CBI vs CBI | ಅಲೋಕ್ ವರ್ಮಾ ರಾಜೀನಾಮೆ; ರಾಕೇಶ್ ಅಸ್ತನಾ ವಿರುದ್ಧದ ತನಿಖೆಗೆ ತಡೆ ಇಲ್ಲ

ಕೇಂದ್ರ ವಿಚಕ್ಷಣ ದಳ ನೀಡಿದ ವರದಿಗೆ ಸಮರ್ಥನೆ ನೀಡಲು ಸಮಿತಿ ಅವಕಾಶ ನೀಡದೆಯೇ ನನ್ನನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವರ್ಗಾವಣೆ ಮಾಡಿದೆ ಎಂದು ಅಸಮಾಧಾನ ಹೊರಹಾಕಿ, ಪರ್ಸನಲ್ ಆ್ಯಂಡ್ ಟ್ರೈನಿಂಗ್ ವಿಭಾಗದ ಕಾರ್ಯದರ್ಶಿ ಸಿ.ಚಂದ್ರಮೌಳಿ ಅವರಿಗೆ ಅಲೋಕ್ ವರ್ಮಾ ಇಂದು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

HR Ramesh | news18
Updated:January 11, 2019, 3:52 PM IST
CBI vs CBI | ಅಲೋಕ್ ವರ್ಮಾ ರಾಜೀನಾಮೆ; ರಾಕೇಶ್ ಅಸ್ತನಾ ವಿರುದ್ಧದ ತನಿಖೆಗೆ ತಡೆ ಇಲ್ಲ
ಅಲೋಕ್ ವರ್ಮಾ ನೀಡಿರುವ ರಾಜೀನಾಮೆ ಪತ್ರ
HR Ramesh | news18
Updated: January 11, 2019, 3:52 PM IST
ನವದೆಹಲಿ: ಸಿಬಿಐನ ಆಂತರಿಕ ಬಿಕ್ಕಟ್ಟು ಸದ್ಯಕ್ಕೆ ಶಮನವಾಗುವಂತೆ ಕಾಣುತ್ತಿಲ್ಲ. ಸಿಬಿಐ ನಿರ್ದೇಶಕ ಸ್ಥಾನದಿಂದ ದೆಹಲಿ ಅಗ್ನಿ ಶಾಮಕ ದಳದ ಡಿಜಿಯಾಗಿ ವರ್ಗಾವಣೆಗೊಂಡಿದ್ದ ಅಲೋಕ್ ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ತಮ್ಮ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದು ಕೋರಿ ರಾಕೇಶ್ ಅಸ್ತನಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ರದ್ದು ಮಾಡಿದೆ.​

ಪ್ರಧಾನಿ ನೇತೃತ್ವದ ಉನ್ನತ ಸಮಿತಿಯಿಂದ ದೆಹಲಿ ಅಗ್ನಿ ಶಾಮಕ ದಳದ ಡಿಜಿಯಾಗಿ ವರ್ಗಾವಣೆಗೊಂಡಿದ್ದರಿಂದ ಅಸಮಾಧಾನಗೊಂಡಿದ್ದ ಅಲೋಕ್ ಕುಮಾರ್ ವರ್ಮಾ ಅವರು, ಕೇಂದ್ರ ವಿಚಕ್ಷಣ ದಳ ನೀಡಿದ ವರದಿಗೆ ಸಮರ್ಥನೆ ನೀಡಲು ಸಮಿತಿ ಅವಕಾಶ ನೀಡದೆಯೇ ನನ್ನನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವರ್ಗಾವಣೆ ಮಾಡಿದೆ. ಸಮಾನ ನ್ಯಾಯ ಎಂಬುದು ಕೆಟ್ಟುಹೋಗಿದೆ ಎಂದು ಅಸಮಾಧಾನ ಹೊರಹಾಕಿ, ಪರ್ಸನಲ್ ಆ್ಯಂಡ್ ಟ್ರೈನಿಂಗ್ ವಿಭಾಗದ ಕಾರ್ಯದರ್ಶಿ ಸಿ.ಚಂದ್ರಮೌಳಿ ಅವರಿಗೆ ಇಂದು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

ಅಕ್ಟೋಬರ್​ನಲ್ಲಿ ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿ, ಆ ಸ್ಥಾನಕ್ಕೆ ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ್ ರಾವ್ ಅವರನ್ನು ನೇಮಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ  ವರ್ಮಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೊರ್ಟ್ ಸರ್ಕಾರದ ನಿರ್ಧಾರ ತಪ್ಪು ಎಂದು ಹೇಳಿ, ಅಲೋಕ್ ವರ್ಮಾ ಅವರು ಸಿಬಿಐ ನಿರ್ದೇಶಕರಾಗಿ ಮುಂದುವರೆಯುವಂತೆ ಕಳೆದ ಮಂಗಳವಾರ ಆದೇಶ ನೀಡಿತ್ತು. ಆದರೆ, ಉನ್ನತಾಧಿಕಾರ ಸಮಿತಿಯ ಅಂತಿಮ ನಿರ್ಧಾರ ಬರುವವರೆಗೂ ಯಾವುದೇ ವಿಶೇಷ ಅಧಿಕಾರ ಇಲ್ಲದೆಯೇ ಪದವಿಯಲ್ಲಿ ಮುಂದುವರಿಯುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಆದೇಶ ಬಂದ ಮರುದಿನವೇ 77 ದಿನಗಳ ಬಳಿಕ ಸಿಬಿಐ ಕಚೇರಿಗೆ ಬಂದ ಅಲೋಕ್ ವರ್ಮಾ ಅವರು, ಹಂಗಾಮಿ ನಿರ್ದೇಶಕರು ಮಾಡಿದ್ದ ವರ್ಗಾವಣೆ ಆದೇಶಗಳೆಲ್ಲವನ್ನೂ ತಡೆ ಹಿಡಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಸಮಿತಿ ಗುರುವಾರ ಅಲೋಕ್ ವರ್ಮಾ ವಿರುದ್ಧ ಭ್ರಷ್ಟಾಚಾರ ಆರೋಪಗಳ ಸಂಬಂಧ ತನಿಖೆ ನಡೆಸಿದ್ದ ಕೇಂದ್ರ ವಿಚಕ್ಷಣ ದಳ ಸಲ್ಲಿಸಿದ್ದ ವರದಿಯ ಆಧಾರದ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ದೆಹಲಿ ಅಗ್ನಿ ಶಾಮಕ ದಳದ ಡಿಐಜಿಯಾಗಿ ವರ್ಗಾವಣೆ ಮಾಡಿ,  ನಾಗೇಶ್ವರ್ ರಾವ್ ಅವರನ್ನೇ ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿತು. ಕೇಂದ್ರ ಸರ್ಕಾರದ ವಿರುದ್ಧ ಇಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ವರ್ಮಾ ಅವರು ಮಧ್ಯಾಹ್ನದ ನಂತರ ರಾಜೀನಾಮೆ ನೀಡಿದ್ದಾರೆ.

ಇದನ್ನು ಓದಿ: ಸಿಬಿಐ ಉಳಿಸಲು ಹೋರಾಡಿದ್ದಕ್ಕೆ ಮೋದಿ ಸರ್ಕಾರ ನನ್ನನ್ನು ಬಲಿಪಶು ಮಾಡಿದೆ -ಅಲೋಕ್ ವರ್ಮಾ

ರಾಕೇಶ್ ಅಸ್ತನಾ ಅರ್ಜಿ ವಜಾ

ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತನಾ, ಡಿಎಸ್​ಪಿ ದೇವೇಂದ್ರ ಕುಮಾರ್ ಸೇರಿ ಇತರರ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್​ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ​ ಶುಕ್ರವಾರ ವಜಾಗೊಳಿಸಿ, 10 ವಾರದೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಸಿಬಿಐಗೆ ಸೂಚಿಸಿದೆ.
Loading...

ಸರ್ಕಾರದ ಅನುಮತಿ ಪಡೆಯದೆ ಅಲೋಕ್ ವರ್ಮಾ ಆಜ್ಞೆ ಮೇರೆಗೆ ದಾಖಲಿಸಲಾಗಿರುವ ಎಫ್​ಐಆರ್​ ಅನ್ನು ರದ್ದುಗೊಳಿಸಬೇಕು ಎಂಬ ರಾಕೇಶ್ ಅಸ್ತನಾ ನಿಲುವನ್ನು ತಿರಸ್ಕರಿಸಿದ ನ್ಯಾಯಾಲಯ ಅಪರಾಧ ಕಂಡು ಬಂದರೆ ತನಿಖೆ ನಡೆಯಲೇಬೇಕು ಎಂದು ಹೇಳಿತು.
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ