ದೆಹಲಿ ಚುನಾವಣೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟ: ಬಿಜೆಪಿ ಅಭ್ಯರ್ಥಿ ಕಪಿಲ್​​ ಮಿಶ್ರಾ

ಪೌರತ್ವ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್​​ ಬಾಗ್​​ನಲ್ಲಿ ಹೋರಾಟ ನಡೆಯುತ್ತಿದೆ. ದೆಹಲಿಯ ಶಾಹೀನ್​​ ಬಾಗ್​​ಗೆ ಪಾಕಿಸ್ತಾನ ಪ್ರವೇಶಿಸಿದೆ. ಅದರ ಜತೆಗೆ ಇಲ್ಲಿ ಸಣ್ಣಸಣ್ಣ ಪಾಕಿಸ್ತಾನಗಳು ಶುರುವಾಗಿವೆ- ಕಪಿಲ್​​ ಮಿಶ್ರಾ

ಬಿಜೆಪಿ ನಾಯಕ ಕಪಿಲ್ ಮಿಶ್ರಾ

ಬಿಜೆಪಿ ನಾಯಕ ಕಪಿಲ್ ಮಿಶ್ರಾ

 • Share this:
  ನವದೆಹಲಿ(ಜ.23): ಮುಂದಿನ ತಿಂಗಳು ಫೆಬ್ರವರಿ 8ನೇ ತಾರೀಕಿನಂದು ನಡೆಯುವ ದೆಹಲಿ ವಿಧಾನಸಭಾ ಚುನಾವಣೆಯೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೋರಾಟ ಎಂದು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ವಿವಾದಾತ್ಮಕ ಟ್ವೀಟ್​​ ಮಾಡಿದ್ದಾರೆ. ಇಂದು ಟ್ವೀಟ್​​ ಮಾಡಿರುವ ಇಲ್ಲಿನ ಮೋಡೆಲ್​​ ಟೌನ್​​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಪಿಲ್​​ ಮಿಶ್ರಾ, ದೆಹಲಿ ವಿಧಾನಸಭೆ ಚುನಾವಣೆಯೂ ಪಾಕ್​​ ಮತ್ತು ಭಾರತದ ನಡುವಿನ ಹೋರಾಟ. ಬಿಜೆಪಿಗೆ ಮತ ನೀಡಿ ಭಾರತವನ್ನು ಗೆಲ್ಲಿಸಿ ಎಂದು ಬರೆದುಕೊಂಡಿದ್ದಾರೆ.  ಪೌರತ್ವ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್​​ ಬಾಗ್​​ನಲ್ಲಿ ಹೋರಾಟ ನಡೆಯುತ್ತಿದೆ. ದೆಹಲಿಯ ಶಾಹೀನ್​​ ಬಾಗ್​​ಗೆ ಪಾಕಿಸ್ತಾನ ಪ್ರವೇಶಿಸಿದೆ. ಅದರ ಜತೆಗೆ ಇಲ್ಲಿ ಸಣ್ಣಸಣ್ಣ ಪಾಕಿಸ್ತಾನಗಳು ಶುರುವಾಗಿವೆ. ಶಾಹೀನ್​​ ಬಾಗ್​, ಚಾಂದ್​​ ಬಾಗ್​​​, ಇಂದರ್​​ ಲೋಕ್​​ ಪ್ರದೇಶದಲ್ಲಿ ಭಾರತ ಕಾನೂನು ಪಾಲನೆಯಾಗುತ್ತಿಲ್ಲ ಎಂದು ಕಪಿಲ್​​ ಮಿಶ್ರಾ ಮತ್ತೊಂದು ಟ್ವೀಟ್​ ಮಾಡಿದ್ದಾರೆ. ಇದೀಗ ಕಪಿಲ್​​ ಮಿಶ್ರಾ ಮಾಡಿರುವ ಟ್ವೀಟ್​​ ಭಾರೀ ವಿವಾದಕ್ಕೀಡಾಗಿದೆ.

  ದೆಹಲಿಯ ಆರನೇ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಫೆಬ್ರವರಿ 8ರಂದು ಏಕ ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆ. 11ರಂದು ಮತ ಎಣಿಕೆ ಆಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ತಿಳಿಸಿದ್ದಾರೆ. ಈ ಮಧ್ಯೆ ಇಲ್ಲಿನ ವಿಧಾನಸಭೆ ಚುನಾವಣೆ ಗೆಲ್ಲಲು ಮುಖ್ಯಮಂತ್ರಿ ಅರವಿಂದ್​​​ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಮತ್ತು ಕಾಂಗ್ರೆಸ್​​​ ಕಸರತ್ತು ನಡೆಸುತ್ತಿದೆ.

  ಇದನ್ನೂ ಓದಿ: ಅಹ್ಮದಾಬಾದ್​ನಲ್ಲಿ ಆಗುತ್ತಾ ‘ಕೇಮ್ ಚೋ ಟ್ರಂಪ್‘ ಕಾರ್ಯಕ್ರಮ? ದೆಹಲಿಗಾಗಿ ಪಟ್ಟು ಹಿಡಿದ ಅಮೆರಿಕ ಅಧ್ಯಕ್ಷ

  ಇಲ್ಲಿನ ವಿಧಾನಸಭೆ 70 ಸದಸ್ಯರ ಬಲ ಹೊಂದಿದೆ. 2015ರಲ್ಲಿ ನಡೆದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಬರೋಬ್ಬರಿ 67 ಸ್ಥಾನಗಳನ್ನು ಗೆದ್ದು ಬಹುತೇಕ ಕ್ಲೀನ್ ಸ್ವೀಪ್ ಮಾಡಿತ್ತು. ಅದಕ್ಕೂ ಹಿಂದೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಬಿಜೆಪಿ 31, ಆಪ್ ಪಕ್ಷ 28 ಹಾಗೂ ಕಾಂಗ್ರೆಸ್ 8 ಸ್ಥಾನ ಗಳಿಸಿದ್ದವು. ಬಿಜೆಪಿ ಸರ್ಕಾರ ರಚಿಸಲು ಮುಂದೆ ಬರಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಸನ್ನಿಹಿತ ಎಂದನಿಸುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಆಮ್ ಆದ್ಮಿ ಅಧಿಕಾರ ರಚಿಸಿತ್ತು. ಕೆಲವೇ ತಿಂಗಳ ಹಿಂದಷ್ಟೇ ಜನ್ಮತಾಳಿದ್ದ ಆಮ್ ಆದ್ಮಿ ಪಕ್ಷ ಒಂದೇ ವರ್ಷದ ಅಂತರದಲ್ಲಿ ರಾಜ್ಯವೊಂದರ ಅಧಿಕಾರ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಅರವಿಂದ್ ಕೇಜ್ರಿವಾಲ್ ದಿಲ್ಲಿ ‘ದೊರೆ’ಯಾದರು.
  First published: