ದೆಹಲಿ ವಿಧಾನಸಭೆ ಚುನಾವಣೆ; ಏನೋ ಮಾಡಲು ಹೋಗಿ ಮುಖಭಂಗ ಮಾಡಿಕೊಂಡ ಬಿಜೆಪಿ ಸಂಸದ ಗೌತಮ್ ಗಂಭೀರ್

ದೆಹಲಿ ಪೂರ್ವ ಸಂಸತ್ ಕ್ಷೇತ್ರದ ಸಂಸದ ಹಾಗೂ ಮಾಜಿ‌ ಕ್ರಿಕೆಟಿಗ ಗೌತಮ್ ಗಂಭೀರ್ ಅವರು, ಶಾಲೆಯೊಂದರ ವಿಡಿಯೋ ಟ್ವೀಟ್ ಮಾಡಿ ಇದು ದೆಹಲಿ ಶಾಲೆ, ಆಮ್ ಆದ್ಮಿ ಪಕ್ಷ ಸರ್ಕಾರಿ ಶಾಲೆಗಳು ಮಾದರಿ ಶಾಲೆ ಎಂದು ಸುಳ್ಳು ಹೇಳುತ್ತಿದೆ.‌ ಇಲ್ಲಿನ ಅವಸ್ಥೆ, ಅವ್ಯವಸ್ಥೆ ನೋಡಿ, ಎಂದು ಟೀಕಿಸಿದ್ದರು.

news18-kannada
Updated:January 28, 2020, 7:32 PM IST
ದೆಹಲಿ ವಿಧಾನಸಭೆ ಚುನಾವಣೆ; ಏನೋ ಮಾಡಲು ಹೋಗಿ ಮುಖಭಂಗ ಮಾಡಿಕೊಂಡ ಬಿಜೆಪಿ ಸಂಸದ ಗೌತಮ್ ಗಂಭೀರ್
ಮನೀಶ್ ಸಿಸೋಡಿಯಾ, ಗೌತಮ್ ಗಂಭೀರ್ ಮತ್ತು ಅರವಿಂದ್ ಕೇಜ್ರಿವಾಲ್.
  • Share this:
ವಿಷಯಾಧಾರಿತವಾಗಿ ಚುನಾವಣೆಗಳು ನಡೆಯಬೇಕು ಎನ್ನುವ ಆಶಯಕ್ಕೆ ಪೂರಕವಾಗಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಗುತ್ತಿರುವ ಬೆಳವಣಿಗೆಗಳು ಆಶಾದಾಯಕವಾದವು. ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಶಿಕ್ಷಣ ಕ್ಷೇತ್ರದ ಬಗ್ಗೆ ಚರ್ಚೆ ಆಗುತ್ತಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ತಮ್ಮ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಕೆಲಸ ನೋಡಿಕೊಂಡು ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ಆಮ್ ಆದ್ಮಿ ಪಕ್ಷದ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿಲ್ಲ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆಮ್ ಆದ್ಮಿ ಪಕ್ಷ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಈ ಬಾರಿಯ ಫಲಿತಾಂಶ ಬಂದ ನಂತರ ಗೊತ್ತಾಗುತ್ತದೆ.‌ ಈ ಬಾರಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ಫೇಲ್ ಆಗಲಿದ್ದಾರೆ ಎಂಬರ್ಥದಲ್ಲಿ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರವಿಂದ ಕೇಜ್ರಿವಾಲ್ "ಇಂಥ ಹೇಳಿಕೆಗಳ ಮುಖಾಂತರ ದೆಹಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 16 ಲಕ್ಷ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಶಿಕ್ಷಕರಿಗೆ ಅಮಿತ್ ಶಾ ಅವಮಾನ‌ ಮಾಡಿದ್ದಾರೆ," ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ದೆಹಲಿ ಪೂರ್ವ ಸಂಸತ್ ಕ್ಷೇತ್ರದ ಸಂಸದ ಹಾಗೂ ಮಾಜಿ‌ ಕ್ರಿಕೆಟಿಗ ಗೌತಮ್ ಗಂಭೀರ್ ಅವರು, ಶಾಲೆಯೊಂದರ ವಿಡಿಯೋ ಟ್ವೀಟ್ ಮಾಡಿ "ಇದು ದೆಹಲಿ ಶಾಲೆ, ಆಮ್ ಆದ್ಮಿ ಪಕ್ಷ ಸರ್ಕಾರಿ ಶಾಲೆಗಳು ಮಾದರಿ ಶಾಲೆ ಎಂದು ಸುಳ್ಳು ಹೇಳುತ್ತಿದೆ.‌ ಇಲ್ಲಿನ ಅವಸ್ಥೆ, ಅವ್ಯವಸ್ಥೆ ನೋಡಿ," ಎಂದು ಟೀಕಿಸಿದ್ದರು. ಅಲ್ಲದೆ ನೇರವಾಗಿ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು‌ ನಿಂದಿಸಿದ್ದರು.

ಇದನ್ನು ಓದಿ: ಶಾಹೀನ್​ ಬಾಗ್​ನ ಪ್ರತಿಭಟನಾಕಾರರು ಮನೆಗೆ ನುಗ್ಗಿ ಅತ್ಯಾಚಾರ ನಡೆಸಬಹುದು; ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅರವಿಂದ ಕೇಜ್ರಿವಾಲ್ ಮತ್ತು ಮನೀಷ್ ಸಿಸೋಡಿಯಾ, "ಅದು ಹಳೆಯ ಸ್ಕೂಲು, ಅದರ ಬದಲು ಈಗ ಅತ್ಯಾಧುನಿಕವಾದ ಕಟ್ಟಡ ಕಟ್ಟಲಾಗುತ್ತಿದೆ. ಹಳೆಯ ಕಟ್ಟಡ ಕೆಡಗುವ ಹಾಗೂ ನೂತನ ಕಟ್ಟಡ‌ ಕಟ್ಟುವ ಬಗ್ಗೆ ನೊಟೀಸ್ ಬೋರ್ಡ್ ನಲ್ಲಿ ಮಾಹಿತಿ ನೀಡಲಾಗಿದೆ. ಸಂಸದರಾದ ಗೌತಮ್ ಗಂಭೀರ್ ಮೊದಲು ಶಾಲೆ ಯಾವುದೆಂದು ತಿಳಿದು ಒಳಗಡೆ ಹೋಗಲಿ, ಬದಲಾವಣೆ ಬಗ್ಗೆ ಗಮನಿಸಲಿ," ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಗೌತಮ್ ಗಂಭೀರ್ ಏನೋ ಮಾಡಲು ಹೋಗಿ ಏನನ್ನೋ‌ ಮಾಡಿಕೊಂಡು ಮುಖಭಂಗಕ್ಕೆ ಒಳಗಾಗಿದ್ದಾರೆ.
First published: January 28, 2020, 7:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading