ನವದೆಹಲಿ(ಆ.22): ಭಾರತೀಯ ಜನತಾ ಪಕ್ಷ (BJP) ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ 'ಹಗರಣ'ದ (excise policy scam) "ಕಿಂಗ್‌ಪಿನ್" ಎಂದು ಆರೋಪಿಸಿದೆ. ಅಲ್ಲದೇ ಭ್ರಷ್ಟಾಚಾರದ ಹುನ್ನಾರ ಬಹಿರಂಗಗೊಳ್ಳಲಾರಂಭಿಸಿದ್ದು ಶೀಘ್ರವೇ ಅವರ ಕೈಗೆ ಕೋಳ ಬೀಳಲಿದೆ ಎಂದಿದೆ. ಪತ್ರಿಕಾಗೋಷ್ಠಿಯಲ್ಲಿ ಕೇಜ್ರೀವಾಲ್ ವಿರುದ್ಧ ಕಿಡಿ ಕಾರಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಕೋವಿಡ್ -19 ಪೀಡಿತ ಜನರಿಗೆ ಸಹಾಯ ಬೇಕಾದಾಗ ಕೇಜ್ರಿವಾಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ. "ಅಬಕಾರಿ ನೀತಿ 'ಹಗರಣ'ದ ಬೇರುಗಳು ಭ್ರಷ್ಟ ಕೇಜ್ರಿವಾಲ್ ಅವರ ಮನೆ ಬಾಗಿಲಿನವರೆಗೆ ಹೋಗಿವೆ. ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಯಾವುದೇ ಭ್ರಷ್ಟರನ್ನು ಬಿಡಲಾಗುವುದಿಲ್ಲ" ಎಂದು ಭಾಟಿಯಾ ಹೇಳಿದರು, "ಇದು ಕೇವಲ 1 ಕೋಟಿ ರೂಪಾಯಿಗಳ ಸಣ್ಣ ಹಗರಣ" ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದ್ದಾರೆ.
ಅಬಕಾರಿ ನೀತಿ ಭ್ರಷ್ಟ ಎಂದು ಸಾಬೀತಾಗಿದೆ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ, ದೆಹಲಿಯ ಅಬಕಾರಿ ನೀತಿ ಭ್ರಷ್ಟ ಎಂದು ಸಾಬೀತಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ಈ ಹಗರಣದ ಕಿಂಗ್‌ಪಿನ್ ಆಗಿದ್ದಾರೆ, ಆಮ್ ಆದ್ಮಿ ಪಕ್ಷ (AAP) 24 ಗಂಟೆಗಳ ಒಳಗೆ ಹೇಳಲಿ. ಭ್ರಷ್ಟಾಚಾರವಿಲ್ಲದಿದ್ದರೆ ಹೊಸ ಅಬಕಾರಿ ನೀತಿಯನ್ನು ಏಕೆ ಹಿಂತೆಗೆದುಕೊಳ್ಳಲಾಯಿತು ಎಂದು ಭಾಟಿಯಾ ಪ್ರಶ್ನಿಸಿದರು.
ಇದನ್ನೂ ಓದಿ: ಕೊಟ್ಟ ಕುದುರೆಯನ್ನು ಏರಲು BJPಗೆ ಆಗ್ತಿಲ್ಲ, 4 ರಾಜ್ಯಗಳಲ್ಲಿ ಇನ್ನೂ ಸರ್ಕಾರ ರಚನೆ ಏಕಿಲ್ಲ: Kejriwal ವ್ಯಂಗ್ಯ
‘ಕೇಜ್ರಿವಾಲ್ ಅವರಲ್ಲಿ ನೈತಿಕತೆ ಉಳಿದಿದ್ದರೆ ಸತ್ಯೇಂದ್ರ ಜೈನ್ ಮತ್ತು ಸಿಸೋಡಿಯಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದ ಅವರು, ಆಮ್ ಆದ್ಮಿ ಪಕ್ಷ ನಡೆಸುತ್ತಿರುವ ಭ್ರಷ್ಟಾಚಾರ ‘ಐಎಸ್‌ಐ ಮಾರ್ಕ್’ ಗ್ಯಾರಂಟಿಗಿಂತ ದೊಡ್ಡದು. ಹೀಗಾಗಿಯೇ ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿ ಸರ್ಕಾರದ ಆರೋಗ್ಯ ಸಚಿವರು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿನಲ್ಲಿದ್ದಾರೆ ಎಂದು ಅವರು ಹೇಳಿದರು.
ಕೋವಿಡ್ ಸಮಯದಲ್ಲಿ ಭ್ರಷ್ಟರ ಪೆನ್ ಅಬಕಾರಿ ನೀತಿಗೆ ಸಹಿ ಮಾಡಿತ್ತು
“ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆ ಬಂದಾಗ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ವೈದ್ಯಕೀಯ ಸರಬರಾಜು ಮತ್ತು ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ತೊಡಗಿತ್ತು. ಆದರೆ ಇದೇ ವೇಳೆ ಕೇಜ್ರಿವಾಲ್ ಔಷಧಿಗಳು, ಹಾಸಿಗೆ ಮತ್ತು ಆಮ್ಲಜನಕದ ಅಗತ್ಯವನ್ನು ಕೇಂದ್ರೀಕರಿಸಬೇಕಾಗಿತ್ತು, ಆದರೆ ಅವರ ಭ್ರಷ್ಟ ಲೇಖನಿ ಅಬಕಾರಿ ನೀತಿಗೆ ಸಹಿ ಹಾಕುತ್ತಿತ್ತು ಎಂದು ಭಾಟಿಯಾ ಗುಡುಗಿದ್ದಾರೆ.
ಕೇಜ್ರಿವಾಲ್, ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರು "ಸಂಪೂರ್ಣ ಭ್ರಷ್ಟ" ನಾಯಕರು ಎಂದು ಬಿಜೆಪಿ ನಾಯಕ ಹೇಳಿದರು. "ಇಂದು, ಭಾರತದ ಜನರು ಅದನ್ನು 'ಎಎಪಿ'(ಆಪ್) ಅಲ್ಲ, ಇದು 'ಪಾಪ'(ಪಾಪ್) ಎಂದು ಹೇಳುತ್ತಿದ್ದಾರೆ, ಇದು ಭ್ರಷ್ಟಾಚಾರದ 'ಪಿತಾಮಹ'(ಬಾಪ್) ಆಗಿದ್ದು, ಜನರ ಪಾಲಿಗೆ ಶಾಪ ಆಗಿದೆ" ಎಂದು ಭಾಟಿಯಾ ಹೇಳಿದರು.
ತಮ್ಮ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಿಸೋಡಿಯಾ ಹೇಳಿಕೊಂಡಿದ್ದರು. ಇದಕ್ಕೆ ಭಾಟಿಯಾ ಪ್ರತಿಕ್ರಿಯಿಸಿದ್ದು, "ವಂಚಕರಿಗೆ ಲುಕ್‌ಔಟ್ ನೋಟಿಸ್‌ಗಳು ಮಾತ್ರ ಸಿಗುತ್ತವೆಯೇ ಹೊರತು ಅಭಿನಂದನಾ ಪತ್ರಗಳಲ್ಲ" ಎಂದು ಹೇಳಿದರು.
‘ಎಎಪಿ’ಗೆ ಜನರೇ ಉತ್ತರಿಸುತ್ತಾರೆ
2024 ರ ಲೋಕಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ ನಡುವೆ ನೇರ ಸ್ಪರ್ಧೆ ನಡೆಯಲಿದೆ ಎಂದು ಎಎಪಿ ಹೇಳಿಕೆಗೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಅವರು ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾ ಚುನಾವಣೆಗಳಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ.‘ಎಎಪಿ’ಗೆ ಸಾರ್ವಜನಿಕರೇ ಉತ್ತರ ನೀಡಲಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯದ ಶಿಕ್ಷಣ ಸಚಿವರು "ಮದ್ಯ ಮಂತ್ರಿ" ಕೂಡ ಆಗಿದ್ದಾರೆ ಎಂದು ಗುಪ್ತಾ ಆರೋಪಿಸಿದರು.
ಇದನ್ನೂ ಓದಿ: Arvind Kejriwal ಜೊತೆಗೆ ಭೋಜನ; ಎಎಪಿಯಿಂದ ಹೊಸ ಪ್ರಚಾರ ತಂತ್ರ
ಗಮನಾರ್ಹವಾಗಿ, ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ 21 ಸ್ಥಳಗಳ ಮೇಲೆ ದಾಳಿ ನಡೆಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ