ರಾಜ್ಯಸಭಾ ಚುನಾವಣೆ ಲೋಕಸಭೆ ಮೈತ್ರಿಯ ಮುನ್ಸೂಚನೆ: ತೃತೀಯ ರಂಗಕ್ಕೆ ಬಿಜೆಪಿ ಸೆಡ್ಡು

news18
Updated:August 9, 2018, 4:16 PM IST
ರಾಜ್ಯಸಭಾ ಚುನಾವಣೆ ಲೋಕಸಭೆ ಮೈತ್ರಿಯ ಮುನ್ಸೂಚನೆ: ತೃತೀಯ ರಂಗಕ್ಕೆ ಬಿಜೆಪಿ ಸೆಡ್ಡು
ನರೇಂದ್ರ ಮೋದಿ
news18
Updated: August 9, 2018, 4:16 PM IST
ನ್ಯೂಸ್​18 ಕನ್ನಡ

ನವದೆಹಲಿ (ಆ. 9): ಸಂಸತ್​ ಭವನದಲ್ಲಿ ಇಂದು ನಡೆದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್​ಡಿಎ ಬೆಂಬಲಿತ ಅಭ್ಯರ್ಥಿ ಹರಿವಂಶ ಸಿಂಗ್ ಅವರನ್ನು ಸೋಲಿಸಲು ಕೇಂದ್ರ ವಿಪಕ್ಷಗಳು ಟೊಂಕ ಕಟ್ಟಿ ನಿಂತಿದ್ದವು. ಆದರೆ, ಹರಿವಂಶ ಸಿಂಗ್​ ಕನ್ನಡಿಗ ಬಿ.ಕೆ. ಹರಿಪ್ರಸಾದ್​ ವಿರುದ್ಧ ಕೇವಲ 20 ಮತಗಳ ಅಂತರದಿಂದ ಜಯ ನಗೆ ಬೀರಿದರು.

ಹೀಗಾಗಿ, ಎನ್​ಡಿಎ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಲು ಶಕ್ತಿ ಪ್ರದರ್ಶಿಸಿದ ಕಾಂಗ್ರೆಸ್​ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಮುಂದಿನ ಲೋಕಸಭೆ ಚುನಾವಣೆಯ ಮೈತ್ರಿಗೆ ಸಿದ್ದವಾಗಿವೆಯಾ? ಎಂಬ ಚರ್ಚೆ ನಡೆಯುತ್ತಿದೆ. ಇಂದಿನ ರಾಜ್ಯಸಭಾ ಉಪಚುನಾವಣೆ ಮುಂದಿನ ಚುನಾವಣೆಗೆ ವೇದಿಕೆಯಾಗಲಿದೆಯಾ? ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.

ಮೈತ್ರಿ ಪಕ್ಷಗಳಿಗೆ ಬಿಜೆಪಿ ಸೆಡ್ಡು:

ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ತೃತೀಯರಂಗದ ಮಿತ್ರಪಕ್ಷಗಳಲ್ಲಿ ನಡುಕ ಹುಟ್ಟಿಸಿದೆ. ಈ ಗೆಲುವನ್ನೇ ದಾಳವಾಗಿಸಿಕೊಳ್ಳಲು ಹೊರಟಿರುವ ಬಿಜೆಪಿ ತನ್ನ ಎದುರಾಳಿಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಮುಂದಾಗಿದೆ. ಇದರಿಂದಾಗಿ ಲೋಕಸಭೆ ಚುನಾವಣೆಯ ವೇಳೆಗೆ ಕೆಲವು ಪಕ್ಷಗಳಾದರೂ ಎನ್​ಡಿಎ ಮೈತ್ರಿಕೂಟಕ್ಕೆ ಕೈಜೋಡಿಸಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು.

ಬಿಹಾರದ ಮುಖ್ಯಮಂತ್ರಿ ಮತ್ತು ಜೆಡಿಯು ಮುಖಂಡ ನಿತೀಶ್​ ಕುಮಾರ್​ ಅವರನ್ನು ಸಂಪರ್ಕಿಸಿದ್ದ ಪ್ರಧಾನಿ ಮೋದಿ ಜೆಡಿಯು ಸಂಸದರಾದ ಹರಿವಂಶ ನಾರಾಯಣ ಸಿಂಗ್​ ಅವರನ್ನೇ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ತಮಗೆ ಬೆಂಬಲ ನೀಡಿದ್ದ ಸಣ್ಣ ಮೈತ್ರಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಮೋದಿ ಅವರ ಈ ನಡೆ ಲೋಕಸಭೆ ಚುನಾವಣೆಯ ಬಗೆಗಿನ ದೂರದೃಷ್ಟಿಯಿಂದ ತೆಗೆದುಕೊಂಡ ತೀರ್ಮಾನವಾಗಿದೆ ಎಂಬುದು ಹಲವರ ಲೆಕ್ಕಾಚಾರ.

ಜೆಡಿಯು ಪಕ್ಷಕ್ಕೆ ರಾಜ್ಯಸಭೆಯ ಉನ್ನತ ಸ್ಥಾನ ನೀಡುವ ಮೂಲಕ ಪ್ರಸ್ತುತ ಎನ್​ಡಿಎ ಜೊತೆಗೆ ಗುರುತಿಸಿಕೊಂಡಿರುವ ಮಿತ್ರಪಕ್ಷಗಳಲ್ಲಿ ಭರವಸೆ ತುಂಬುವುದು ಇದರ ಹಿಂದಿನ ಉದ್ದೇಶ ಎನ್ನಲಾಗುತ್ತಿದೆ. ಇದರಿಂದ ಮಿತ್ರಪಕ್ಷಗಳನ್ನು ಸುಧಾರಿಸುವುದು ಮತ್ತು ವಿಪಕ್ಷದ ಕಡೆಗೆ ವಾಲದಂತೆ ನೋಡಿಕೊಳ್ಳಲು ಬಿಜೆಪಿಗೆ ಸಹಾಯಕವಾಗಲಿದೆ.
Loading...

ಬಿಜೆಪಿಯ ಜಾಣನಡೆ:

ಒರಿಸ್ಸಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಅವರಿಗೆ ಬಿಜೆಪಿಗೆ ಬೆಂಬಲ ನೀಡಲು ಇಷ್ಟವಿಲ್ಲದಿದ್ದರೂ ಜೆಡಿಯು ಅಭ್ಯರ್ಥಿಯಾದ ಹರಿವಂಶ್​ ಸಿಂಗ್​ಗೆ ಬೆಂಬಲ ಘೋಷಿಸಲು ಯಾವ ಅಭ್ಯಂತರವೂ ಇರಲಿಲ್ಲ. ಅದನ್ನು ಬಳಸಿಕೊಂಡ ಬಿಜೆಪಿ ಈ ಬಾರಿಯ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಬಿಜೆಡಿ ಪಕ್ಷದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಯಿತು. ಅದೇರೀತಿ ತೆಲಂಗಾಣ ಸಿಎಂ ಟಿಆರ್​ಎಸ್​ ಪಕ್ಷದ ಕೆ. ಚಂದ್ರಶೇಖರ ರಾವ್​ ಕೂಡ ಜೆಡಿಯು ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಎನ್​ಡಿಎಗೆ ಬೆಂಬಲ ನೀಡಿದರು. ಇದರಿಂದ ಗೆಲುವು ಕೂಡ ಸುಲಭವಾಯಿತು.

ಎನ್​ಡಿಎ ಮಿತ್ರಪಕ್ಷವಾದ ಶಿವಸೇನೆ ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಎನ್​ಡಿಎಗೆ ಬೆಂಬಲ ನೀಡಲಿಲ್ಲ. ಬದಲಾಗಿ ವಿರೋಧಪಕ್ಷದ ಅಭ್ಯರ್ಥಿಗೆ ಬೆಂಬಲ ಘೋಷಿಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿತ್ತು. ಇದು ಮಹಾರಾಷ್ಟ್ರ ಮತ್ತು ದೇಶದ ಮಟ್ಟದಲ್ಲೂ ಬಿಜೆಪಿಗೆ ಸ್ವಲ್ಪ ಹೊಡೆತ ನೀಡಿದ್ದು ಸುಳ್ಳಲ್ಲ. ಟಿಡಿಪಿ ಕೂಡ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಬೆಂಬಲ ನೀಡಿತ್ತು. ಹೀಗಾಗಿ, ಬಿಜೆಪಿ ಇತರೆ ಮಿತ್ರಪಕ್ಷಗಳ ಬೆಂಬಲ ಪಡೆಯಲು ಯೋಜನೆ ರೂಪಿಸಿತು. ಅಲ್ಲದೆ, ಎನ್​ಸಿಪಿಯ ಶರದ್​ ಪವಾರ್​ ಅವರ ಅಭ್ಯರ್ಥಿ ವಂದನಾ ಚವಾನ್​ ಅವರ ಹೆಸರನ್ನು ಕಾಂಗ್ರೆಸ್​ ಕೊನೆಯ ಕ್ಷಣದಲ್ಲಿ ಚುನಾವಣೆಯಿಂದ ಕೈಬಿಟ್ಟಿದ್ದು ಕೂಡ ಯುಪಿಎಗೆ ವ್ಯತಿರಿಕ್ತವಾಗಿ ಪರಿಣಮಿಸಿತು ಎಂದರೆ ತಪ್ಪಲ್ಲ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...