ಪಾಕಿಸ್ತಾನ ಜಾತ್ಯತೀತ ದೇಶವಾಗಿದ್ದರೆ ಭಾರತಕ್ಕೆ ಪೌರತ್ವ ಮಸೂದೆ ಅಗತ್ಯ ಬೀಳುತ್ತಿರಲಿಲ್ಲ: ಹಿಮಂತ ಬಿಸ್ವ ಶರ್ಮಾ

“ಬೇರೆ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾದ ಜನರಿಗೆ ಭಾರತದಲ್ಲಿ ನೆಲಸಲು ಅವಕಾಶ ಮಾಡಿಕೊಡುತ್ತಿದ್ದೇವಷ್ಟೇ. ಇಷ್ಟು ಮಾತ್ರಕ್ಕೆ ನೀವು ನಮ್ಮನ್ನು ಮುಸ್ಲಿಮ್ ವಿರೋಧಿ ಎನ್ನಲು ಹೇಗೆ ಸಾಧ್ಯ? ನಾವು ಭಾರತೀಯ ಮುಸ್ಲಿಮರನ್ನು ಪ್ರತ್ಯೇಕಿಸುತ್ತಿಲ್ಲವಲ್ಲ.ಎಂಬುದು ಬಿಜೆಪಿ ನಾಯಕರ ಪ್ರಶ್ನೆ.

Vijayasarthy SN | news18
Updated:December 4, 2019, 7:16 PM IST
ಪಾಕಿಸ್ತಾನ ಜಾತ್ಯತೀತ ದೇಶವಾಗಿದ್ದರೆ ಭಾರತಕ್ಕೆ ಪೌರತ್ವ ಮಸೂದೆ ಅಗತ್ಯ ಬೀಳುತ್ತಿರಲಿಲ್ಲ: ಹಿಮಂತ ಬಿಸ್ವ ಶರ್ಮಾ
ಹಿಮಂತ ಬಿಸ್ವ ಶರ್ಮಾ
  • News18
  • Last Updated: December 4, 2019, 7:16 PM IST
  • Share this:
ನವದೆಹಲಿ(ಡಿ. 04): ಕೇಂದ್ರ ಸರ್ಕಾರ ಹೊರತರುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವಂತೆಯೇ ಬಿಜೆಪಿಯ ನಾಯಕರು ಈ ಮಸೂದೆ ಬಗ್ಗೆ ತಮ್ಮದೇ ವ್ಯಾಖ್ಯಾನ ಮಾಡಿದ್ದಾರೆ. ಪಾಕಿಸ್ತಾನದ ಕಿತಾಪತಿಯಿಂದಲೇ ಭಾರತಕ್ಕೆ ಈ ತಿದ್ದುಪಡಿ ಮಸೂದೆಯ ಅಗತ್ಯ ಬಿದ್ದಿದೆ ಎಂದು ಅಸ್ಸಾಮ್ ಸರ್ಕಾರದ ಸಚಿವ ಹಿಮಂತ ಬಿಸ್ವ ಶರ್ಮಾ ವಾದಿಸಿದ್ದಾರೆ.

“ಪಾಕಿಸ್ತಾನವು ಜಾತ್ಯತೀತ ದೇಶವಾಗಿದ್ದರೆ ಭಾರತಕ್ಕೆ ಪೌರತ್ವ ತಿದ್ದುಪಡಿ ಮಸೂದೆಯ ಅಗತ್ಯವೇ ಇರುತ್ತಿರಲಿಲ್ಲ. ಪಾಕಿಸ್ತಾನದಲ್ಲಿ ಧರ್ಮಾಧಾರಿತವಾಗಿ ಶೋಷಣೆ ಇರುವುದರಿಂದಲೇ ನಾವು ಈ ಮಸೂದೆ ರೂಪಿಸಬೇಕಾಗಿ ಬಂದಿದೆ” ಎಂದು ಬಿಜೆಪಿ ನಾಯಕರೂ ಆದ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸುಡಾನ್​​ ಸೆರಾಮಿಕ್​​ ಕಾರ್ಖಾನೆಯಲ್ಲಿ ಸ್ಪೋಟ: 18 ಮಂದಿ ಭಾರತೀಯರು ಸೇರಿದಂತೆ 23 ಮಂದಿ ಸಾವು

“ಅಮಿತ್ ಶಾ ಅವರು ಈ ಕರಡು ಮಸೂದೆ ರೂಪಿಸಲು 150 ವಿವಿಧ ಸಂಘಟನೆಗಳಿಗೆ ಸೇರಿದ 600 ವ್ಯಕ್ತಿಗಳನ್ನು ಭೇಟಿ ಮಾಡಿ 100 ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ಅಂತಿಮ ರೂಪದಲ್ಲಿ ಬಹಿರಂಗಗೊಂಡಾಗ ಜನರು ಇದನ್ನು ಸ್ವಾಗತಿಸುತ್ತಾರೆ. ಈ ತಿದ್ದುಪಡಿ ಮಸೂದೆಯಲ್ಲಿ ಹಲವು ಅಲ್ಪಸಂಖ್ಯಾತ ಸಮೂಹಗಳಿಗೆ ಒಂದು ಸಾಮಾನ್ಯ ವೇದಿಕೆ ಇದೆ” ಎಂದು ನಾರ್ಥ್ ಈಸ್ಟ್ ಡೆಮಾಕ್ರಟಿಕ್ ಮೈತ್ರಿಕೂಟದ ಸಂಚಾಲಕರಾದ ಅವರು ಹೇಳಿದ್ದಾರೆ.

ಕೇಂದ್ರದ ಈ ಪೌರತ್ವ ಮಸೂದೆಯು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಶೋಷಣೆಗೊಂಡು ಸಂತ್ರಸ್ತರಾಗಿ ವಲಸೆ ಬಂದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ಪಡೆಯುವ ಅವಕಾಶ ನೀಡುತ್ತದೆ. ಇಲ್ಲಿ ಮುಸ್ಲಿಮ್ ವಲಸೆಗಾರರನ್ನು ಮಾತ್ರ ಹೊರಕ್ಕಿಟ್ಟಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಆದರೆ, ಹಿಮಂತ್ ಬಿಸ್ವ ಶರ್ಮಾ ಅವರು ಈ ವಿರೋಧವನ್ನು ಅಲ್ಲಗಳೆಯುತ್ತಾರೆ.

ಇದನ್ನೂ ಓದಿ: ಈಶಾನ್ಯ ರಾಜ್ಯಗಳಿಗೆ ರಿಲೀಫ್: ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಗೆ ವಿನಾಯಿತಿ

“ಬೇರೆ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾದ ಜನರಿಗೆ ಭಾರತದಲ್ಲಿ ನೆಲಸಲು ಅವಕಾಶ ಮಾಡಿಕೊಡುತ್ತಿದ್ದೇವಷ್ಟೇ. ಇಷ್ಟು ಮಾತ್ರಕ್ಕೆ ನೀವು ನಮ್ಮನ್ನು ಮುಸ್ಲಿಮ್ ವಿರೋಧಿ ಎನ್ನಲು ಹೇಗೆ ಸಾಧ್ಯ? ನಾವು ಭಾರತೀಯ ಮುಸ್ಲಿಮರನ್ನು ಪ್ರತ್ಯೇಕಿಸುತ್ತಿಲ್ಲವಲ್ಲ.“ಸಂತ್ರಸ್ತ ಪ್ರಕರಣಗಳೆಲ್ಲವನ್ನೂ ನಾವು ಬರಮಾಡಿಕೊಳ್ಳುತ್ತಿಲ್ಲ. ಧಾರ್ಮಿಕವಾಗಿ ಸಂತ್ರಸ್ತಗೊಂಡಿರುವುದನ್ನು ಸಾಬೀತುಪಡಿಸಬೇಕು ಎಂಬ ನಿಯಮವನ್ನು ನಾವು ಮಸೂದೆಯಲ್ಲಿ ಇಟ್ಟಿದ್ದೇವೆ” ಎಂದು ಅಸ್ಸಾಮ್​ನ ಸಚಿವರು ವಿವರಣೆ ನೀಡಿದ್ದಾರೆ.

ರಾಷ್ಟ್ರೀಯ ಪೌರತ್ವ ನೊಂದಣಿ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಅವರು, “ಎನ್​ಆರ್​ಸಿ ಪರಿಪೂರ್ಣತೆ ಸಾಧಿಸಿಲ್ಲ ಎಂಬುದು ನಿಜವಾದರೂ 19 ಲಕ್ಷ ಅಕ್ರಮ ವಲಸಿಗರನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ. ಅಂತಿಮ ಎನ್​ಆರ್​ಸಿ ಪಟ್ಟಿಯಲ್ಲಿ ಕೈಬಿಡಲಾದವರಲ್ಲಿ 5.40 ಲಕ್ಷದಷ್ಟು ಹಿಂದೂ ಅಲ್ಪಸಂಖ್ಯಾತರಿದ್ದಾರೆ. ನ್ಯಾಯಮಂಡಳಿಗಳಲ್ಲಿ ಅಹವಾಲು ಸಲ್ಲಿಸುವ ಪ್ರಕ್ರಿಯೆ ಮುಗಿದ ನಂತರ ಕನಿಷ್ಠ 2-3 ಲಕ್ಷದಷ್ಟು ಹಿಂದೂ ಅಲ್ಪಸಂಖ್ಯಾತರು ಪೌರತ್ವ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ” ಎಂದು ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

ಇದನ್ನೂ ಓದಿ: ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕಾರವಾದ ಪೌರತ್ವ ತಿದ್ದುಪಡಿ ಮಸೂದೆ; ಮುಂದಿನ ವಾರ ಸಂಸತ್​ನಲ್ಲಿ ಮಂಡನೆ ಸಾಧ್ಯತೆ

ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ಬಂಗಾಳೀ ಹಿಂದೂಗಳು ವಲಸಿಗರಾಗುತ್ತಾರೆ ಎಂದು ಆರೋಪಿಸಿ ಮಸೂದೆಯನ್ನು ಬಲವಾಗಿ ವಿರೋಧಿಸುತ್ತಿರುವ ಮಮತಾ ಬ್ಯಾನರ್ಜಿ ಅವರನ್ನೂ ಶರ್ಮಾ ತರಾಟೆಗೆ ತೆಗೆದುಕೊಂಡಿದ್ದಾರೆ. “ಮಮತಾ ಬ್ಯಾನರ್ಜಿ ಅವರು ಶಾಸನವನ್ನು ಸರಿಯಾಗಿ ಓದಲಿ. ಮಸೂದೆಯಿಂದ ಬಂಗಾಳಿ ಹಿಂದೂಗಳು ವಲಸಿಗರ ಪಟ್ಟ ಪಡೆಯುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅವರಿಗೆ ಪೌರತ್ವ ಸಿಗುತ್ತದೆ. ಸಂಸದೀಯ ವಿಧಾನದ ಮೂಲಕ ಪೌರತ್ವ ಸಿಗುವುದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು. ಮಮತಾಗೆ ಇದು ಸಾಕಾಗದಿದ್ದರೆ ಅವರೇ ಒಂದು ಪರಿಹಾರ ಸೂಚಿಸಲಿ” ಎಂದು ಹಿಮಂತ್ ಬಿಸ್ವ ಶರ್ಮಾ ಸವಾಲೆಸೆದಿದ್ದಾರೆ.

ಕೇಂದ್ರ ಸರ್ಕಾರದ ಈ ನೂತನ ಪೌರತ್ವ ತಿದ್ದುಪಡಿ ಮಸೂದೆಗೆ ಇಂದು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಸೋಮವಾರ ಈ ಮಸೂದೆಯು ಸಂಸತ್​ನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 4, 2019, 7:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading