ಜಗನ್​ ‘ಪಾದಯಾತ್ರೆ’ಗೆ ಭಾರೀ ಬೆಂಬಲ, ಆಂಧ್ರ ರಾಜಕಾರಣದಲ್ಲಿ ತಲ್ಲಣ: ಮೈತ್ರಿಗೆ ಸಜ್ಜಾದ ಬಿಜೆಪಿ?


Updated:June 13, 2018, 6:33 PM IST
ಜಗನ್​ ‘ಪಾದಯಾತ್ರೆ’ಗೆ ಭಾರೀ ಬೆಂಬಲ, ಆಂಧ್ರ ರಾಜಕಾರಣದಲ್ಲಿ ತಲ್ಲಣ: ಮೈತ್ರಿಗೆ ಸಜ್ಜಾದ ಬಿಜೆಪಿ?
ವೈಎಸ್ಸಾರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿ

Updated: June 13, 2018, 6:33 PM IST
-ಗಣೇಶ್​ ನಚಿಕೇತು, ನ್ಯೂಸ್​-18 ಕನ್ನಡ

ಹೈದರಬಾದ್​(ಜೂನ್​.13): ದೇಶದಲ್ಲಿ 2019 ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಆಂಧ್ರಪ್ರದೇಶದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಲು ವೈಎಸ್​ಆರ್​ ಕಾಂಗ್ರೆಸ್ ಮತ್ತು ಟಿಡಿಪಿ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ​ಜನರನ್ನು ಶತಾಯಗತಾಯ ತಲುಪಲು ವೈಎಸ್​ಆರ್​​ ಕಾಂಗ್ರೆಸ್​ ವರಿಷ್ಠ ಜಗನ್​ ಮೋಹನ್​ ರೆಡ್ಡಿ ನೇತೃತ್ವದಲ್ಲಿ ಹಗಲು ರಾತ್ರಿಯೆನ್ನದೆ ‘ಪ್ರಜಾ ಸಂಕಲ್ಪ ಪಾದಯಾತ್ರೆ’ ನಡೆಯುತ್ತಿದೆ. ಈ ಪಾದಯಾತ್ರೆಗೆ ಜನಸಾಗರ ಹರಿದು ಬರುತ್ತಿದ್ದಂತೆ, ಆಂಧ್ರಪ್ರದೇಶದ ರಾಜಕಾರಣದಲ್ಲಿ ಹೊಸ ಅಲೆಯ ಮನ್ವಂತರ ಆರಂಭವಾಗಿದೆ.

ಕಳೆದ ಬುಧವಾರ ಆಂಧ್ರಪ್ರದೇಶದ ಗೋದಾವರಿಯಲ್ಲಿ ನಡೆದ ವೈಎಸ್​ಆರ್ ಜಗನ್​​ ಪಾದಯಾತ್ರೆಯಲ್ಲಿ​ ಸಾವಿರಾರು ಜನ ಭಾಗಿಯಾಗಿದ್ದಾರೆ. ರಾಜಕೀಯ ಯುವ ನೇತಾರ ಜಗನ್​​ಗೆ ಪಕ್ಷದ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ಸಿಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ​ಅಭಿಮಾನಿಗಳು ಜೈಕಾರ ಕೂಗುತ್ತ, ಮೆರವಣಿಗೆ ಮಾಡುತ್ತಿದ್ದಾರೆ.

ಜಗನ್​ ನೇತೃತ್ವದ ಈ ಪಾದಾಯಾತ್ರೆಗೆ ಅದ್ಭುತವಾದ ಸ್ಪಂದನೆ ಸಿಗುತ್ತಿದ್ದಂತೆಯೇ ಇತರೆ ಪಕ್ಷಗಳಿಗೆ ನಡುಕ ಶುರುವಾಗಿದೆ ಎನ್ನಲಾಗಿದೆ. 2019 ರಲ್ಲಿ ಎದುರುಗೊಳ್ಳುತ್ತಿರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಗೆಲ್ಲಲು ಎಲ್ಲಾ ಪಕ್ಷಗಳು ಸರ್ಕಸ್​ ನಡೆಸುತ್ತಿವೆ. ಈ ಮಧ್ಯೆ ವೈಎಸ್​ಆರ್​ ಕಾಂಗ್ರೆಸ್​ ನಿರಂತರ ಕಾರ್ಯಕ್ರಮಗಳಿಗೆ ಇತರೆ ಪಕ್ಷಗಳು ಭಯಭೀತಿಗೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.

ಕಳೆದ ವರ್ಷವೇ ವೈಎಸ್​ಆರ್​ ಪಕ್ಷದತ್ತ ಜನರನ್ನು ಸೆಳೆಯಲು ಜಗನ್​ ರಣತಂತ್ರ ರೂಪಿಸಿದ್ದರು. ಈ ಭಾಗವಾಗಿಯೇ 3 ಸಾವಿರ ಕಿಲೋಮೀಟರ್​ಗಳಷ್ಟು ಬೃಹತ್​ ಪಾದಾಯಾತ್ರೆಯನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಗಳ ಮೂಲಕ ಜನರಿಂದ ಗಳಿಸುತ್ತಿರುವ ಪ್ರೀತಿ ಅಭಿಮಾನವನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಜಗನ್ ಯಶಸ್ವಿಯಾಗಿದ್ದಾರೆ.

ಇನ್ನು ಆಂಧ್ರಪ್ರದೇಶಕ್ಕೆ ಕೇಂದ್ರದಿಂದ ಸ್ಪೆಷಲ್​​ ಕ್ಯಾಟಗರಿ ಅಡಿಯಲ್ಲಿ ಅನುದಾನ ಕೊಡಿಸುವಲ್ಲಿ ಟಿಡಿಪಿ ವಿಫಲವಾಗಿದೆ. ಈ ಕಾರಣಕ್ಕಾಗಿಯೇ ಎನ್​ಡಿಎ ಸಖ್ಯವನ್ನು ತೊರೆದ ತೆಲುಗು ದೇಶಂ ಪಾರ್ಟಿ ಮತ್ತು ಬಿಜೆಪಿ ನಡುವೆ ಬಿರುಕುಂಟಾಗಿದೆ. ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ವೈಎಸ್​ಆರ್​ ಕಾಂಗ್ರೆಸ್​ ಜನರನ್ನು ತಲುಪುವತ್ತ ಮನ್ನುಗ್ಗುತ್ತಿದೆ.

ಈಗಾಗಲೇ ದೇಶದ ಉದ್ದಗಲಕ್ಕೂ ಸುಮಾರು 22 ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿದಿರುವ ಬಿಜೆಪಿ ದಕ್ಷಿಣದಲ್ಲಿ ತನ್ನ ಚಾಪು ಮೂಡಿಸಲು ಕಾದು ಕುಳಿತಿದೆ. ಹೀಗಾಗಿ ಆಂಧ್ರಪ್ರದೇಶದಲ್ಲಿ ಖಾತೆ ತೆರೆಯಲು ಚಿಂತಿಸಿರುವ ಬಿಜೆಪಿ ಜಗನ್​ ಜೊತೆಗೆ ಚುನಾವಣಾಪೂರ್ವ ಮೈತ್ರಿಗೆ ಹೋಗಲು ನಿರ್ಧರಿಸಿದೆ ಎನ್ನಲಾಗಿದೆ. ಇನ್ನೊಂದೆಡೆ ಬಿಜೆಪಿ ಮೈತ್ರಿ ಜೊತೆಗೆ ಜಗನ್​ ಸಿದ್ಧರಿಲ್ಲ ಎನ್ನುತ್ತಿದ್ದಾರೆ ತಜ್ಞರು.
Loading...

ಬಿಜೆಪಿಯನ್ನು ಮಕಾಡೆ ಮಲಗಿಸಲು ಚಿಂತಿಸಿರುವ ಪ್ರಾದೇಶಿಕ ಪಕ್ಷಗಳು ಕರ್ನಾಟಕ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವೇದಿಕೆ ಮೇಲೆ ಕಾಣಿಸಿಕೊಂಡಿದ್ದವು. ಆದರೆ ಇವರ ನಡುವೆ ವೈಎಸ್​ಆರ್​ ಕಾಂಗ್ರೆಸ್​ನ ವರಿಷ್ಠ ಜಗನ್​ ಮೋಹನ್​ ರೆಡ್ಡಿ ಗುರುತಿಸಿಕೊಳ್ಳದಿರುವುದು ಬಿಜೆಪಿ ಜೊತೆಗೆ ಮೈತ್ರಿಗೆ ಹೋಗಬಹುದು ಎನ್ನುವ ಅನುಮಾನುಗಳಿಗೆ ದಾರಿ ಮಾಡಿಕೊಟ್ಟಿದೆ.

ಈ ಸಂಬಂಧ ನ್ಯೂಸ್​-18ಗೆ ಪ್ರತಿಕ್ರಿಯಿಸಿದ ತೆಲಂಗಾಣ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕ ಲಕ್ಷ್ಮಿ ನಾರಾಯಣ, ಜಗನ್​ ಅವರ ಜೊತೆಗೆ ಮೈತ್ರಿ ಹೈಕಮಾಂಡ್​ಗೆ ಬಿಟ್ಟದ್ದು. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿಯಿದೆ. ಈ ಕುರಿತಾಗಿ ಅಮಿತ್​ ಶಾ ಮತ್ತು ಮೋದಿ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಉತ್ತರಿಸಿದ್ದಾರೆ.

ಕೇಂದ್ರದ ನಡೆಯಿಂದ ಅಸಮಾಧಾನಗೊಂಡಿರುವ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರ ಬಿಜೆಪಿ ವಿರುದ್ಧ ಆಂದೋಲನ ಆರಂಭಿಸಿದೆ. ಬಿಜೆಪಿ ಸ್ಪೆಷಲ್​ ಕ್ಯಾಟಗರಿ ಅಡಿಯಲ್ಲಿ ನೀಡಬೇಕಿದ್ದ ಅನುದಾನ ತಿರಸ್ಕರಿಸಿದೆ. ಆಂಧ್ರಪ್ರದೇಶದ ಅಭಿವೃದ್ದಿಗೆ ಬಿಜೆಪಿ ಎಳ್ಳಷ್ಟು ಸಹಾಯ ಮಾಡಲಿಲ್ಲ ಎಂದು ಟಿಡಿಪಿ ಆರೋಪಿಸುತ್ತಿದೆ.

ಇದಕ್ಕೆ ಪ್ರತಿಯಾಗಿ  ಬಿಜೆಪಿಯೂ ‘ಮನೆ ಮನೆಗೆ ಬಿಜೆಪಿ’ ಎಂಬ ಹೆಸರಿನ್ಲಲಿ ಅಭಿಯಾನ ಶುರುಮಾಡಿದೆ. ಈ ಮೂಲಕ ಜನರಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಲು ಮುಂದಾಗಿದೆ. ಸದ್ಯ ಟಿಡಿಪಿ ಮತ್ತು ಬಿಜೆಪಿ ನಡುವೆ ಬಿರುಕುಂಟಾಗಿದ್ದು, ಇದರ ಲಾಭವನ್ನು ವೈಎಸ್​ಆರ್​ ಕಾಂಗ್ರೆಸ್​ ಪಡೆದುಕೊಳ್ಳುತ್ತಿದೆ ಎನ್ನುತ್ತಿವೆ ಮೂಲಗಳು.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...