ಕಾಶ್ಮೀರ ಕಣಿವೆ ಕೃಷಿಕರಿಗೆ ಸಿಹಿಸುದ್ದಿ; ಸಂಕಷ್ಟದಲ್ಲಿದ್ದ ಸೇಬು ಬೆಳೆಗಾರರಿಗೆ ಕೇಂದ್ರ ಸರ್ಕಾರದ ಸಹಾಯಹಸ್ತ

370ನೇ ವಿಧಿ ರದ್ದುಪಡಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಸೇಬು ಹಣ್ಣುಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ. ಆದಷ್ಟು ಬೇಗ ಸೇಬು ಹಣ್ಣುಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಡಬೇಕೆಂದು ಸೇಬು ಬೆಳೆಗಾರರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

Sushma Chakre | news18-kannada
Updated:September 10, 2019, 3:36 PM IST
ಕಾಶ್ಮೀರ ಕಣಿವೆ ಕೃಷಿಕರಿಗೆ ಸಿಹಿಸುದ್ದಿ; ಸಂಕಷ್ಟದಲ್ಲಿದ್ದ ಸೇಬು ಬೆಳೆಗಾರರಿಗೆ ಕೇಂದ್ರ ಸರ್ಕಾರದ ಸಹಾಯಹಸ್ತ
ಚಿತ್ರ- ಮಿರ್ ಸುಹೈಲ್
  • Share this:
ನವದೆಹಲಿ (ಸೆ. 10): 370ನೇ ವಿಧಿ ರದ್ದುಪಡಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿ ಗ್ರಾಹಕರಿಲ್ಲದೆ ಸೇಬು ಬೆಳೆಗಾರರು ನಷ್ಟ ಅನುಭವಿಸಿದ್ದರು. ಈ ಸಮಸ್ಯೆಗೆ ಕೇಂದ್ರ ಸರ್ಕಾರ ಈಗ ಪರಿಹಾರ ಕಂಡುಹಿಡಿಯುವ ಮೂಲಕ ಕಾಶ್ಮೀರ ಕಣಿವೆಯ ಸೇಬು ಕೃಷಿಕರಿಗೆ ಸಿಹಿಸುದ್ದಿ ನೀಡಿದೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ 370ನೇ ವಿಧಿ ರದ್ದು ಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ವಾಪಾಸ್​ ಪಡೆದಿತ್ತು. ಇದಕ್ಕೆ ದೇಶಾದ್ಯಂತ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸರ್ಕಾರದ ಈ ದಿಢೀರ್ ನಿರ್ಧಾರದಿಂದ ಜಮ್ಮು-ಕಾಶ್ಮೀರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು.

ಜಮ್ಮು ಕಾಶ್ಮೀರದ ಕಣಿವೆಯ ಪ್ರಮುಖ ಬೆಳೆಯೆಂದರೆ ಸೇಬು. ಇಲ್ಲಿನ ಉತ್ಕೃಷ್ಟ ಗುಣಮಟ್ಟದ ಸೇಬು ಹಣ್ಣುಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ. ಆದರೆ, ಸರ್ಕಾರ 370ನೇ ವಿಧಿ ರದ್ದುಪಡಿಸಿದ ನಂತರ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಲ್ಲಿನ ಜನಸಾಮಾನ್ಯರು ಹೊರಗೆ ಓಡಾಡಲೂ ಭಯಪಡುತ್ತಿದ್ದರು. ಈ ರಾಜ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾದ್ದರಿಂದ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿತ್ತು. ಸೇಬು ಕೃಷಿಯನ್ನೇ ನಂಬಿಕೊಂಡಿದ್ದ ದಕ್ಷಿಣ ಕಾಶ್ಮೀರದ ಜನರಿಗೆ ಪ್ರವಾಸಿಗರೇ ಅತಿದೊಡ್ಡ ಮಟ್ಟದ ಗ್ರಾಹಕರಾಗಿದ್ದರು. ಆದರೆ, ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಸೇಬು ಬೆಳೆಗಾರರು ನಷ್ಟ ಅನುಭವಿಸಿದ್ದರು. ಸರ್ಕಾರದ ನಿರ್ಧಾರದಿಂದ ತೀವ್ರ ನಷ್ಟವಾಗಿ ಜೀವನಕ್ಕೆ ಆಧಾರವಾಗಿದ್ದ ಸೇಬು ಹಣ್ಣುಗಳಿಗೆ ಬೇಡಿಕೆಯಿಲ್ಲದೆ, ಬೇರೆ ಮಾರುಕಟ್ಟೆಗಳಿಗೂ ಸಾಗಿಸಲಾರದೆ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿದ್ದಕ್ಕೆ ಜಮ್ಮು ಕಾಶ್ಮೀರದ ಸೇಬು ಬೆಳೆಗಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಗಾಂಜಾ ಸೇವನೆಯಲ್ಲಿ ದೆಹಲಿಗೆ ಪ್ರಪಂಚದಲ್ಲೇ 3ನೇ ಸ್ಥಾನ; ಇಲ್ಲಿದೆ ರಾಜಧಾನಿಯ ಮತ್ತೊಂದು ರೂಪ

ಸೇಬು ಹಣ್ಣುಗಳ ಖರೀದಿಗೆ ಮುಂದಾದ ಸರ್ಕಾರ:

ಇದೀಗ ಅಲ್ಲಿನ ಜನರ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ಸೇಬು ಹಣ್ಣುಗಳನ್ನು ತಾನೇ ಖರೀದಿಸಲು ನಿರ್ಧರಿಸಿದೆ. ಯಾವುದೇ ಮಧ್ಯವರ್ತಿಯಿಲ್ಲದೆ ಸೇಬು ಕೃಷಿಕರಿಂದ ನೇರವಾಗಿ ಸೇಬು ಹಣ್ಣಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಡೈರೆಕ್ಟ್​ ಬೆನಿಫಿಟ್ ಟ್ರಾನ್ಸ್​ಫರ್ (ಡಿಬಿಟಿ) ಯೋಜನೆಯಡಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಸೇಬು ಬೆಳೆಗಾರರ ಆದಾಯವನ್ನು ಹೆಚ್ಚಿಸಿ, ನಷ್ಟವನ್ನು ತಡೆಯುವ ಉದ್ದೇಶ ಸರ್ಕಾರದ್ದು.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಹಿತಿ ಮತ್ತು ಪ್ರಸಾರ ನಿರ್ದೇಶನಾಲಯ, ಜಮ್ಮು ಕಾಶ್ಮೀರದ ಶೋಪಿಯಾನ್, ಬಟೆಂಗೋ, ಪರಿಂಪೊರ, ಸೊಪೋರ್​ನಲ್ಲಿ ಬೆಳೆದಿರುವ ಸೇಬು ಹಣ್ಣುಗಳನ್ನು ಮಂಡಿಯಲ್ಲಿ ಸಂರಕ್ಷಿಸಲಾಗುವುದು. ಇದಕ್ಕೆ ವಿಶೇಷವಾದ ಬೆಲೆ ನಿಗದಿ ಮಾಡಿ ಖರೀದಿಸಲಾಗುವುದು. ಈಗಾಗಲೇ 12 ಲಕ್ಷ ಮೆಟ್ರಿಕ್ ಟನ್ ಸೇಬು ಹಣ್ಣುಗಳನ್ನು ಸಂರಕ್ಷಿಸಲಾಗಿದೆ ಎಂದು ತಿಳಿಸಿದೆ.ಕಣಿವೆ ರಾಜ್ಯದಲ್ಲಿ ಜನರನ್ನು ಬೆದರಿಸುತ್ತಿದ್ದ 8 ಲಷ್ಕರ್​​​ ಉಗ್ರರ ಬಂಧನ

ಈ ಬಗ್ಗೆ ಗೃಹ ಸಚಿವಾಲಯವೂ ಮಾಹಿತಿ ನೀಡಿದ್ದು, ರಾಷ್ಟ್ರೀಯ ಕೃಷಿ ಸಹಕಾರ ಮಾರ್ಕೆಟಿಂಗ್ ಫೆಡರೇಷನ್ ಈ ಸೇಬು ಹಣ್ಣುಗಳ ಸಂರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳಲಿದೆ. ಜಮ್ಮು ಕಾಶ್ಮೀರದಲ್ಲಿ ಬೆಳೆಯಲಾದ ಸೇಬು ಹಣ್ಣುಗಳ ಸಂರಕ್ಷಣೆಯ ಎಲ್ಲ ಹಂತಗಳನ್ನೂ ಅದೇ ನೋಡಿಕೊಳ್ಳಲಿದೆ ಎಂದು ಹೇಳಿದೆ.

ಗೃಹ ಸಚಿವಾಲಯದ ಅಧಿಕೃತ ಘೋಷಣೆ


ಈಗಾಗಲೇ ಇಲ್ಲಿನ ಸೇಬು ಬೆಳೆಗಾರರು ಮತ್ತು ಗ್ರಾಮಗಳ ಮುಖ್ಯಸ್ಥರು ಗೃಹ ಸಚಿವ ಅಮಿತ್ ಶಾ ಅವರನ್ನು ಕಳೆದ ವಾರ ಭೇಟಿ ಮಾಡಿದ್ದಾರೆ. ತಮ್ಮ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಭೇಟಿಯ ವೇಳೆ ಅವರು ಬೇಸರ ವ್ಯಕ್ತಪಡಿಸಿದ್ದರು. ಹಾಗೇ, ಬೆಂಬಲ ಬೆಲೆ ಘೋಷಣೆ ಮಾಡಿ ಸರಿಯಾದ ಮಾರುಕಟ್ಟೆಯನ್ನು ಒದಗಿಸಲು ಮನವಿಯನ್ನೂ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಜಮ್ಮು-ಕಾಶ್ಮೀರ ಮರುವಿಂಗಣೆಗೆ ಬೇಕು 14 ತಿಂಗಳು; ಗೃಹ ಇಲಾಖೆಯ ಅನುಮತಿಗೆ ಕಾದಿದೆ ಚುನಾವಣಾ ಆಯೋಗ

ಎ, ಬಿ. ಮತ್ತು ಸಿ ಗುಣಮಟ್ಟದ ಸೇಬುಗಳನ್ನು ಸಂರಕ್ಷಿಸಲಾಗುವುದು. ಆಯಾ ಜಿಲ್ಲೆಗಳಲ್ಲಿ ಹಣ್ಣುಗಳ ಮಂಡಿಗಳನ್ನು ತೆರೆದು ಅಲ್ಲೇ ಸಂಗ್ರಹಿಸಿಡಲಾಗುವುದು. ಇದರಿಂದ ಕೃಷಿಕರಿಗೆ ತಮ್ಮ ಬೆಳೆಗಳನ್ನು ಸಾಗಾಟ ಮಾಡುವುದು ತೀರಾ ಕಷ್ಟವಾಗಲಾರದು. ಸೇಬು ಬೆಳೆಯನ್ನೇ ಆಧಾರವಾಗಿಟ್ಟುಕೊಂಡಿರುವ ಸೋಪೋರ್, ಶೋಪಿಯಾನ್ ಮತ್ತು ಶ್ರೀನಗರದಲ್ಲಿ ಸೇಬು ಹಣ್ಣುಗಳ ಮಂಡಿಗಳನ್ನು ತೆರೆಯಲಾಗಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ