news18-kannada Updated:December 26, 2020, 9:31 PM IST
ನುಮನ್ ಬೆನಿವಾಲ್
ನವದೆಹಲಿ (ಡಿ. 26): ರಾಜಸ್ಥಾನದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ರಾಷ್ಟ್ರ ಲೋಕ್ತಾಂತ್ರಿಕ್ ಪಕ್ಷ ಎನ್ಡಿಎ ಮೈತ್ರಿಯಿಂದ ಹೊರನಡೆದಿದೆ. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಆರ್ಎಲ್ಪಿ ಈ ನಿರ್ಧಾರ ಕೈ ಗೊಂಡಿದೆ. ಈ ಮೂಲಕ ಎನ್ಡಿಎ ಮೈತ್ರಿ ತೊರೆದ ಎರಡನೇ ಪಕ್ಷ ಆರ್ಎಲ್ಪಿ ಆಗಲಿದೆ. ಈ ಮೊದಲು ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ಪಂಜಾಬಿನ ಅಕಾಲಿದಳ ಎನ್ಡಿಎ ಸಖ್ಯ ತೊರೆದಿತ್ತು. ಈಗ ಆರ್ಎಲ್ಪಿ ಮೈತ್ರಿಯಿಂದ ಹೊರನಡೆಯುವ ಮೂಲಕ ಬಿಜೆಪಿ ಶಾಕ್ ನೀಡಿದೆ. ರಾಜಸ್ಥಾನದ ಅಲ್ವಾರ ಶಹಜಹಾನ್ಪುರದಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಮೂಲಕ ಮತ್ತೊಂದು ಪಕ್ಷ ಕೃಷಿ ಮಸೂದೆ ಹಿಂಪಡೆಯುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿದೆ.
ಈ ಕುರಿತು ಮಾತನಾಡಿದ ಆರ್ಎಲ್ಪಿ ನಾಯಕ, ನಾಗ್ಪುರ್ ಸಂಸದ ಹನುಮನ್ ಬೆನಿವಾಲ್, ನಾನು ಎನ್ಡಿಎಗೆ ಫೆವಿಕಲ್ನಂತೆ ಅಂಟಿಕೊಂಡಿಲ್ಲ. ನಾನು ಎನ್ಡಿಎ ಮೈತ್ರಿಯಿಂದ ಹೊರಬರುತ್ತಿದ್ದೇನೆ. ಮೂರು ಕೃಷಿ ಕಾನೂನು ವಿರೋಧಿಸಿ ನಾನು ಬಿಜೆಪಿಯಿಂದ ಹೊರ ನಡೆಯುತ್ತಿದ್ದೇನೆ. ಇದು ರೈತವಿರೋಧಿ ಕಾನೂನಾಗಿದೆ. ನಾನು ಎನ್ಡಿಎ ತೊರೆದಿದ್ದೇನೆ. ಆದರೆ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು. ಅಲ್ಲದೇ ಕೇಂದ್ರ ಈ ಕಾನೂನನ್ನು ಹಿಂಪಡೆಯದಿದ್ದರೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೂಡ ತಿಳಿಸಿದ್ದಾರೆ.
ಶನಿವಾರ ಜೈಪುರ ಬಳಿ ದೆಹಲಿ ಚಲೋ ಪ್ರತಿಭಟನಾ ಮುಂದಾದ ರೈತರ ಪ್ರತಿಭಟನಾ ಮೆರವಣಿಗೆಗೆ ಬೆನಿವಾಲ್ ಕೂಡ ಜೊತೆಯಾದರು. ಈ ಹಿಂದೆ ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದ ಅವರು, ಕೃಷಿ ಕಾನೂನು ಹಿಂಪಡೆಯದಿದ್ದರೆ ಬಿಜೆಪಿ ಜೊತೆಯಲ್ಲಿನ ಮೈತ್ರಿ ಕುರಿತು ಮರು ಚಿಂತಿಸಬೇಕಾಗುತ್ತದೆ ಎಂದಿದ್ದರು. ಅಲ್ಲದೇ ರೈತರನ್ನು ಬೆಂಬಲಿಸಿದ ಅವರು ಮೂರು ಸಂಸದೀಯ ಸಮಿತಿಗಳ ಸ್ಥಾನವನ್ನು ತ್ಯಜಿಸಿದ್ದರು. ಬೆನಿವಾಲ್ ಕೈಗಾರಿಕಾ ಸಂಸದೀಯ ಸಮಿತಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಹಾಗೂ ಅರ್ಜಿಗಳ ಸಂಸದೀಯ ಸಮಿತಿ ಸದಸ್ಯರಾಗಿದ್ದಾರೆ
Published by:
Seema R
First published:
December 26, 2020, 8:56 PM IST