T Raja Singh: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ, ಶಾಸಕ ಟಿ. ರಾಜಾ ಬಿಜೆಪಿಯಿಂದ ಅಮಾನತು!

BJP suspends Telangana MLA T Raja Singh: ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ತನ್ನ ಪಕ್ಷದ ಶಾಸಕ ಟಿ ರಾಜಾ ಸಿಂಗ್ ಅವರನ್ನು ಅಮಾನತುಗೊಳಿಸಿದೆ.

ಶಾಸಕ ಟಿ. ರಾಜಾ ಸಿಂಗ್

ಶಾಸಕ ಟಿ. ರಾಜಾ ಸಿಂಗ್

 • Share this:
  ಹೈದರಾಬಾದ್(ಆ.23): ಪ್ರವಾದಿ ಮೊಹಮ್ಮದ್ (Prophet Muhammad) ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ಗೋಶಾಮಹಲ್ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ (Telangana BJP MLA T Raja Singh) ಅವರನ್ನು ಮಂಗಳವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಸಿಂಗ್ ಅವರ ಹೇಳಿಕೆಗಳ ವಿರುದ್ಧ ಮಂಗಳವಾರ ಮುಂಜಾನೆ ನಗರದಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದು, ಇದರ ಬೆನ್ನಲ್ಲೇ ಶಾಸಕನನ್ನು ಅವರನ್ನು ಬಂಧಿಸಲಾಗಿತ್ತು. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನವ್ವರ್ ಫಾರೂಕಿಯನ್ನು ಟೀಕಿಸುವ ವೀಡಿಯೊ ಬಿಜೆಪಿ ಶಾಸಕ ಸೋಮವಾರ ಬಿಡುಗಡೆ ಮಾಡಿದ್ದರು. ಈ ವೀಡಿಯೊದಲ್ಲಿ, ಅವರು ನಿರ್ದಿಷ್ಟ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಫಾರೂಕಿ ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಿದ್ದರೆಂಬುವುದು ಉಲ್ಲೇಖನೀಯ.

  ಇನ್ನು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷ (BJP) ತನ್ನ ಪಕ್ಷದ ಶಾಸಕ ಟಿ ರಾಜಾ ಸಿಂಗ್ ಅವರನ್ನು ಅಮಾನತುಗೊಳಿಸಿದೆ. ಅವರನ್ನು ಏಕೆ ಉಚ್ಚಾಟಿಸದಂತಿರಲು ಸೂಕ್ತ ಕಾರಣ ನೀಡುವಂತೆ ಪಕ್ಷವು ಅವರಿಗೆ 10 ದಿನಗಳ ಕಾಲಾವಕಾಶ ನೀಡಿದೆ.

  ಬಿಜೆಪಿಯ ಸಂವಿಧಾನದ ಉಲ್ಲಂಘನೆ

  "ನೀವು ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ, ಇದು ಭಾರತೀಯ ಜನತಾ ಪಕ್ಷದ ಸಂವಿಧಾನದ ನಿಯಮ XXV. 10 (ಎ) ಅನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಹೆಚ್ಚಿನ ವಿಚಾರಣೆ ಬಾಕಿಯಿದೆ ಎಂದು ನಿಮಗೆ ತಿಳಿಸಲು ನನಗೆ ನಿರ್ದೇಶಿಸಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ನಿಮ್ಮನ್ನು ಪಕ್ಷದಿಂದ ಹಾಗೂ ಪಕ್ಷದ ಎಲ್ಲಾ ಜವಾಬ್ದಾರಿಗಳು / ನಿಯೋಜನೆಗಳಿಂದ ಅಮಾನತುಗೊಳಿಸಲಾಗಿದೆ," ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಹೇಳಿದರು.

  ಇದನ್ನೂ ಓದಿ: Prophet Muhammad: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಮಾತು: ಬಿಜೆಪಿ ಶಾಸಕ T Raja Singh ಅರೆಸ್ಟ್!

  ಹತ್ತು ದಿನಗಳೊಳಗೆ ಕಾರಣ ಕೊಡಿ

  "ನಿಮ್ಮನ್ನು ಪಕ್ಷದಿಂದ ಏಕೆ ಹೊರಹಾಕಬಾರದು ಎಂಬುದಕ್ಕೆ ದಯವಿಟ್ಟು ಈ ಸೂಚನೆ ಹೊರಡಿಸಿದ ದಿನಾಂಕದಿಂದ 10 ದಿನಗಳ ಒಳಗಾಗಿ ಕಾರಣವನ್ನು ನೀಡಿ. ನಿಮ್ಮ ವಿವರವಾದ ಉತ್ತರವು ಸೆಪ್ಟೆಂಬರ್ 2, 2022 ರೊಳಗೆ ಕೆಳಗೆ ಸಹಿ ಮಾಡಿದವರಿಗೆ ತಲುಪಬೇಕು" ಎಂದು ಪಕ್ಷವು ಹೇಳಿದೆ.  ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಟಿ ರಾಜಾ ಸಿಂಗ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಹೈದರಾಬಾದ್‌ನಲ್ಲಿ ಸೋಮವಾರ ರಾತ್ರಿ ಬಿಜೆಪಿ ಶಾಸಕರು ಪ್ರವಾದಿಯವರ ಬಗ್ಗೆ ಮಾತನಾಡುವ ವಿಡಿಯೋ ವೈರಲ್ ಆದ ಬಳಿಕ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಭಾರೀ ಪ್ರತಿಭಟನೆ ನಡೆದಿತ್ತು. ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 (ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಗಾಯಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಅವರನ್ನು ಬಂಧಿಸಲಾಯಿತು.

  ಹೇಳಿದ್ದೇನು?

  ಟಿ ರಾಜಾ ಸಿಂಗ್ ಹೈದರಾಬಾದ್‌ನ ಗೋಶಾಮಹಲ್‌ನ ಶಾಸಕರಾಗಿದ್ದಾರೆ. ಇದಕ್ಕೂ ಮುನ್ನ ಅವರು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನವ್ವರ್ ಫಾರೂಕಿ ಅವರಿಗೂ ಬೆದರಿಕೆ ಹಾಕಿದ್ದರು. ಮುನವ್ವರ್ ಫಾರುಕಿ ವಿರುದ್ಧ ಬಿಜೆಪಿ ಶಾಸಕ "ಕಾಮಿಡಿ" ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಅಲ್ಲದೇ ಫಾರೂಕಿ ಅವರ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿ, ಸೆಟ್ ಅನ್ನು ಸುಟ್ಟು ಹಾಕುವುದಾಗಿ ಹೇಳಿದ್ದರು, ಇದಾದ ಬಳಿಕ ಬೆದರಿಕೆ ಹಾಕಿದ್ದ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.

  ಇನ್ನೂ ಓದಿ: Prophet Row: ನೂಪುರ್ ಶರ್ಮಾಗೆ ಗೌತಮ್ ಗಂಭೀರ್ ಸಪೋರ್ಟ್!

  ಮುನವ್ವರ್ ಫಾರೂಕಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದ ರಾಜಾ ಸಿಂಗ್, ಹಾಸ್ಯನಟ ಮತ್ತು ಅವರ ತಾಯಿಯನ್ನು ಟೀಕಿಸಿದ್ದರು. ಅವರು ವಿಡಿಯೋದಲ್ಲಿ ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

  ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್Telangana BJP MLA Raja Singh who was arrested for making derogatory remarks about the Prophet stg asp

  ಆಡಳಿತಾರೂಢ ಟಿಆರ್‌ಎಸ್ ಕಾರ್ಯಾಧ್ಯಕ್ಷ ಹಾಗೂ ರಾಜ್ಯ ಸಚಿವ ಕೆಟಿ ರಾಮರಾವ್ ಅವರು ಫಾರೂಕಿ ಅವರನ್ನು ಆಹ್ವಾನಿಸಿದ್ದಕ್ಕೆ ಶಾಸಕ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಹವರನ್ನು ಆಹ್ವಾನಿಸುವ ಬದಲು ತೆಲಂಗಾಣದ ಪ್ರತಿಭಾವಂತ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕರು ಹೇಳಿದ್ದರು. ಇದೀಗ ಶಾಸಕ ಟಿ ರಾಜಾ ಸಿಂಗ್ ಪ್ರವಾದಿ ಮೊಹಮ್ಮದ್ ಕುರಿತು ಪ್ರತಿಕ್ರಿಯೆ ನೀಡಿದ್ದು, ಜನರು ಅವರ ಹೇಳಿಕೆಯನ್ನು ವಿರೋಧಿಸುತ್ತಿದ್ದಾರೆ.
  Published by:Precilla Olivia Dias
  First published: