ದೆಹಲಿ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಪಕ್ಷದ ಹಿರಿಯ ನಾಯಕ ಕಲ್ಯಾಣ್ ಸಿಂಗ್ ಅನಾರೋಗ್ಯದ ಕಾರಣ ಕಳೆದ ಶನಿವಾರ ಮೃತಪಟ್ಟಿ ದ್ದರು. ಅದೇ ದಿನ ಕೇಂದ್ರ ಸರ್ಕಾರ ಕಲ್ಯಾಣ್ ಸಿಂಗ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿತ್ತು. ಆದರೆ, ಈ ವೇಳೆ ಬಿಜೆಪಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದೆ ಎಂಬ ವಿವಾದವೊಂದು ಇದೀಗ ಚಾಲ್ತಿಗೆ ಬಂದಿದೆ. ಕಲ್ಯಾಣ್ ಸಿಂಗ್ ಅವರ ಪಾರ್ಥೀವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಪಕ್ಷದ ಧ್ವಜವನ್ನು ಹಾಕಿದ್ದು ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಲವಾರು ಜನರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದಾರೆ.
ಧ್ವಜ ನೀತಿ ಸಂಹಿತೆಯ ಅನ್ವಯ ಭಾರತ ಧ್ವಜಕ್ಕಿಂತ ಎತ್ತರದಲ್ಲಿ ಬೇರೆ ಯಾವ ಧ್ವಜವನ್ನೂ ಹಾರಿಸಬಾರದು ಮತ್ತು ಭಾರತದ ಧ್ವಜದ ಮೇಲೆ ಬೇರೆ ಯಾವ ಧ್ವಜವನ್ನೂ ಹಾಕಬಾರದು. ಒಂದು ವೇಳೆ ಹಾಗೆ ಮಾಡಿದರೆ ಅದು ರಾಷ್ಟ್ರೀಯ ಧ್ವಜಕ್ಕೆ ಮಾಡಿದ ಅಮಾನವಾಗುತ್ತದೆ ಎಂಬುದು ನಿಯಮ. ಆದರೆ, ಕಲ್ಯಾಣ್ ಸಿಂಗ್ ಅವರ ಅಂತಿಮ ದರ್ಶನಕ್ಕೆ ಪ್ರಧಾನಿ ಮೋದಿ ಕೂಡಾ ಆಗಮಿಸಿದ್ದರು. ಈ ವೇಳೆಯೇ, ಅವರ ಎದುರಲ್ಲೇ ಕಲ್ಯಾಣ್ ಸಿಂಗ್ ಪಾರ್ಥಿವ ಶರೀರದ ಮೇಲೆ ಇದ್ದ ಭಾರತದ ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ಪಕ್ಷದ ಧ್ವಜವನ್ನು ಹೊದಿಸಲಾಗಿದೆ.
ಇದರ ನಂತರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡ, ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಹಲವರು ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ್ದರು. ಇದು ಭಾರತದ ತ್ರಿವರ್ಣ ಧ್ವಜಕ್ಕೆ ಮಾಡಿದ ಅಪಮಾನವಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವೊಂದನ್ನು ಟ್ವೀಟ್ ಮಾಡಿರುವ ಡಾ. ಆಶಿಶ್ ದಿಕ್ಷಿತ್, "ದೇಶದ ಪ್ರಧಾನಿಯ ಮುಂದೆಯೆ ಬಿಜೆಪಿಯ ಧ್ವಜವನ್ನು ತ್ರಿವರ್ಣ ಧ್ವಜದ ಮೇಲೆ ಹಾಕಲಾಯಿತು. ಇದು ತ್ರಿವರ್ಣ ಧ್ವಜಕ್ಕೆ ಮಾಡಿದ ಅವಮಾನವಲ್ಲವೇ? ಬಿಜೆಪಿ ಕಾರ್ಯಕ್ರರ ಜೊತೆ ದೇಶಪ್ರೇಮಿ ಮತ್ತು ದೇಶದ್ರೋಹಿ ಸರ್ಟಿಫಿಕೇಟ್ ಹಂಚುವ ಲೈಸನ್ಸ್ ಹೊಂದಿದ್ದಾರೆ. ಅವರು ಈ ಬಗ್ಗೆ ಏನು ಹೇಳುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.
ಯೂತ್ ಕಾಂಗ್ರೆಸ್ ನಾಯಕ ಬಿವಿ ಶ್ರೀನಿವಾಸ್, ಹೊಸ ಭಾರತದಲ್ಲಿ ಪಕ್ಷದ ಧ್ವಜವನ್ನು ಭಾರತದ ಧ್ವಜದ ಮೇಲೆ ಇಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.
ಟ್ರೈಬಲ್ ಆರ್ಮಿ ಎಂಬ ಅಧೀಕೃತ ಟ್ವಿಟರ್ ಖಾತೆ, "ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಪಕ್ಷದ ಧ್ವಜವನ್ನು ಇರಿಸಿದರು. ಇದು ನಮ್ಮ ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ. ಈ ನಾಚಿಕೆಗೇಡಿನ ಕೃತ್ಯಕ್ಕಾಗಿ ನಡ್ಡಾ ಕ್ಷಮೆ ಕೇಳಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ಅವರು ರಾಷ್ಟ್ರಧ್ವಜದ ಧ್ವಜ ಸಂಹಿತೆ ಏನು ಹೇಳುತ್ತದೆ ಎಂದು ತಮ್ಮ ಟ್ವಿಟ್ನಲ್ಲಿ ತಿಳಿಸಿದ್ದಾರೆ. ಅವರ ಟ್ವೀಟ್ನಂತೆ, “ ಭಾರತದ ಧ್ವಜ ಸಂಹಿತೆಯ ಪ್ರಕಾರ, ‘ಇತರ ಯಾವುದೇ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಎತ್ತರ ಅಥವಾ ರಾಷ್ಟ್ರಧ್ವಜಕ್ಕಿಂತ ಮೇಲೆ ಹಾಗೂ ರಾಷ್ಟ್ರಧ್ವಜಕ್ಕೆ ಸರಿಸಮಾನವಾರಿ ಇಡಬಾರದು’ ಎಂದು ಹೇಳುತ್ತದೆ. ಬಿಜೆಪಿಗೆ ನಾಚಿಕೆಯಾಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರವೊಂದನ್ನು ರೀಟ್ವಿಟ್ ಮಾಡಿರುವ ಮತ್ತೊಬ್ಬರು, "ಈ ಚಿತ್ರದ ಅರ್ಥ ಕಲ್ಯಾಣ್ ಸಿಂಗ್ ತಮ್ಮ ದೇಶಕ್ಕಿಂತ ಪಕ್ಷವನ್ನೇ ಅತಿಯಾಗಿ ನೆಚ್ಚಿಕೊಂಡಿದ್ದರು ಎಂದಾಗಿದೆ. ನಿಮಗೆ ಸಂಶಯವಿದ್ದರೆ ಬಾಬರಿ ಮಸೀದಿ ಒಡೆದ ಘಟನೆಯನ್ನು ಒಮ್ಮೆ ನೋಡಿ" ಎಂದು ಟ್ವೀಟ್ ಮಾಡಿದ್ದಾರೆ.
ಆದರೆ, ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿರುವ ವಿಚಾರದ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದರೂ, ಟೀಕೆಗಳು ಕೇಳಿ ಬರುತ್ತಿದ್ದರೂ ಸಹ, ಬಿಜೆಪಿ ಪಕ್ಷವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಈ ಬಗ್ಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ