• Home
  • »
  • News
  • »
  • national-international
  • »
  • Lalu Prasad Yadav: ಲಾಲು ಪ್ರಸಾದ್‌ ಯಾದವ್‌ಗೆ ಮಗಳಿಂದಲೇ ಕಿಡ್ನಿ ದಾನ: ಬಿಜೆಪಿ ನಾಯಕರ ಶ್ಲಾಘನೆ

Lalu Prasad Yadav: ಲಾಲು ಪ್ರಸಾದ್‌ ಯಾದವ್‌ಗೆ ಮಗಳಿಂದಲೇ ಕಿಡ್ನಿ ದಾನ: ಬಿಜೆಪಿ ನಾಯಕರ ಶ್ಲಾಘನೆ

ಅಪ್ಪ, ಮಗಳು

ಅಪ್ಪ, ಮಗಳು

ಪ್ರಸ್ತುತ ಲಾಲು ಯಾದವ್ ಜಾಮೀನಿನ ಮೇಲೆ ಹೊರಗಿದ್ದಾರೆ. ಮೇವು ಹಗರಣದಲ್ಲಿ ಅವರು ಅನೇಕ ಪ್ರಕರಣಗಳನ್ನು ಎದುರಿಸುತ್ತಿದ್ದು, ಜೈಲು ಶಿಕ್ಷೆಯನ್ನು ಕೂಡ ಅನುಭವಿಸಿದ್ದಾರೆ.

  • Share this:

ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಬಿಹಾರದ ಮಾಜಿ ಸಿಎಂ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರಿಗೆ ಅವರ ಮಗಳು ರೋಹಿಣಿ ಆಚಾರ್ಯ (Rohini Acharya) ಮೂತ್ರಪಿಂಡ ದಾನ ಮಾಡಿದ್ದಾರೆ. ಸೋಮವಾರ ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ (Kidney Transplant) ನಡೆದಿದ್ದು, ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಲಾಲು ಪ್ರಸಾದ್ ಯಾದವ್ ಮತ್ತು ರೋಹಿಣಿ ಆಚಾರ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಯಾದವ್ ಅವರ ಕುಟುಂಬ ತಿಳಿಸಿದೆ.
ತಂದೆಗೆ ಕಿಡ್ನಿ ದಾನ ನೀಡುತ್ತಿರುವ ಬಗ್ಗೆ ಕುಟುಂಬದಿಂದ ಮೊದಲು ವಿರೋಧ ವ್ಯಕ್ತವಾಗಿತ್ತು, ನಂತರ ಎಲ್ಲರೂ ಒಪ್ಪಿಕೊಂಡ ನಂತರ ರೋಹಿಣಿ ತಂದೆಗೆ ಕಿಡ್ನಿ ದಾನ ಮಾಡುವ ಬಗ್ಗೆ ಖಚಿತಪಡಿಸಿದ್ದರು.


ಪ್ರಸ್ತುತ ಮೂತ್ರಪಿಂಡ ಕಸಿ ಯಶಸ್ವಿಯಾಗಿದ್ದು ವೈದ್ಯರು 40ರ ಹರೆಯದ ರೋಹಿಣಿ ಆಚಾರ್ಯ ಅವರ ಕಿಡ್ನಿಯನ್ನು 74 ವರ್ಷದ ಹಿರಿಯ ರಾಜಕಾರಣಿ ಲಾಲು ಪ್ರಸಾದ್‌ಗೆ ಅಳವಡಿಸಿದ್ದಾರೆ.


ರೋಹಿಣಿ ಆಚಾರ್ಯಗೆ ನಾಯಕರಿಂದ ಪ್ರಶಂಸೆ
ತಂದೆಗೆ ಸ್ವತಃ ಮಗಳೇ ಕಿಡ್ನಿ ದಾನ ಮಾಡಿರುವ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೋಹಿಣಿ ಆಚಾರ್ಯ ಅವರ ತ್ಯಾಗಕ್ಕೆ, ಧೈರ್ಯಕ್ಕೆ ರಾಜಕಾರಣಿಗಳಿಂದ ಹಿಡಿದು ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ನೀವು ಒಂದು ಉದಾಹರಣೆಯಾಗಿ, ಮಾದರಿಯಾಗಿ ನಿಲ್ಲುತ್ತೀರಿ ಎಂದು ಹಲವರು ರೋಹಿಣಿಯವರನ್ನು ಮೆಚ್ಚಿಕೊಂಡಿದ್ದಾರೆ.


"ಭವಿಷ್ಯದ ಪೀಳಿಗೆಗೆ ನೀವು ಮಾದರಿ"
ಲಾಲು ಪ್ರಸಾದ್ ಯಾದವ್ ಅವರ ತೀವ್ರ ಟೀಕಾಕಾರರಲ್ಲಿ ಒಬ್ಬರಾದ ಫೈರ್‌ಬ್ರಾಂಡ್ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಕೂಡ ರೋಹಿಣಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ರೋಹಿಣಿ ತಮ್ಮ ಹಾವಭಾವದ ಮೂಲಕ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು.


"ರೋಹಿಣಿ ಆಚಾರ್ಯ ಒಬ್ಬರು ಮಾದರಿ ಮಗಳು, ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ. ಭವಿಷ್ಯದ ಪೀಳಿಗೆಗೆ ನೀವು ಮಾದರಿಯಾಗಿದ್ದೀರಿ" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.


"ಹೆಣ್ಣು ಮಕ್ಕಳಿಲ್ಲದ್ದಕ್ಕೆ ನನಗೆ ಬೇಜಾರಾಗುತ್ತಿದೆ"
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ರೋಹಿಣಿ ಅವರನ್ನು ಹೊಗಳಿದ್ದು, "ನನಗೆ ಹೆಣ್ಣು ಮಗಳಿಲ್ಲ. ಇಂದು ರೋಹಿಣಿ ಆಚಾರ್ಯರನ್ನು ನೋಡಿದ ನಂತರ ಹೆಣ್ಣು ಮಕ್ಕಳಿಲ್ಲದ್ದಕ್ಕೆ ಬೇಜಾರಾಗುತ್ತಿದೆ. ನನಗೆ ಮಗಳನ್ನು ನೀಡದ ದೇವರನ್ನು ದೂಷಿಸುತ್ತೇನೆ ಮತ್ತು ಅವನೊಂದಿಗೆ ಜಗಳವಾಡಲು ಬಯಸುತ್ತೇನೆ" ಎಂದು ದುಬೆ ಟ್ವೀಟ್ ಮಾಡಿದ್ದಾರೆ.


ಸಿಂಗಾಪುರದಲ್ಲಿ ನೆಲೆಸಿರುವ ಲಾಲು ಪ್ರಸಾದ್ ಯಾದವ್ ಅವರ ಎರಡನೇ ಪುತ್ರಿ ರೋಹಿಣಿ ಆಗಿದ್ದು, ಹಿರಿಯ ಮಗಳು ಮಿಸಾ ಭಾರತಿ. ಯಾದವ್ ಅವರ ಹಿರಿಯ ಮಗಳು ಮಿಸಾ ಭಾರತಿ ನಿನ್ನೆ ಸಂಜೆ ಶಸ್ತ್ರಚಿಕಿತ್ಸೆಯ ನಂತರ ಹಲವಾರು ಫೋಟೋ ಮತ್ತು ವೀಡಿಯೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಮಿಸಾ ಮತ್ತು ರೋಹಿಣಿ ಅವರ ಕಿರಿಯ ಸಹೋದರರು ಕೂಡ ಆಸ್ಪತ್ರೆಯಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ತಂದೆ ಮತ್ತು ಅಕ್ಕ ಆರೋಗ್ಯವಾಗಿದ್ದಾರೆ
"ತಂದೆಯವರ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ, ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ ಸ್ಥಳಾಂತರಿಸಲಾಯಿತು. ರೋಹಿಣಿ ಆಚಾರ್ಯ ಮತ್ತು ಅಪ್ಪ ಇಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು" ಎಂದು ಮಿಸಾ ಭಾರತಿ ಬರೆದಿದ್ದಾರೆ.


ಇದನ್ನೂ ಓದಿ: Hyderabad: ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ರುದ್ರಭೂಮಿ ನಿರ್ಮಾಣ


ತೇಜಸ್ವಿ ಯಾದವ್ ಮತ್ತು ಮಿಸಾ ಭಾರತಿ ಅವರು ತಂದೆಯೊಂದಿಗೆ ಸಿಂಗಾಪುರದಲ್ಲಿಯೇ ಇದ್ದಾರೆ. ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯಾದವ್‌ಗೆ ವೈದ್ಯರು ಈ ವರ್ಷದ ಆರಂಭದಲ್ಲಿ ಕಿಡ್ನಿ ಕಸಿ ಮಾಡುವಂತೆ ಸಲಹೆ ನೀಡಿದ್ದರು.


ಬಿಹಾರದಲ್ಲಿ ವಿಶೇಷ ಪೂಜೆ
ಶಸ್ತ್ರಚಿಕಿತ್ಸೆಗೂ ಮುನ್ನ ರೋಹಿಣಿ ತನ್ನ ತಂದೆ ಲಾಲು ಪ್ರಸಾದ್‌ ಜೊತೆ ಕೆಲವು ಫೋಟೋಗಳನ್ನು ಹಂಚಿಕೊಂಡು ಎಲ್ಲವನ್ನೂ ಎದುರಿಸಲು ಸಿದ್ಧವಾಗಿದ್ದೇವೆ ಎಂದು ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು.


ಇನ್ನೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲೆಂದು ಬಿಹಾರದಾದ್ಯಂತ ದೇವಾಲಯಗಳಲ್ಲಿ ಹೋಮಹವನ, ಮಹಾಮೃತ್ಯುಂಜಯ ಜಪ, ಪ್ರಾರ್ಥನೆಯನ್ನು ಸಲ್ಲಿಸಲಾಯಿತು.


ಇದನ್ನೂ ಓದಿ: Himachal Pradesh Exit Poll Result: ಕಾಂಗ್ರೆಸ್​-ಬಿಜೆಪಿ ಮಧ್ಯೆ ಟಫ್​ ಫೈಟ್​, 4 ಸ್ಥಾನಗಳಿಂದ ಬದಲಾಗಲಿದೆ ರಾಜಕೀಯದಾಟ!


ಪ್ರಸ್ತುತ ಲಾಲು ಯಾದವ್ ಜಾಮೀನಿನ ಮೇಲೆ ಹೊರಗಿದ್ದಾರೆ. ಮೇವು ಹಗರಣದಲ್ಲಿ ಅವರು ಅನೇಕ ಪ್ರಕರಣಗಳನ್ನು ಎದುರಿಸುತ್ತಿದ್ದು, ಜೈಲು ಶಿಕ್ಷೆಯನ್ನು ಕೂಡ ಅನುಭವಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು