ಬಿಹಾರದಂತೆ ತಮಿಳುನಾಡಿನಲ್ಲೂ ಕಮಲ ಅರಳಲಿದೆ: ಕಾರ್ಯಕರ್ತರಿಗೆ ಅಮಿತ್ ಶಾ ಹುರುಪು

ಮುಂದಿನ ಐದು ವರ್ಷಗಳ ಕಾಲ ಪಕ್ಷಕ್ಕೆ ನಿಷ್ಠೆಯಿಂದ ಅವಿರತವಾಗಿ ಶ್ರಮ ಹಾಕಿದರೆ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿದೆ ಎಂದು ಇಲ್ಲಿನ ಕಾರ್ಯಕರ್ತರ ಬಳಿ ಅಮಿತ್ ಶಾ ಭರವಸೆ ನೀಡಿದ್ದಾರೆ.

ಅಮಿತ್ ಶಾ

ಅಮಿತ್ ಶಾ

 • News18
 • Last Updated :
 • Share this:
  ಚೆನ್ನೈ(ನ. 22): ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮುಂದುವರಿಸಿರುವ ಭಾರತೀಯ ಜನತಾ ಪಕ್ಷ ಆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಘೋಷಣೆ ಆದ ಕೆಲ ಗಂಟೆಗಳ ನಂತರ ಕಾರ್ಯಕರ್ತರ ಸಭೆ ನಡೆಸಿದ ಅಮಿತ್ ಶಾ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರ ಬರುವ ವಿಶ್ವಾಸ ವ್ಯಕ್ತಪಡಿಸಿದರು. ಖಾಸಗಿ ಹೋಟೆಲ್​ವೊಂದರಲ್ಲಿ ಒಂದೂವರೆ ಗಂಟೆ ಕಾಲ ನಡೆದ ಈ ಸಭೆಯಲ್ಲಿ 200ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ವೇಳೆ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ರಣತಂತ್ರಗಳ ಬಗ್ಗೆ ಚರ್ಚೆ ಮಾಡಲಾಯಿತು.

  ಈ ವೇಳೆ ಮಾತನಾಡಿದ ಗೃಹ ಸಚಿವ ಹಾಗೂ ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತಮಿಳುನಾಡಿನಲ್ಲಿ ಕಮಲ ಅರಳುವ ಸಾಧ್ಯತೆಯನ್ನು ಪರಾಮರ್ಶಿಸುತ್ತಾ ಕೆಲ ರಾಜ್ಯಗಳ ಉದಾಹರಣೆ ನೀಡಿದರು. ತ್ರಿಪುರಾ ಮತ್ತು ಬಿಹಾರದಂಥ ರಾಜ್ಯಗಳಲ್ಲಿ ಬಿಜೆಪಿ ಹೇಗೆ ಬೇರು ಬಿಟ್ಟಿತು ಎಂಬುದನ್ನು ವಿವರಿಸಿದ ಅವರು, ಅದೇ ಮಾದರಿಯಲ್ಲಿ ತಮಿಳುನಾಡಿನಲ್ಲೂ ಬಿಜೆಪಿ ಬೆಳೆಯಲಿ ಎಂದು ಪಕ್ಷದ ಕಾರ್ಯಕರ್ತರಿಗೆ ಹುರುಪು ತುಂಬಿದರು.

  ಮುಂದಿನ ಐದು ವರ್ಷಗಳ ಕಾಲ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಬದ್ಧತೆಯಿಂದ ಅವಿರತವಾಗಿ ಕೆಲಸ ಮಾಡಿದರೆ ತಮಿಳುನಾಡು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಎಐಎಡಿಎಂಕೆ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದಕ್ಕೆ ಈ ಸಭೆಯಲ್ಲಿ ಕೆಲ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಈ ಮೈತ್ರಿ ವಿಚಾರವನ್ನು ಕೇಂದ್ರದ ನಾಯಕತ್ವ ನಿಭಾಯಿಸುತ್ತದೆ. ಕಾರ್ಯಕರ್ತರು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಲು ಗಮನ ಹರಿಸಬೇಕು ಎಂದು ಕರೆ ನೀಡಿದರು.

  ಇದನ್ನೂ ಓದಿ: 2021ರ ಚುನಾವಣೆಗೂ ಬಿಜೆಪಿಯೊಂದಿಗೆ ಎಐಎಡಿಎಂಕೆ ಮೈತ್ರಿ; ಪನ್ನೀರ್​ಸೆಲ್ವಂ

  ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಮುಂದುವರಿಸುತ್ತದೆ ಎಂದು ನಿನ್ನೆ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಓ ಪನ್ನೀರ್ ಸೆಲ್ವಂ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜಯಲಲಿತಾ ಮತ್ತು ಕರುಣಾನಿಧಿ ನಿಧನದ ಬಳಿಕ ತಮಿಳುನಾಡು ರಾಜಕಾರಣದಲ್ಲಿ ತಾತ್ಕಾಲಿಕ ನಿರ್ವಾತ ಸ್ಥಿತಿ ನಿರ್ಮಾಣಗೊಂಡಂತಿದೆ. ಇದು ಬಿಜೆಪಿಗೆ ತಮಿಳುನಾಡಿನಲ್ಲಿ ಬೇರು ಆಳಕ್ಕೆ ಬಿಡಲು ಅವಕಾಶ ಮಾಡಿಕೊಟ್ಟಂತಿದೆ.

  ವರದಿ: ಪೂರ್ಣಿಮಾ ಮುರಳಿ
  Published by:Vijayasarthy SN
  First published: