ಆಲಿಘಡ (ಜೂನ್ 06); ಕಳ್ಳಭಟ್ಟಿ ಕುಡಿದು 100 ಜನ ಮೃತಪಟ್ಟ ಆಲಿಗಡ ಕಳ್ಳಭಟ್ಟಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಬಿಜೆಪಿ ಮುಖಂಡ ರಿಷಿ ಶರ್ಮಾನನ್ನು ಪೊಲೀಸರು ಭಾನುವಾರ ಬೆಳಗ್ಗೆ ಬುಲಂದ್ಶಹರ್ ಗಡಿ ಬಳಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ದುರಂತಕ್ಕೆ ಕಾರಣವಾಗಿದ್ದ ರಿಷಿ ಶರ್ಮಾ, ಸುಮಾರು 10 ದಿನಗಳ ಕಾಲ ತಲೆ ಮರೆಸಿಕೊಂಡಿದ್ದು, ಈತನನ್ನು ಪತ್ತೆ ಹಚ್ಚಿದವರಿಗೆ 1 ಲಕ್ಷ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು. ಬಂಧಿತ ರಿಷಿ ಶರ್ಮಾ ಅವರ ಪತ್ನಿ ಮತ್ತು ಮಗನನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಈ ಸುದ್ದಿ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ಇದೀಗ ದುರಂತದ ಹಿಂದಿರುವುದು ಬಿಜೆಪಿ ಮುಖಂಡ ರಿಷಿ ಶರ್ಮಾ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಕಳವಳ ಮೂಡಿದೆ.
"ಕಳೆದ 10 ದಿನಗಳಿಂದ ಉತ್ತರಾಖಂಡ, ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಪೊಲೀಸರು ಸುಮಾರು 500 ದೂರವಾಣಿ ಕರೆ ವಿವರಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿತ್ತು, ಸುಮಾರು 100 ಮಾಹಿತಿದಾರರನ್ನು ಸಕ್ರಿಯಗೊಳಿಸಿ, ಆರು ಪೊಲೀಸ್ ತಂಡಗಳನ್ನು ರಿಷಿ ಶರ್ಮಾ ಅವರನ್ನು ಬಂಧಿಸಲು ರಚಿಸಲಾಗಿತ್ತು ಎಂದು ಅಲಿಗಡದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಕಲಾನಿಧಿ ನೈಥಾನಿ ಹೇಳಿದ್ದಾರೆ.
"ನಾವು ಈಗಾಗಲೇ ವಿಪಿನ್ ಯಾದವ್ ಅವರನ್ನು ಬಂಧಿಸಿದ್ದೇವೆ, ಆತನನ್ನು ಪತ್ತೆ ಹಚ್ಚಿದರೆ 50,000 ರೂಪಾಯಿ ಬಹುಮಾನ, ಅನಿಲ್ ಚೌಧರಿ ಮತ್ತು ಅವರ ಸೋದರ ಮಾವ ನೀರಜ್ ಚೌಧರಿ ಅವರನ್ನು ಪತ್ತೆ ಹಚ್ಚಿದರೆ 25,000 ರೂಪಾಯಿ ಬಹುಮಾನ, ಮುನಿಶ್ ಶರ್ಮಾ (ರಿಷಿ ಶರ್ಮಾ ಅವರ ಸಹೋದರ) ಮತ್ತು ಶಿವ ಕುಮಾರ್ ಪತ್ತೆ ಹಚ್ಚಿದರೆ 25,000 ರೂಪಾಯಿ ಬಹುಮಾನ ಘೋಷಿಸಲಾಗಿತ್ತು" ಎಂದ ಪೊಲೀಸರು ಹೇಳಿದ್ದಾರೆ.
ಇದು ಕಳ್ಳಭಟ್ಟಿ ಎಂದು ಅಧಿಕಾರಿಗಳು ಘೋಷಿಸಿದ ಬೆನ್ನಲ್ಲೇ ಮದ್ಯವನ್ನು ಮಾರುಕಟ್ಟೆ ಯಿಂದ ತೆಗೆದುಹಾಕಲಾಗಿದೆ. ಅಷ್ಟರಲ್ಲಿ ಅಲಿಗಡದಾದ್ಯಂತ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರು ದಾಳಿ ಪ್ರಾರಂಭಿಸಿದ ನಂತರ ಮದ್ಯವನ್ನು ಕಾಲುವೆಗಳಲ್ಲಿ ಮತ್ತು ದೂರದ ಸ್ಥಳಗಳಲ್ಲಿ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಮದ್ಯದ ಬಾಟಲಿಗಳನ್ನು ಹುಡುಕಲು ಗಂಗಾ ಕಾಲುವೆಯಲ್ಲಿ ನೀರಿನ ಹರಿವನ್ನು ನಿಲ್ಲಿಸುವಂತೆ ನೀರಾವರಿ ಇಲಾಖೆಗೆ ತಿಳಿಳಿ, ಹತ್ತಿರದ ಜಿಲ್ಲೆಗಳಾದ ಹತ್ರಾಸ್, ಮಥುರಾ ಮತ್ತು ಇಟಾಗಳ ಪೊಲೀಸರಿಗೂ ಮಾಹಿತಿ ನೀಡಲಾಯಿತು. ಕಳೆದ ಶನಿವಾರ ಹಥಾರಸ್ ಜಿಲ್ಲೆಯ ಕಾಲುವೆಯಿಂದ 530 ಕ್ವಾರ್ಟರ್ ಮದ್ಯ ಪತ್ತೆಯಾಗಿದೆ. ಈ ಸಂಬಂಧ ಕೆಲವು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಅಲಿಗಡ ವಿವಿಧ ಪೊಲೀಸ್ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ ಮತ್ತು 61 ಜನರನ್ನು ಬಂಧಿಸಲಾಗಿದೆ ಎಂದು ನೈಥಾನಿ ಹೇಳಿದರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಕೋಟಿ ಮೌಲ್ಯದ ಆಸ್ತಿಯನ್ನು ಅಲಿಗಡ ಆಡಳಿತವು ನೆಲಸಮಗೊಳಿಸಿದೆ. 100 ಕೋಟಿ ಮೌಲ್ಯದ ಹೆಚ್ಚಿನ ಆಸ್ತಿಗಳನ್ನು ಗುರುತಿಸಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ