ಓಟದ ರಾಣಿ ಪಿ.ಟಿ. ಉಷಾ ಬಿಜೆಪಿ ಸೇರ್ಪಡೆ? ಕೇರಳದಲ್ಲಿ ಕಮಲ ಪಾಳಯದ ಕಸರತ್ತು

ಪಿಟಿ ಉಷಾ

ಪಿಟಿ ಉಷಾ

ಕೇರಳದಲ್ಲಿ ನೆಲೆಯೂರಲು ತಹತಹಿಸುತ್ತಿರುವ ಬಿಜೆಪಿ ಇದೀಗ ಕೇಂದ್ರದ ಕೃಷಿ ಕಾಯ್ದೆಗಳ ಪರವಾಗಿ ಹೇಳಿಕೆಗಳನ್ನ ನೀಡಿರುವ ಭಾರತದ ಗೋಲ್ಡನ್ ಗರ್ಲ್ ಹಾಗೂ ಓಟದ ರಾಣಿ ಪಿ.ಟಿ. ಉಷಾ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

  • News18
  • 5-MIN READ
  • Last Updated :
  • Share this:

    ತಿರುವನಂತಪುರಂ(ಫೆ. 22): ಪಶ್ಚಿಮ ಬಂಗಾಳದಲ್ಲಿ ದೀದಿ ಕೋಟೆಯೊಳಗೆ ಲಗ್ಗೆ ಹಾಕುತ್ತಿರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ಇದೀಗ ಕೇರಳದಲ್ಲಿ ಅಸಾಧ್ಯ ಗುರಿಯನ್ನ ಸಾಧ್ಯವಾಗಿಸಲು ಹವಣಿಸುತ್ತಿದೆ. ಆ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನ ಸೆಳೆಯಲು ಪ್ರಯತ್ನಿಸುತ್ತಿದೆ. ಮೆಟ್ರೋ ಮ್ಯಾನ್ ಎಂದೇ ಖ್ಯಾತವಾಗಿರುವ ಇ ಶ್ರೀಧರನ್ ಅವರನ್ನ ಕೇರಳದಲ್ಲಿ ಸೇರಿಸಿಕೊಂಡಿರುವ ಬಿಜೆಪಿ ಇದೀಗ ಮಾಜಿ ಅಥ್ಲೀಟ್ ಹಾಗೂ ಓಟದ ರಾಣಿ ಪಿ.ಟಿ. ಉಷಾ ಅವರನ್ನ ಸೆಳೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಪಿ.ಟಿ. ಉಷಾ ಅವರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಅವರ ಕೆಲ ಹೇಳಿಕೆಗಳು ಬಿಜೆಪಿಗೆ ಪೂರಕವಾಗಿರುವುದು ಗಮನಾರ್ಹ.


    ಪಿ.ಟಿ. ಉಷಾ ಅವರು ಕೇಂದ್ರ ಕೃಷಿ ಕಾನೂನುಗಳನ್ನ ಬಹಳ ಸಮರ್ಥನೆ ಮಾಡುತ್ತಾ ಬಂದಿದ್ಧಾರೆ. ಹವಾಮಾನ ಹೋರಾಟಗಾರ್ತಿ ಗ್ರೆಟಾ ಥನ್​ಬರ್ಗ್ ಹಾಗೂ ಗಾಯಕಿ ರಿಹಾನ್ನ ಅವರು ಭಾರತೀಯ ರೈತರ ಹೋರಾಟಕ್ಕೆ ಬೆಂಬಲ ನೀಡಿದಾಗ ಅವರಿಬ್ಬರನ್ನೂ ಪಿ.ಟಿ. ಉಷಾ ಬಲವಾಗಿ ಖಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರ್ಪಡೆಯಾದರೆ ಅಚ್ಚರಿ ಇಲ್ಲ ಎಂಬ ಮಾತು ಕೇಳಿಬರುತ್ತಿದೆ.


    ಇದನ್ನೂ ಓದಿ: ಕಾಂಗ್ರೆಸ್ ನೇತೃತ್ವದ ಪುದುಚೇರಿ ಸರ್ಕಾರ ಪತನ; ಬಹುಮತ ಪರೀಕ್ಷೆಯಲ್ಲಿ ಸಿಎಂ ನಾರಾಯಣಸ್ವಾಮಿಗೆ ಸೋಲು


    ಆದರೆ, ವಾಸ್ತವವಾಗಿ ಕೇರಳದಲ್ಲಿ ಬಿಜೆಪಿ ಹೆಚ್ಚು ಬೆಳೆಯುವುದು ಬಹಳ ಕಷ್ಟದ ಸ್ಥಿತಿ ಇದೆ. ಕಮ್ಯೂನಿಸ್ಟ್ ನೇತೃತ್ವದ ಎಲ್​ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷಗಳ ಭದ್ರಕೋಟೆ ಆಗಿದೆ ಈ ದೇವರನಾಡು. ಇಲ್ಲಿ ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತರು ಬಹುತೇಕ ಸಮಾನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಹಿಂದೂ ಸಮುದಾಯದವರ ಎಲ್ಲಾ ವೋಟುಗಳನ್ನ ಸೆಳೆಯುವುದು ಬಿಜೆಪಿಗೆ ದುಸ್ತರ ಕೂಡ ಹೌದು. ಆದರೂ ಬಿಜೆಪಿ ಇಲ್ಲಿ ವಿವಿಧ ಕಾರ್ಯತಂತ್ರಗಳನ್ನ ರೂಪಿಸಿ ವ್ಯವಸ್ಥಿತವಾಗಿ ಹೆಜ್ಜೆ ಇಡಲು ಯತ್ನಿಸುತ್ತಿದೆ.


    ಚಿತ್ರರಂಗದ ಸೆಲಬ್ರಿಟಿಗಳ ಜೊತೆಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಗಣ್ಯರನ್ನ ಸೆಳೆದು ಕೇರಳದ ವಿವಿಧ ಸಮಾಜಗಳ ಜನರನ್ನ ಬಿಜೆಪಿ ಪರ ವಾಲುವಂತೆ ಮಾಡುವುದು ಈ ಪಕ್ಷದ ರಣನೀತಿಯ ಒಂದು ಭಾಗವಾಗಿದೆ. ಶಬರಿಮಲೆ ವಿವಾದ, ಲವ್ ಜಿಹಾದ್ ಇತ್ಯಾದಿಯನ್ನ ಇಟ್ಟುಕೊಂಡು ಚುನಾವಣೆಗೆ ಅಣಿಗೊಳ್ಳುತ್ತಿದೆ. ನಿನ್ನೆ ಕಾಸರಗೋಡಿನಲ್ಲಿ ಯೋಗಿ ಆದಿತ್ಯನಾಥ್ ಅವರು ವಿಜಯಯಾತ್ರೆಯಲ್ಲಿ ಪಾಲ್ಗೊಂಡು ಆರ್ಭಟಿಸಿ ಹೋಗಿದ್ದೂ ಇದೇ ರಣತಂತ್ರದ ಭಾಗವಾಗಿದೆ.

    Published by:Vijayasarthy SN
    First published: