Kerala BJP - ಕೇರಳದಲ್ಲಿ ಬಿಜೆಪಿಗೆ ಅಧಿಕಾರ ಅಥವಾ ಕಿಂಗ್ ಮೇಕರ್: ಮೆಟ್ರೋಮ್ಯಾನ್ ಇ ಶ್ರೀಧರನ್ ವಿಶ್ವಾಸ

ಕೇರಳದಲ್ಲಿ 2016ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಭರ್ಜರಿ ಗೆಲುವು ದಾಖಲಿಸುವ ಹುಮ್ಮಸ್ಸಿನಲ್ಲಿದೆ. ಬಿಜೆಪಿಯ ಮುಂದಾಳುಗಳಲ್ಲಿ ಒಬ್ಬರಾಗಿರುವ 88 ವರ್ಷದ ಇ ಶ್ರೀಧರನ್ ಅವರು ಬಿಜೆಪಿ ಕನಿಷ್ಠ ಕಿಂಗ್ ಮೇಕರ್ ಆದರೂ ಆಗಬಹುದು ಎಂದಿದ್ದಾರೆ.

ಇ ಶ್ರೀಧರನ್

ಇ ಶ್ರೀಧರನ್

  • Share this:
ತಿರುವನಂತಪುರಂ(ಮಾ. 25): ದೇವರನಾಡೆನಿಸಿರುವ ಕೇರಳದಲ್ಲಿ ಕಮಲ ಹುಲುಸಾಗಿ ಬೆಳೆಯುವ ವಿಶ್ವಾಸವನ್ನು ಕೇರಳ ಬಿಜೆಪಿಯ ನೇತಾರ ಇ ಶ್ರೀಧರನ್ (E Sreedharan) ವ್ಯಕ್ತಪಡಿಸಿದ್ದಾರೆ. ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೇ ಬೆರಳೆಣಿಕೆಯ ಕ್ಷೇತ್ರಗಳನ್ನ ಗೆಲ್ಲುತ್ತಿದ್ದ ಬಿಜೆಪಿ ಈಗ ವಿಧಾನಸಭೆ ಚುನಾವಣೆಯಲ್ಲಿ (Kerala Assembly Elections) ಎಷ್ಟು ಸ್ಥಾನ ಗೆಲ್ಲಬಲ್ಲುದು ಎಂಬುದು ಕುತೂಹಲ. ಆದರೆ, ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಸೇರಿದಂತೆ ದೇಶದ ಹಲವು ಮೆಟ್ರೋ ರೈಲು ಯೋಜನೆಗಳ ರೂವಾರಿ ಎನಿಸಿರುವ ಇ ಶ್ರೀಧರನ್ ಅವರ ಪ್ರಕಾರ ಕೇರಳದಲ್ಲಿ ಬಿಜೆಪಿ (BJP) ಸಂಪೂರ್ಣ ಬಹುಮತ ಪಡೆಯಲಿದೆ. ಒಂದು ವೇಳೆ ಬಹುಮತ ಬರದಿದ್ದರೂ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸುವಂಥ ಕಿಂಗ್ ಮೇಕರ್ ಆದರೂ ಆಗಲಿದೆಯಂತೆ.

“ಕೇರಳದಲ್ಲಿ ಬಿಜೆಪಿ ಗೆಲ್ಲುವ ಅವಕಾಶ ಬಹಳಷ್ಟಿದೆ. ಪಕ್ಷಕ್ಎ ಸಂಪೂರ್ಣ ಬಹುಮತ ಬರಬಹುದು. ಅಥವಾ ಕಿಂಗ್ ಮೇಕರ್ ಆಗುವಷ್ಟಾದರೂ ಸ್ಥಾನಗಳು ಸಿಗಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇ ಶ್ರೀಧರನ್ ಅವರು ತಾವು ಸ್ಪರ್ಧಿಸಿರುವ ಪಾಲಕ್ಕಾಡ್ ಕ್ಷೇತ್ರದಲ್ಲಿ ನಿಶ್ಚಿತವಾಗಿ ಗೆಲ್ಲುತ್ತೇನೆ ಎಂದೂ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಮಲಂಪುಳದಲ್ಲಿ ಅಮಿತ್ ಶಾ ಮತ್ತು ಶ್ರೀಧರನ್ ಪಾಲ್ಗೊಂಡಿದ್ದ ರೋಡ್ ಶೋಗೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ರೋಡ್ ಶೋವನ್ನು ಉಲ್ಲೇಖಿಸಿರುವ ಶ್ರೀಧರನ್, “ಇದು ಜನರ ಮನಸ್ಸನ್ನು ನಿರಾಳಗೊಳಿಸಿದೆ. ಎಲ್​ಡಿಎಫ್ ಮತ್ತು ಯುಡಿಎಫ್ ಸರ್ಕಾರಗಳಿಂದ ನಿರಾಸೆಗೊಂಡಿರುವ ಜನರು ಬಿಜೆಪಿಯತ್ತ ತಿರುಗುತ್ತಿದ್ಧಾರೆ. ಚುನಾವಣೆಯಲ್ಲಿ ಜನರು ಬಿಜೆಪಿಗೇ ಮತ ಚಲಾಯಿಸುತ್ತಾರೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಚಂದ್ರಯಾನ, ಹೆಲಿಕಾಪ್ಟರ್, ಕೋಟಿ ಹಣ, ಬಂಗಲೆ ಇತ್ಯಾದಿ ಇತ್ಯಾದಿ – ತಮಿಳುನಾಡಲ್ಲಿ ಒಬ್ಬ ಅಭ್ಯರ್ಥಿ ಕೊಟ್ಟ ಭರವಸೆಗಳು

ಸುದೀರ್ಘ ವೃತ್ತಿ ಜೀವನದಲ್ಲಿ ತಂತ್ರಜ್ಞರಾಗಿದ್ದ ಇ ಶ್ರೀಧರನ್ 88 ವರ್ಷದ ಇಳಿವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದಾರೆ. ದೇವರನಾಡಿನಲ್ಲಿ ಕಮಲ ಅರಳಿಸುವ ಅತ್ಯಂತ ಕಷ್ಟದ ಕಾಯಕವನ್ನು ಅವರ ಹೆಗಲ ಮೇಲೆ ಹೊತ್ತಿದ್ಧಾರೆ. ಕೇರಳದಲ್ಲಿ ಅತ್ಯಗತ್ಯವಾಗಿರುವ ಉದ್ಯೋಗ ಸೃಷ್ಟಿ ಮಾಡುವುದಾಗಿ ಅವರು ಭರವಸೆ ನೀಡಿದ್ಧಾರೆ.

“ಕೇರಳದಲ್ಲಿ ಇಂದು ಹೆಚ್ಚಿನ ಕೈಗಾರಿಕೆಗಳು ನೆಲೆ ನಿಂತಿಲ್ಲ. ಕೈಗಾರಿಕೆಗಳಿಂದ ಮಾತ್ರ ಈ ರಾಜ್ಯಕ್ಕೆ ಸಂಪತ್ತು ಹರಿಯಲು ಸಾಧ್ಯ. ಕೇರಳದಲ್ಲಿ ಅತಿ ಹೆಚ್ಚು ನಿರುದ್ಯೋಗಿಗಳಿರುವುದರಿಂದ ಇಲ್ಲಿ ಉದ್ಯೋಗ ಸೃಷ್ಟಿ ಬಹಳ ಅಗತ್ಯವಿದೆ.. ಇಲ್ಲಿನ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇನೆ. ರಾಜ್ಯದಲ್ಲಿ ಪಾರದರ್ಶಕವಾದ, ಕಾರ್ಯಕ್ಷಮತೆ ಇರುವ ಹಾಗೂ ಭ್ರಷ್ಟಾಚಾರಮುಕ್ತ ಸರ್ಕಾರವನ್ನು ತರಲು ಪ್ರಯತ್ನಿಸುತ್ತೇನೆ” ಎಂದು ಇ ಶ್ರೀಧರನ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ ಗೃಹ ಸಚಿವ‌ರ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

ಕೇರಳ ವಿಧಾನಸಭೆಯ 140 ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಮತದಾನ ನಡೆಯುತ್ತಿದೆ. ಎಲ್​ಡಿಎ, ಯುಡಿಎ ಮೈತ್ರಿಕೂಟಗಳ ಎದುರು ಎನ್​ಡಿಎ ಈ ಬಾರಿ ಒಂದಷ್ಟು ಸೆಡ್ಡು ಹೊಡೆಯುವ ನಿರೀಕ್ಷೆ ಇದ್ದು ತ್ರಿಕೋನ ಹಣಾಹಣಿ ನಡೆಯುವ ಸಂಭವ ಇದೆ. ಕೇರಳದ ಎನ್​ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಜೊತೆ ಇರುವ ಮತ್ತೊಂದು ಪ್ರಮುಖ ಪಕ್ಷ ಭಾರತ್ ಧರ್ಮ ಜನಸೇನಾ. ಕೆ ಸುರೇಂದ್ರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಬಿಜೆಪಿ ಒಟ್ಟು 115 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಭಾರತ್ ಧರ್ಮ ಜನ ಸೇನಾ ಪಕ್ಷದ ಅಭ್ಯರ್ಥಿಗಳು 21 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದಾರೆ.

ಈ ಬಾರಿಯ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಲವ್ ಜಿಹಾದ್ ಕಾನೂನು ರೂಪಿಸುವ ವಿಚಾರವನ್ನು ಪ್ರಧಾನವಾಗಿ ಪ್ರಸ್ತಾಪಿಸಿದೆ. ಕೇರಳದಲ್ಲಿ ಪ್ರಬಲವಾಗಿರುವ ಕ್ರೈಸ್ತ ಸಮುದಾಯದವರಿಂದ ಲವ್ ಜಿಹಾದ್ ಮೂಲಕ ಒಂದಷ್ಟು ಬೆಂಬಲ ಸಿಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಹಾಗೆಯೇ, ಶಬರಿಮಲೆ ದೇಗುಲದ ಸಂಪ್ರದಾಯವನ್ನು ಮರುಸ್ಥಾಪನೆ ಮಾಡುವ ಆಶ್ವಾಸನೆ ಕೂಡ ಬಿಜೆಪಿ ಪ್ರಣಾಳಿಕೆಯಲ್ಲಿದೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಜಯಿಸಿದ್ದ ಬಿಜೆಪಿ ಈ ಬಾರಿ ಎಷ್ಟುರ ಮಟ್ಟಿಗೆ ಗೆಲುವು ಸಾಧಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.
Published by:Vijayasarthy SN
First published: