ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದರೆ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ; ಪ್ರಶಾಂತ್​ ಕಿಶೋರ್​ ಸವಾಲು

ಐದು ವರ್ಷಗಳ ಕಾಲ ಬಂಗಾಳದ ಆಡಳಿತವನ್ನು ನಮಗೆ ಕೊಡಿ ಬಾಂಗ್ಲಾದೇಶ ವಲಸಿಗರ ಸಮಸ್ಯೆಯನ್ನು ಕೊನೆಗಾಣಿಸುತ್ತೇವೆ ಎಂದು ಅಮಿತ್​ ಶಾ ಎರದು ದಿನಗಳ ಪ್ರವಾಸ ಕೈಗೊಂಡ ಮರುದಿನವೇ ಪ್ರಶಾಂತ್​ ಕಿಶೋರ್​ ಅವರ ಈ ಟ್ವೀಟ್​ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಪ್ರಶಾಂತ್​ ಕಿಶೋರ್​.

ಪ್ರಶಾಂತ್​ ಕಿಶೋರ್​.

 • Share this:
  ಕೋಲ್ಕತ್ತಾ (ಡಿಸೆಂಬರ್​ 21); ಬಹು ನಿರೀಕ್ಷಿತ ಪಶ್ಚಿಮ ಬಂಗಾಳದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಬಂಗಾಳದಲ್ಲಿ ಈ ಭಾರಿ ಅಧಿಕಾರ ಹಿಡಿಯಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿ ಈಗಾಗಲೇ ಸಾಕಷ್ಟು ಕಸರತ್ತು ನಡೆಸುತ್ತಿದೆ. ಕಳೆದ ಶನಿವಾರ ಮತ್ತು ಭಾನುವಾರ ಅಮಿತ್​ ಶಾ ಎರಡು ದಿನಗಳ ಬಂಗಾಳ ಪ್ರವಾಸವನ್ನೂ ಕೈಗೊಂಡು ಟಿಎಂಸಿ ಪ್ರಮುಖ ನಾಯಕ ಸುವೆಂಧು ಅಧಿಕಾರಿ ಸೇರಿದಂತೆ 9 ಜನ ಶಾಸಕರನ್ನು ಬಿಜೆಪಿಗೆ ಬರಮಾಡಿಕೊಂಡಿದ್ದಾರೆ. ಇದು ಸಾಮಾನ್ಯವಾಗಿ ಆಡಳಿತರೂಢ ಟಿಎಂಸಿ ಪಕ್ಷಕ್ಕೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಈ ಘಟನೆಯಿಂದಾಗಿ ಸಿಎಂ ಮಮತಾ ಬ್ಯಾನರ್ಜಿ ಸಹ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆದರೆ, ಈ ಘಟನೆ ಬಗ್ಗೆ ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಖ್ಯಾತ ರಾಜಕೀಯ ನಿಪುಣ ಪ್ರಶಾಂತ್​ ಕಿಶೋರ್​, "ಈ ಭಾರಿ ಬಿಜೆಪಿ ಬಂಗಾಳ ಚುನಾವಣೆಯಲ್ಲಿ ಎರಡಂಕಿ ದಾಟುವುದೂ ಕಷ್ಟ. ಗೆಲುವಿಗಾಗಿ ಸಾಕಷ್ಟು ಹೆಣಗಾಡಲಿದೆ. ಒಂದು ವೇಳೆ ಅವರು ಗೆದ್ದರೆ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ" ಎಂದು ಸವಾಲು ಹಾಕಿದ್ದಾರೆ.

  ಪ್ರಶಾಂತ್​ ಕಿಶೋರ್​ ತಮ್ಮ ಟ್ವೀಟ್​ನಲ್ಲಿ, "ಮಾಧ್ಯಮಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಕಷ್ಟು ಹೈಪ್​ ನೀಡುತ್ತಿವೆ. ಆದರೆ, ಮಾಧ್ಯಮಗಳ ಭಾರೀ ಪ್ರಚಾರದ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ಮುಟ್ಟಲು ಹೆಣಗಾಡುತ್ತಿದೆ. ಒಂದು ವೇಳೆ ಅವರು ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ನಾನು ಈ ಕ್ಷೇತ್ರದಿಂದಲೇ ನಿವೃತ್ತಿ ಹೊಂದುತ್ತೇನೆ, ಬರೆದಿಟ್ಟುಕೊಳ್ಳಿ” ಎಂದು ಸವಾಲು ಹಾಕಿದ್ದಾರೆ.  ಐದು ವರ್ಷಗಳ ಕಾಲ ಬಂಗಾಳದ ಆಡಳಿತವನ್ನು ನಮಗೆ ಕೊಡಿ ಬಾಂಗ್ಲಾದೇಶ ವಲಸಿಗರ ಸಮಸ್ಯೆಯನ್ನು ಕೊನೆಗಾಣಿಸುತ್ತೇವೆ ಎಂದು ಅಮಿತ್​ ಶಾ ಎರದು ದಿನಗಳ ಪ್ರವಾಸ ಕೈಗೊಂಡ ಮರುದಿನವೇ ಪ್ರಶಾಂತ್​ ಕಿಶೋರ್​ ಅವರ ಈ ಟ್ವೀಟ್​ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅಮಿತ್​ ಶಾ ಬಂಗಾಳದಲ್ಲಿ ಕನಿಷ್ಟ 200 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದಾರೆ.

  ಆದರೆ, ಬಿಜೆಪಿ ಪಕ್ಷಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ 600ಕ್ಕೂ ಹೆಚ್ಚು ಸಾರ್ವಜನಿಕ ರ್ಯಾಲಿಯನ್ನು ಆಯೋಜಿಸಲು ಉದ್ದೇಶಿಸಿದ್ದಾರೆ. ಮೂಲಗಳ ಪ್ರಕಾರ ಜನವರಿಯಲ್ಲಿ ಕೋಲ್ಕತ್ತಾದಲ್ಲಿ ಬಿಜೆಪಿ ವಿರೋಧಿ ನಾಯಕರ ಜಂಟಿ ರ್ಯಾಲಿಯನ್ನೂ ಆಯೋಜಿಸಲಾಗಿದೆ. ಈ ರ್ಯಾಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಎನ್​ಸಿಪಿ ಪಕ್ಷದ ಶರದ್​ ಪವಾರ್​ ಸೇರಿದಂತೆ ಅನೇಕ ಪ್ರಾದೇಶಿಕ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಈ ರ್ಯಾಲಿಗಳು ಯೋಜನೆಯಂತೆ ನಡೆದರೆ ಬಿಜೆಪಿಗೆ ಹಿನ್ನಡೆಯಾಗುವುದು ಖಚಿತ ಎನ್ನಲಾಗುತ್ತಿದೆ.

  ಇದನ್ನೂ ಓದಿ : ತಮಿಳುನಾಡು ಸರ್ಕಾರದಿಂದ ಭರ್ಜರಿ ಪೊಂಗಲ್ ಗಿಫ್ಟ್​; ಜನರಿಗೆ 2500 ರೂ ನಗದು ಹಾಗೂ ಬಟ್ಟೆ ವಿತರಣೆ

  ಪ್ರಶಾಂತ್ ಕಿಶೋರ್ ಭಾರತದ ರಾಜಕೀಯ ಚತುರ ಎಂದು ಹೆಸರು ಪಡೆದವರು. 2013 ರಲ್ಲಿ ನರೇಂದ್ರ ಮೋದಿ ಪರವಾಗಿ ಕೆಲಸ ಮಾಡಿದ್ದ ಅವರು ನಂತರ ಬಿಜೆಪಿಯಿಂದ ದೂರವಾಗಿದ್ದಾರೆ. ಆಂದ್ರದಲ್ಲಿ ಜಗನ್ ಪರ ಮತ್ತು ದೆಹಲಿಯಲ್ಲಿ ಕೇಜ್ರಿವಾಲ್ ಪರ ಸೇರಿದಂತೆ ಹಲವು ಯಶಸ್ವಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಸದ್ಯಕ್ಕೆ ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ತಮಿಳುನಾಡು ಚುನಾವಣೆಯಲ್ಲಿಯೂ ಸಹ ಡಿಎಂಕೆ ಪರವಾಗಿ ಕೆಲಸ ಮಾಡುತ್ತಿದ್ದಾರೆ.

  ಜೆಡಿಯು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಕಿಶೋರ್ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಎಎ ಎನ್‌ಆರ್‌ಸಿ ಪರ ಮತ ಹಾಕಿದನ್ನು ಖಂಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ನಂತರ ಇದೀಗ ಬಿಹಾರದ ಯುವಜನರಿಗೆ ಉದ್ಯೋಗ ನೀಡುವುದರ ಪರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇವರ ತಂತ್ರ ಬಂಗಾಳದಲ್ಲಿ ಕೆಲಸ ಮಾಡಲಿದೆ ಎನ್ನಲಾಗುತ್ತಿದೆ.
  Published by:MAshok Kumar
  First published: