ಮಹಾರಾಷ್ಟ್ರ ಗೃಹ ಸಚಿವರ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ಇಂದು ಬಾಂಬೆ ಹೈಕೋರ್ಟ್​ನಲ್ಲಿ

ಅನಿಲ್ ದೇಶಮುಖ್ ವಿರುದ್ಧ ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರು ನೂರು ಕೋಟಿ ರೂ ಭ್ರಷ್ಟಾಚಾರ ಆರೋಪ ಮಾಡಿರುವ ಪ್ರಕರಣದ ವಿಚಾರಣೆ ಇಂದು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ನಡೆಯಲಿದೆ.

ಅನಿಲ್ ದೇಶಮುಖ್

ಅನಿಲ್ ದೇಶಮುಖ್

  • News18
  • Last Updated :
  • Share this:
ಮುಂಬೈ(ಮಾ. 31): ಹೊಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಂದ ತಿಂಗಳಿಗೆ 100 ಕೋಟಿ ರೂಪಾಯಿ ವಸೂಲಿ ಮಾಡಿಕೊಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಮಹಾರಾಷ್ಟ್ರದ ಗೃಹ ಸಚಿವ‌ ಅನಿಲ್ ದೇಶಮುಖ್ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಿನ‌ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಎಂಟು ಪುಟಗಳ ಪತ್ರ ಬರೆದಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರಿಗೆ ಹಿನ್ನಡೆ ಆಗಿದೆ. ಸೂಕ್ತ ತನಿಖೆಗೆ ಆದೇಶ ನೀಡುವಂತೆ ಪರಂ‌ ಬೀರ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಬಾಂಬೆ ಹೈಕೋರ್ಟಿನಲ್ಲಿ ನಡೆಯಲಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಥವಾ ಎನ್​ಸಿಪಿ 100 ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆರೋಪ ಹೊತ್ತ ಅನಿಲ್ ದೇಶಮುಖ್ ಅವರಿಂದ ರಾಜೀನಾಮೆ ಪಡೆಯದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದ‌ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಅನಿಲ್ ದೇಶಮುಖ್ ವಿರುದ್ಧ ಸೂಕ್ತ ತನಿಖೆಗೆ ಆದೇಶ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಕಳೆದ ವಾರ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ತಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿತ್ತು. ಇಂದು ಬಾಂಬೆ ಹೈಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಇದನ್ನೂ ಓದಿ: Coronavirus Updates: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ-ಮನೆಗೆ ತೆರಳಿ ಲಸಿಕೆ ಹಾಕಲು ಮಹಾರಾಷ್ಟ್ರ ಸರ್ಕಾರ ಚಿಂತನೆ

ಪರಮ್ ಬೀರ್ ಸಿಂಗ್ ಅವರ ಆರೋಪದ ಮೇರೆಗೆ ಅನಿಲ್ ದೇಶ್ಮುಖ್ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಆಗ್ರಹ ಮಾಡಿದೆ. ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಿ ಕೂಡ ಒತ್ತಡ ಹೇರಿದೆ. ಈ ವಿಷಯ ಮಹಾರಾಷ್ಟ್ರದ ಎನ್​ಸಿಪಿ,‌ ಶಿವಸೇನೆ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ ಸರ್ಕಾರದ ಮಟ್ಟದಲ್ಲೂ ಸಂಚಲನ ಸೃಷ್ಟಿಸಿದೆ. ಎನ್​ಸಿಪಿಯ ಅಗ್ರ ನಾಯಕ ಶರದ್ ಯಾದವ್ ನೇತೃತ್ವದಲ್ಲಿ ಆ ಪಕ್ಷದ ಮುಖಂಡರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮಿತ್ರಪಕ್ಷಗಳ ಮಟ್ಟದಲ್ಲಿ ಸಮಾಲೋಚನೆ ಆಗಿದೆ. ಆದರೆ ಇಷ್ಟೆಲ್ಲವಾದರೂ ಅನಿಲ್ ದೇಶ್ಮುಖ್ ರಾಜೀನಾಮೆ ಮಾತ್ರ ಆಗಿಲ್ಲ. ಈ‌‌ ಹಿನ್ನೆಲೆಯಲ್ಲಿ ಪರಂ‌ ಬೀರ್ ಸಿಂಗ್ ಕೋರ್ಟ್ ಮೆಟ್ಟಿಲು ಏರಿದ್ದಾರೆ.

ಮೊದಲಿಗೆ ಎನ್​ಸಿಪಿ ನಾಯಕರು ಗೃಹ ಸಚಿವರ ಭ್ರಷ್ಟಾಚಾರದ ಪ್ರಕರಣದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತೀರ್ಮಾನ ಮಾಡಲಿ ಎಂದಿದ್ದರು. ಆನಂತರ ಅನಿಲ್ ದೇಶ್ಮುಖ್ ರಾಜೀನಾಮೆ ಅನಗತ್ಯ ಎಂದು ಪ್ರತಿಪಾದಿಸಿದ್ದರು. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಪ್ರಕರಣದ ತನಿಖೆ ಆಗಲಿ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯಾವುದೇ ನಿರ್ಧಾರ ಕೈಗೊಳ್ಳದೆ ಸಮಯ ದೂಡುತ್ತಿದ್ದಾರೆ. ಇಂದು ಬಾಂಬೆ ಹೈಕೋರ್ಟ್ ನೀಡುವ ಆದೇಶ ಗೃಹ ಸಚಿವ ಅನಿಲ್ ದೇಶ್ಮುಖ್ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ಣಾಯಕವಾಗುವ ಸಾಧ್ಯತೆ ಇದೆ.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: