ಮುಂಬೈ (ಫೆಬ್ರವರಿ 09); ಕೇಂದ್ರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ 75 ದಿನಗಳಿಂದ ದೆಹಲಿ ಹೊರ ವಲಯದಲ್ಲಿ ಹೋರಾಟದಲ್ಲಿ ನಿರತರಾಗಿದ್ದಾರೆ. ಆದರೆ, ಈ ಹೋರಾಟವನ್ನೇ ಹೀಗೆಳೆದಿರುವ ನಟಿ ಕಂಗನಾ ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು ಎಂದು ಹಂಗಸಿ ಟ್ವೀಟ್ ಮಾಡಿದ್ದರು. ಅವರ ಟ್ವೀಟ್ಗೆ ದೇಶದಾದ್ಯಂತ ಕಟು ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ, ಸಮಾಜದಲ್ಲಿ ದ್ವೇಷವನ್ನು ಹರಡುವ ಅವರ ಟ್ವಿಟರ್ ಖಾತೆಯನ್ನೇ ನಿಷೇಧಿಸಬೇಕು ಎಂದು ಹಲವರು ಬಾಂಬೆಎ ಹೈಕೊರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಹೀಗಾಗಿ ಬಾಂಬೆ ಹೈಕೋರ್ಟ್ ಈ ಅರ್ಜಿಯನ್ನು ಮಾರ್ಚ್ 09 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಬಾಂಬೆ ಹೈಕೋರ್ಟ್ಗೆ ಸ್ಥಳೀಯ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಈ ಅರ್ಜಿಯಲ್ಲಿ "ರೈತರು ಭಯೋತ್ಪಾದಕರು, ಭಾರತವನ್ನು ವಿಭಜಿಸುತ್ತಿದ್ದಾರೆ, ಚೀನಾದಿಂದ ಪ್ರೇರಿತರಾಗಿದ್ದಾರೆ ಎಂದು ನಟಿ ಎಗ್ಗಿಲ್ಲದೆ ಟ್ವೀಟ್ ಮಾಡಿದ್ದಾರೆ. ಈ ಕುರಿತು 2020ರ ಡಿಸೆಂಬರ್‌ನಲ್ಲಿಯೇ ದೂರು ದಾಖಲಿಸಲಾಗಿದೆ. ಆದರೂ ಅವರು ರೈತರನ್ನು ಹಣಿಯುವ ತಮ್ಮ ಪ್ರವೃತ್ತಿಯನ್ನು ನಿಲ್ಲಿಸಿಲ್ಲ. ಹಾಗಾಗಿ ಕೂಡಲೇ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಬೇಕು" ಎಂದು ಒತ್ತಾಯಿಸಿದ್ದಾರೆ.
ವಕೀಲರಾದ ಅಲಿ ಕಾಶಿಫ್ ದೇಶ್ಮುಖ್‌ರವರು ಸಲ್ಲಿಸರುವ ಅರ್ಜಿಯನ್ನು ಜಸ್ಟಿಸ್ ಎಸ್ಎಸ್ ಶಿಂಧೆ ಮತ್ತು ಮನಿಶ್ ಪಿತಾಲೆ ಅವರ ಪೀಠವು ಆಲಿಸುತ್ತಿದ್ದು, ಮುಂದಿನ ವಾದಕ್ಕಾಗಿ ಮಾರ್ಚ್ 09ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕೋರ್ಟ್ ವಿಚಾರಣೆಗೆ ಅನುಮತಿ ನೀಡಿದೆ. ಆದರೆ ನನ್ನ ಅರ್ಜಿಯನ್ನು ರಿಟ್ ಆಗಿ ಪರಿಗಣಿಸಿದೆಯೇ ಅಥವಾ ಪಿಐಎಲ್ ಆಗಿ ಪರಿಗಣಿಸಿದೆಯೇ ಗೊತ್ತಿಲ್ಲ ಎಂದು ಅಲಿ ಕಾಶಿಫ್ ದೇಶ್ಮುಖ್ ತಿಳಿಸಿದ್ದಾರೆ. ಕಂಗನಾ ರಾಣಾವತ್ ನನಗೆ ಮಾತ್ರವಲ್ಲದೆ ಇಡೀ ನನ್ನ ಸಮುದಾಯಕ್ಕೆ ಅವಮಾನವಾಗುವಂತೆ ಸಂದೇಶ ಕಳಿಸಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿದ್ದಾರೆ.
ಕಂಗನಾ ಸಹೋದರಿ ರಂಗೋಲಿ ಚಾಂಡೆಲ್ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷ ಹರಡುವ ಮತ್ತು ಸಾಮರಸ್ಯ ಕದಡುವ ಸಂದೇಶಗಳನ್ನು ಕಳಿಸಿದ್ದರು. ಹಾಗಾಗಿ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ಕಂಗನಾ ಖಾತೆಯನ್ನು ಸಹ ಅಮಾನತು ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಪೋಸ್ಟ್ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೇಲ್ ವಿರುದ್ಧ ನಡೆಯುತ್ತಿರುವ ತನಿಖೆಯ ವರದಿ ಸಲ್ಲಿಸುವಂತೆ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ