ಇತ್ತೀಚೆಗೆ ಬಾಂಬೆ ಹೈಕೋರ್ಟಿನ (Bombay Highcourt) ಗೋವಾ ಪೀಠವು ಕುಟುಂಬದಾಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆ ಕುಟುಂಬಕ್ಕೆ ಸೇರಿದ ಮಗಳ ಹಕ್ಕನ್ನು ಎತ್ತಿ ಹಿಡಿಯುವಂತಹ ತೀರ್ಪನ್ನು ನೀಡಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು ಮದುವೆಯಲ್ಲಿ ವರದಕ್ಷಿಣೆ (Dowry) ಕೊಟ್ಟಾಗಿದೆ ಎಂದ ಮಾತ್ರಕ್ಕೆ ಕುಟುಂಬದಾಸ್ತಿಯಲ್ಲಿ ಮಗಳಾದವಳು ತನ್ನ ಹಕ್ಕನ್ನು ಕಳೆದುಕೊಳ್ಳಲಾರಳು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಸಹೋದರರು ತಮ್ಮ ಸಹೋದರಿಯ ಅಪ್ಪಣೆಯಿಲ್ಲದೆ ಮಾಡಿದ ಆಸ್ತಿಯ ವರ್ಗಾವಣೆ ಪತ್ರವನ್ನು ನ್ಯಾಯಾಧೀಶ. ಎಂಎಸ್ ಸೋನಕ್ (M.S. Sonak) ಅವರು ರದ್ದುಗೊಳಿಸಿದ್ದಾರೆ.
ಕೋರ್ಟ್ ಈ ಸಂದರ್ಭದಲ್ಲಿ, ಹೆಣ್ಣು ಮಕ್ಕಳಾದವರಿಗೆ ಮದುವೆಯ ಸಂದರ್ಭದಲ್ಲಿ ಸಾಕಾಗುವಷ್ಟು ವರದಕ್ಷಿಣೆ ನೀಡಲಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ ಹಾಗೂ ಅವಿಭಕ್ತ ಕುಟುಂಬದ ಆಸ್ತಿಯನ್ನು ಸಹೋದರರು ಹೆಣ್ಣು ಮಕ್ಕಳನ್ನು ಹೊರಗಿಡುವ ಮೂಲಕ ಕಿತ್ತುಕೊಳ್ಳಲು ಪ್ರಯತ್ನಿಸಿರುವುದಾಗಿ ಕಂಡುಕೊಂಡಿದೆ.
ಕೋರ್ಟ್ನ ಹೇಳಿಕೆ
ಈ ಸಂದರ್ಭದಲ್ಲಿ ಕೋರ್ಟ್ ತನ್ನ ಹೇಳಿಕೆಯಲ್ಲಿ, "ದಾಖಲೆಯಲ್ಲಿರುವ ಪುರಾವೆಗಳಿಂದ ಅವಿಭಕ್ತ ಕುಟುಂಬದಾಸ್ತಿಯನ್ನು ಕಿತ್ತುಕೊಳ್ಳಲು ಸಹೋದರರು ಉದ್ದೇಶಪೂರ್ವಕವಾಗಿ ಕುಟುಂಬದ ಮಗಳನ್ನು ಹೊರಗಿಟ್ಟಿರುವುದು ಕಂಡುಬಂದಿದೆ. ಒಂದಕ್ಕಿಂತ ಹೆಚ್ಚು ಹೆಣ್ಣುಮಕ್ಕಳಿದ್ದ ಸಂದರ್ಭದಲ್ಲಿ ಹಾಗೂ ಅವರಲ್ಲಿ ಒಬ್ಬ ಹೆಣ್ಣು ಮಗಳು ಸಹಮತ ವ್ಯಕ್ತಪಡಿಸಿದ ಮಾತ್ರಕ್ಕೆ ಅದು ಕುಟುಂಬದ ಎಲ್ಲರ ಸಹಮತವನ್ನು ವ್ಯಕ್ತಪಡಿಸದು. ಅಲ್ಲದೆ ಮದುವೆಯಾದ ಮಗಳಿಗೆ ಸಾಕಷ್ಟು ಪ್ರಮಾಣದಲ್ಲಿ ವರದಕ್ಷಿಣೆ ನೀಡಲಾಗಿರುವ ಬಗ್ಗೆಯೂ ಯಾವುದೇ ಪುರಾವೆ ಇಲ್ಲ" ಎಂದಿದೆ.
ಇದನ್ನೂ ಓದಿ: Uttar Pradeshದಲ್ಲಿ ಶೇಕಡಾ 25ರಷ್ಟು ಮದ್ಯದ ಅಂಗಡಿಗಳು ಮಹಿಳೆಯರ ಪಾಲು!
ಈ ಪ್ರಕರಣದಲ್ಲಿ ಮೇಲ್ಮನವಿದಾರರಾದವರು ತಮ್ಮ ಪಾಲಕರ ಹಿರಿಯ ಮಗಳಾಗಿದ್ದು ಅವರಿಗೆ ಮೂರು ಸಹೋದರಿಯರು ಹಾಗೂ ನಾಲ್ಕು ಸಹೋದರರಿದ್ದಾರೆ. ಮೇಲ್ಮನವಿದಾರರ ತಂದೆ ತೀರಿದ ನಂತರ ಆಸ್ತಿ ವಿಭಜನೆಯನ್ನು ಮಾಡಲಾಯಿತು ಹಾಗೂ ಮೆಲ್ಮನವಿದಾರರನ್ನು ಅವರ ತಂದೆಯ ವಾರಸುದಾರರನ್ನಾಗಿ ಮಾಡಿ ಡೀಡ್ ಮಾಡಲಾಯಿತು.
ಇದಾದ ನಂತರ ಮೇಲ್ಮನವಿದಾರರ, ತಾಯಿ ಹಾಗೂ ಅವರ ಇಬ್ಬರು ಸಹೋದರರು ಜೊತೆಗೂಡಿ ಆಕೆಯ ಒಡೆತನದಲ್ಲಿದ್ದ ಅಂಗಡಿಯೊಂದನ್ನು ಮೇಲ್ಮನವಿದಾರರ ಅನುಮತಿಯಿಲ್ಲದೆಯೇ ಅವರ ಇನ್ನಿಬ್ಬರ ಸಹೋದರರಿಗೆ ವರ್ಗಾಯಿಸಲು ಆಸ್ತಿ ವರ್ಗಾವಣೆ ಪತ್ರವನ್ನು ಕೈಗೊಂಡರು. ಇದನ್ನು ಪ್ರಶ್ನಿಸಿ ಮೇಲ್ಮನವಿದಾರರು ಕೋರ್ಟ್ ಮೆಟ್ಟಿಲನ್ನು ಏರಿದ್ದರು.
ಮೇಲ್ಮನವಿದಾರರ ನಾಲ್ಕು ಸಹೋದರರು ಈ ಸಂದರ್ಭದಲ್ಲಿ ಕೋರ್ಟ್ ನಲ್ಲಿ, ಇರುವ ನಾಲ್ಕು ಜನ ಹೆಣ್ಣು ಮಕ್ಕಳಿಗೆ ಸಾಕಷ್ಟು ವರದಕ್ಷಿಣೆಯನ್ನು ನೀಡಲಾಗಿದ್ದು ಅವರೀಗ ಉತ್ತಮವಾಗಿ ನೆಲೆಸಿರುವುದಾಗಿ ವಾದಿಸಿದ್ದರು. ಅಲ್ಲದೆ, ಈಗ ಇರುವ ಅಂಗಡಿಯು ಪೂರ್ವಾಜಿತ ಆಸ್ತಿಯಾಗಿರದೆ ಮೂರು ಗಂಡು ಮಕ್ಕಳು ಹಾಗೂ ಅವರ ತಂದೆಯವರ ಪಾಲುದಾರಿಕೆಯಲ್ಲಿ ಸ್ಥಾಪಿಸಿರುವುದಾಗಿದೆ ಎಂದೂ ಸಹ ಮಂಡಿಸಿದ್ದರು. ಅದಾಗ್ಯೂ ಅವರು ಆಸ್ತಿ ವಿಭಜನಾ ಪತ್ರದ ಮೇಲೂ ಸವಾಲು ಹಾಕಿದ್ದರು.
ಟ್ರಯಲ್ ಕೋರ್ಟ್ ಈ ಪ್ರಕರಣದಲ್ಲಿ ಮೇಲ್ಮನವಿದಾರರ ಅರ್ಜಿಯನ್ನು ತಳ್ಳಿ ಹಾಕಿತ್ತು ಹಾಗೂ ಕೌಂಟರ್ ಕ್ಲೈಮ್ ಅನ್ನು ಭಾಹಶಃ ಮಾನ್ಯ ಮಾಡಿ ಆಸ್ತಿ ವಿಭಾಜನೆಯನ್ನು ರದ್ದುಗೊಳಿಸಿತ್ತು. ಆದರೆ, ಹೈಕೋರ್ಟ್ ಮತ್ತೆ ಆಸ್ತಿ ವಿಭಜನೆಯನ್ನು ಎತ್ತಿಹಿಡಿದಿದೆ.
ಒಟ್ಟಾರೆ ಈ ದಾವೆಯನ್ನು ಆಸ್ತಿ ವರ್ಗಾವಣೆಯಾದ ನಾಲ್ಕು ವರ್ಷಗಳ ನಂತರ ಹಾಕಲಾಗಿತ್ತು ಹಾಗೂ ಈ ಬಗ್ಗೆ ಮೇಲ್ಮನವಿದಾರರು ಕೋರ್ಟಿಗೆ ತಮಗೆ ಈ ಆಸ್ತಿ ವರ್ಗಾವಣೆಯಾದ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ ಹಾಗೂ ಕೇವಲ ಆರು ವಾರಗಳ ಹಿಂದಷ್ಟೆ ಈ ಬಗ್ಗೆ ತಿಳಿದುಬಂದಿರುವುದಾಗಿ ಹೇಳಿದ್ದರು.
ಕೋರ್ಟ್ ಈ ವಿಷಯದಲ್ಲಿ ಮೇಲ್ಮನವಿದಾರರಿಗೆ ಮೂರು ವರ್ಷಗಳ ಹಿಂದೆಯೇ ಆಸ್ತಿ ವರ್ಗಾವಣೆಯಾಗುತ್ತಿದ್ದುದರ ಬಗ್ಗೆ ಅರಿವಿತ್ತು ಎಂಬುದಕ್ಕೆ ಯಾವುದೇ ಪುರಾವೆ ಕಂಡುಬಂದಿಲ್ಲ ಎಂದು ಹೇಳಿದೆ ಹಾಗೂ ಈ ಬಗ್ಗೆ ಮೇಲ್ಮನವಿದಾರರಿಗೆ ಮೊದಲೆ ತಿಳಿದಿತ್ತು ಎಂಬುದನ್ನು ಪ್ರತಿವಾದಿಗಳು ಸಾಬೀತುಪಡಿಸಬೇಕಾಗಿತ್ತು. ಪೋರ್ಚ್ಯುಗೀಸ್ ಸಿವಿಲ್ ಕೋಡ್ ಆರ್ಟಿಕಲ್ 1565 ಆಕ್ಟ್ ಪ್ರಕಾರ, ತಾಯಿಯಾದವಳು ತನ್ನ ಆಸ್ತಿಯ ಪಾಲನ್ನು ತನ್ನ ಇಬ್ಬರು ಮಕ್ಕಳಿಗೆ ಮಿಕ್ಕ ಮಗ ಹಾಗೂ ಮಗಳ ಅನುಮತಿಯಿಲ್ಲದೆ ವರ್ಗಾಯಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಅಲ್ಲದೆ, ಆರ್ಟಿಕಲ್ 2177 ಪ್ರಕಾರ, ಆಸ್ತಿಯ ಸಹ ಮಾಲಿಕರು ಸಾಮೂಹಿಕ ಆಸ್ತಿಯ ಯಾವುದೇ ಭಾಗವನ್ನು ಅವರ ಹೆಸರಿಗೆ ನಿಶ್ಚಿತವಾಗಿ ಬರದ ಹೊರತು ಅದನ್ನು ಮಾರುವಂತಿಲ್ಲ. ಹಾಗಾಗಿ ಈ ಅಂಶಗಳನ್ನು ಪರಿಗಣಿಸಿ ಕೋರ್ಟ್ ಸಹೋದರರಿಗೆ ಮಾಡಲಾದ ಆಸ್ತಿ ವರ್ಗಾವಣೆಯನ್ನು ಅಮಾನ್ಯವೆಂದು ತೀರ್ಪಿತ್ತಿದೆ. ಅಲ್ಲದೆ ಕೋರ್ಟ್, ಮೇಲ್ಮನವಿದಾರರು ಅಂಗಡಿಯ ಮೂಲ ಹಕ್ಕುದಾರರಾಗಿದ್ದು ಸಹೋದರರನ್ನು ಆ ಆಸ್ತಿಯ ಬಾಧ್ಯಸ್ಥರಲ್ಲವೆಂದು ಹೇಳಿದೆ ಹಾಗೂ ಅವರು ಮೇಲ್ಮನವಿದಾರರ ಅನುಮತಿ ಹಾಗೂ ಆಸ್ತಿಯ ಇತರೆ ಸಹ ಮಾಲಿಕರ ಅನುಮತಿ ಇಲ್ಲದೆ ಅದರ ವೊಲೇವಾರಿಯನ್ನು ಮಾಡಲು ಸಾದ್ಯವಿಲ್ಲ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ