ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಯೋತ್ಪಾದಕ ಎಂದು ಜರಿದಿದ್ದ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಒಂದು ದಿನದ ಮಟ್ಟಿಗೆ ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಕಳೆದ ವಾರವಷ್ಟೇ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಇದೇ ವರ್ಮಾ ಅವರಿಗೆ ಚುನಾವಣಾ ಆಯೋಗ 96 ಗಂಟೆಗಳ ಕಾಲ ಚುನಾವಣಾ ಪ್ರಚಾರದಿಂದ ನಿಷೇಧ ವಿಧಿಸಿತ್ತು.
ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರು ಅರವಿಂದ್ ಕೇಜ್ರಿವಾಲ್ ವಿರುದ್ಧ ಆಡಿರುವ ಕಟುವಾದ ಮಾತುಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಮಾದರಿ ನೀತಿ ಸಂಹಿತೆ ಅನ್ವಯ ಪರ್ವೇಶ್ ವಿರುದ್ಧ ಆಯೋಗ ಕ್ರಮ ತೆಗೆದುಕೊಂಡಿದೆ ಎಂದು ಆಯೋಗದ ಹೇಳಿಕೆ ತಿಳಿಸಿದೆ.
ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಕರೆದಿರುವುದನ್ನು ಸಮರ್ಥಿಸಿಕೊಂಡಿರುವ ವರ್ಮಾ, ಒಂದು ವೇಳೆ ದೆಹಲಿ ಮುಖ್ಯಮಂತ್ರಿ ಪ್ರಧಾನಿಯನ್ನು ದೇಶದ್ರೋಹಿ ಎಂದು ಕರೆದರೆ ಅವರನ್ನು ಭಯೋತ್ಪಾದಕ ಎಂದು ಕರೆಯಬೇಕು. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಶಾಹಿನ್ ಬಾಗ್ ಪ್ರತಿಭಟನಾಕಾರರ ಪರವಾಗಿ ದೆಹಲಿ ಸಿಎಂ ನಿಲ್ಲುವುದಾದರೆ ಅವರನ್ನು ಭಯೋತ್ಪಾದಕ ಎಂದೇ ಕರೆಯಬೇಕು. ಉಗ್ರರ ಅಡಗುತಾಣದ ಮೇಲೆ ದೇಶದ ಸೈನಿಕರು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ದೆಹಲಿ ಸಿಎಂ ಅನುಮಾನಿಸುವುದಾದರೆ ಅವರನ್ನು ಭಯೋತ್ಪಾದಕ ಎಂದೇ ಕರೆಯಬೇಕು ಎಂದು ವರ್ಮಾ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇದನ್ನು ಓದಿ: ದೇಶಪ್ರೇಮ ಶಿಕ್ಷಣ; ಮನೆಬಾಗಿಲಿಗೆ ಪಡಿತರ: ಆಪ್ ಪ್ರಣಾಳಿಕೆಯ 27 ಅಂಶಗಳ ಪಟ್ಟಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ