಿವಲ್ ಮಾಡಲು, ಡಿಎಲ್ ವಾಪಸ್ ಕೊಡಲು, ಮೆಡಿಕಲ್ ಸರ್ಟಿಫಿಕೇಟ್ ಸಲ್ಲಿಸಲು ಇತ್ಯಾದಿ ಸೇವೆಗಳು ಇದೀಗ ಆನ್ಲೈನ್ನಲ್ಲೇ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.
ಹಾಗೆಯೇ, ಕಮರ್ಷಿಯಲ್ ವಾಹನಗಳಿಗೆ ಡಿಎಲ್ ಪಡೆಯಲು ಕನಿಷ್ಠ ಶಿಕ್ಷಣ ಅರ್ಹತೆಯ ಮಾನದಂಡವನ್ನು ರದ್ದುಗೊಳಿಸಲಾಗಿದ್ದು, ಅದರ ಬದಲು ಕನಿಷ್ಠ ತರಬೇತಿ ಮತ್ತು ಭಾಷಾ ಗ್ರಹಿಕೆ ಅಗತ್ಯ ಎಂಬ ಅಂಶವನ್ನು ಸೇರಿಸಲಾಗಿದೆ. ಮತ್ತೊಂದು ಗಮನಾರ್ಹ ಬದಲಾವಣೆ ಎಂದರೆ ವಾಹನದ ನೊಂದಣಿಗೆ ಆರ್ಟಿಒಗೆ ತೆಗೆದುಕೊಂಡು ಹೋಗುವ ಅಗತ್ಯ ಇರುವುದಿಲ್ಲ. ವಾಹನಗಳ ಡೀಲರ್ಗಳ ಕೇಂದ್ರದಲ್ಲೇ ವಾಹನ ನೊಂದಣಿ ಇರಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಲಾಗಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ