ಸಭೆ ಸಮಾರಂಭಗಳು ಹಾಗೂ ವಿವಾಹ ವೇದಿಕೆಗಳನ್ನು ಸಿಂಗರಿಸಲು ಬಳಸುವ ಕೆಂಪು ಗುಲಾಬಿ ಹಾಗೂ ಬಹು ವರ್ಣದ ಗುಲಾಬಿಗಳಿಗೆ ಬೇಡಿಕೆ ಹೆಚ್ಚಿದ್ದು, ಗುಲಾಬಿಗಳ (Rose) ಅಗ್ರ ಉತ್ಪಾದಕ ಎಂದೆನಿಸಿರುವ ಕರ್ನಾಟಕವು 2018 ರ 76,910 ಟನ್ ಹೂವುಗಳ ಉತ್ಪಾದನೆಗೆ ಹೋಲಿಸಿದರೆ 2022 ರಲ್ಲಿ ಉತ್ಪಾದನೆಯನ್ನು ದುಪ್ಪಟ್ಟಾಗಿಸಿದೆ ಎಂದು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು(Export) ಅಭಿವೃದ್ಧಿ ಪ್ರಾಧಿಕಾರ (APEDA) ವರದಿ ಮಾಡಿದೆ. ಇನ್ನು ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಸೇವಂತಿಗೆ ಹೂವಿನ ಉತ್ಪಾದನೆಯು ಸುಮಾರು ದ್ವಿಗುಣಗೊಂಡಿದೆ. ಕ್ರೈಸಾಂಥೆಮಮ್‌ಗಳು ಮತ್ತು ತಿಳಿ ಬಣ್ಣದ ಗುಲಾಬಿಗಳಿಗೆ ಉತ್ತಮ ಬೇಡಿಕೆ ಇದ್ದು ವಿವಾಹ ಸಮಾರಂಭಗಳಲ್ಲಿನ ಅಲಂಕಾರಕ್ಕಾಗಿ ಈ ಗುಲಾಬಿ ಹೂವುಗಳು ಹೆಚ್ಚು ಬಳಕೆಯಾಗುವುದರಿಂದ ಗುಲಾಬಿಗೆ ಮಾನ್ಯತೆ ದೊರಕಿದೆ ಎಂದು ಗುಲಾಬಿ ಬೆಳೆಗಾರರು ತಿಳಿಸಿದ್ದಾರೆ.
ಯಾವ ಬಣ್ಣದ ಗುಲಾಬಿಗೆ ಬೇಡಿಕೆ ಹೆಚ್ಚು
ಕಳೆದ ನಾಲ್ಕೈದು ವರ್ಷಗಳಲ್ಲಿ ತಿಳಿಬಣ್ಣದ ಗುಲಾಬಿಗಳಿಗೆ ಬೇಡಿಕೆ ಇನ್ನಿಲ್ಲದಂತೆ ಹೆಚ್ಚಿದ್ದು ಖ್ಯಾತಿಯಾಗಿವೆ. ಚಳಿಗಾಲದಲ್ಲಿ ಬಿಳಿ ಗುಲಾಬಿಗೆ ಉತ್ತಮ ಬೇಡಿಕೆ ಇದೆ ಎಂದು ಎಂದು ಗುಲಾಬಿ ಬೆಳೆಗಾರ ಮತ್ತು ರಫ್ತುದಾರರಾದ ಪಿ ಜಗನಾಥರಾಜು ತಿಳಿಸಿದ್ದಾರೆ. ಜನವರಿ ಹಾಗೂ ಏಪ್ರಿಲ್ ತಿಂಗಳಲ್ಲಿ ಗುಲಾಬಿ ಹೂವುಗಳಿಗಿರುವ ಬೇಡಿಕೆ ಐದು ಪಟ್ಟು ಹೆಚ್ಚಾಗುತ್ತದೆ ಎಂದು ಜಗನಾಥರಾಜು ಮಾಹಿತಿ ನೀಡಿದ್ದಾರೆ.
ಪ್ರೇಮಿಗಳ ದಿನದಂದು ಹೆಚ್ಚು ಮಾರಾಟ
ಅಂತಾರಾಷ್ಟ್ರೀಯ ಹೂವಿನ ಹರಾಜು ಪ್ರಕ್ರಿಯೆಯಲ್ಲಿ ಬೆಂಗಳೂರು ಮಾತ್ರವೇ 3.25 ಲಕ್ಷ ಹೂವುಗಳ ಮಾರಾಟವನ್ನು ನಿರ್ವಹಿಸುತ್ತದೆ ಇನ್ನು ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ದಿನಕ್ಕೆ 6.5 ರಿಂದ 8 ಲಕ್ಷದವರೆಗೆ ಹೂವುಗಳ ಮಾರಾಟವಿದೆ ಎಂದು ಇನ್ನೊಬ್ಬ ಬೆಳೆಗಾರರು ಮಾಹಿತಿ ನೀಡಿದ್ದಾರೆ. ಒಂದೇ ಕಾಂಡದ ಗುಲಾಬಿ 4 ರಿಂದ 6 ರೂ.ಗೆ ಮಾರಾಟವಾಗುತ್ತದೆ ಹಾಗೂ ಸೀಸನ್ ಸಮಯದಲ್ಲಿ ಹೂವಿಗೆ ರೂ 8 ರಿಂದ ರೂ 15 ರವರೆ ಇರುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಗುಲಾಬಿ ಹೂವುಗಳಿಗೆ ಇರುವ ಬೇಡಿಕೆ ಸ್ಥಿರವಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಕ್ರೈಸಾಂಥೆಮಮ್‌ಗಳು, ಜರ್ಬೆರಾಗಳು, ಓರಿಯೆಂಟಲ್ ಲಿಲ್ಲಿಗಳು, ಆರ್ಕಿಡ್‌ಗಳು ಮತ್ತು ಕಾರ್ನೇಷನ್‌ಗಳಿಗೆ ದೇಶೀಯವಾಗಿ ದೊಡ್ಡ ಮಾರುಕಟ್ಟೆಯನ್ನು ಸ್ಥಾನ ಗಿಟ್ಟಿಸಿಕೊಂಡಿವೆ. ಇತರ ರಾಜ್ಯಗಳಿಗಿಂತ ಕರ್ನಾಟಕದ ಹೂವುಗಳಿಗಿರುವ ಬೇಡಿಕೆ ಏರಿಕೆಯಾಗಿದ್ದು ನಗರ ಹಾಗೂ ಪಟ್ಟಣಗಳಲ್ಲಿಯೂ ರಾಜ್ಯದ ಹೂವುಗಳಿಗೆ ಉತ್ತಮ ಬೇಡಿಕೆ ಇದೆ ಎಂದು ಇನ್ನೊಬ್ಬ ನುರಿತ ಬೆಳೆಗಾರರು ತಿಳಿಸಿದ್ದಾರೆ.
ಬೆಂಗಳೂರಿನ ಡಚ್ ಗುಲಾಬಿಗೂ ಇದೆ ಬೇಡಿಕೆ
ಬೆಂಗಳೂರಿನ ಡಚ್ ಗುಲಾಬಿ ಕೂಡ ಬೇಡಿಕೆ ಪಡೆದುಕೊಂಡಿದ್ದು, ನಗರದ ಹವಾಮಾನ ಮೊಗ್ಗು ಹಾಗೂ ಕಾಂಡದ ಬೆಳವಣಿಗೆಗೆ ಸೂಕ್ತವಾಗಿದೆ ಎಂದು ತೋಟಗಾರಿಕಾ ವಿಭಾಗದ ಬೆಂಗಳೂರು ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಎಂ ವಿಶ್ವನಾಥ್ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ, ಕರ್ನಾಟಕದ ಒಟ್ಟು ಹೂವಿನ ಉತ್ಪಾದನೆಯು ಸುಮಾರು 3.04 ಲಕ್ಷ ಟನ್‌ಗಳಿಂದ 4.84 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. 2022 ರಲ್ಲಿ ದೇಶದ ಹೂಗಾರಿಕೆ ಉತ್ಪಾದನೆಯಲ್ಲಿ ರಾಜ್ಯವು 14% ದಾಖಲೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಹೂ ರಫ್ತುಮಾಡುವ ಮೂರನೇ ಅತಿದೊಡ್ಡ ರಾಜ್ಯ
ಕರ್ನಾಟಕ ರಾಜ್ಯವು ದೇಶದ ಮೂರನೇ ಅತಿದೊಡ್ಡ ಹೂವುಗಳನ್ನು ರಫ್ತು ಮಾಡುವ ರಾಜ್ಯವಾಗಿದೆ. ಆದಾಗ್ಯೂ, ಹೆಚ್ಚುತ್ತಿರುವ ರಫ್ತು ವೆಚ್ಚಗಳು ಕರ್ನಾಟಕದ ರಫ್ತು ಪಾಲು 14.3% ದಿಂದ (2018) 8% ದಷ್ಟು (2022) ಇಳಿಕೆಗೆ ಕಾರಣವಾಗಿವೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಹೆಚ್ಚಿನ ವಾಯುಯಾನ ವೆಚ್ಚದ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಒಟ್ಟು ಉತ್ಪಾದನೆಯ 40% ಮಾತ್ರ ಮಾರಾಟ ಮಾಡುತ್ತಿದ್ದು ಉಳಿದವುಗಳನ್ನು ದೇಶೀಯವಾಗಿ ಪೂರೈಸುತ್ತಿದ್ದೇವೆ ಎಂದು ಹೂವುಗಳ ರಫ್ತುದಾರರಾದ ಶ್ರೀಧರ್ ಚೌಧರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಹೂವಿನ ಕೃಷಿ ಮಾರುಕಟ್ಟೆಗೆ "ರಫ್ತು-ಆಧಾರಿತ ವಲಯ" ಸ್ಥಾನಮಾನವನ್ನು ನೀಡಿದೆ. 2021-22ರಲ್ಲಿ ಹೂವುಗಳನ್ನು ಅಗ್ರ ಆಮದು ಮಾಡಿಕೊಳ್ಳುವ ದೇಶಗಳೆಂದರೆ ಯುಎಸ್, ನೆದರ್ಲ್ಯಾಂಡ್ಸ್, ಯುಕೆ, ಜರ್ಮನಿ ಮತ್ತು ಯುಎಇ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ