ಹೊಸಕೋಟೆ(ಫೆ.11): ಮಾಜಿ ಶಾಸಕ ಎಂಟಿಬಿ ನಾಗರಾಜ್ ಮತ್ತು ಹಾಲಿ ಶಾಸಕ ಶರತ್ ಬಚ್ಚೇಗೌಡ ನಡುವಿನ ಪ್ರತಿಷ್ಠೆಯ ಕಣ ಎಂದೇ ಬಿಂಬಿತವಾಗಿದ್ದ ಹೊಸಕೋಟೆ ನಗರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಗೂ ಮೀರಿ ಬಿಜೆಪಿ ಗೆಲುವು ದಾಖಲಿಸಿದ್ದು, ಬಿಜೆಪಿ- 23, ಶರತ್ ಬಚ್ಚೇಗೌಡ ನೇತೃತ್ವದ ಭಾರತೀಯ ಪ್ರಜಾ ಪಕ್ಷ-7 ಸ್ಥಾನ ಗೆದ್ದಿದ್ದು, ಕೈ ಕೋಟೆ ಛಿದ್ರವಾಗಿದೆ. ಜೊತೆಗೆ ಸ್ವಾಭಿಮಾನಿ ಹೆಸರಲ್ಲಿ ಗೆದ್ದು ಶಾಸಕರಾದ ಶರತ್ ಬಚ್ಚೇಗೌಡ ನೇತೃತ್ವದ ಭಾರತೀಯ ಪ್ರಜಾ ಪಕ್ಷದ ಕುಕ್ಕರ್ ಸಹ ಭರ್ಜರಿ ವಿಜಿಲ್ ಹೊಡೆಯಲು ಸಾಧ್ಯವಾಗಿಲ್ಲ.
ಹೌದು, 31 ಸದಸ್ಯ ಬಲದ ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ 23 ಸ್ಥಾನಗಳನ್ನು ಪಡೆದು ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದು, ಮೊದಲ ಬಾರಿಗೆ ಗದ್ದುಗೆ ತನ್ನದಾಗಿಸಿಕೊಂಡಿದೆ. ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳ ಗೆಲುವಿನ ಸಂಭ್ರಮವನ್ನು ಕಣಿದು ಕುಪ್ಪಳಿಸುವ ಮೂಲಕ ಆಚರಿಸಿದ್ದಾರೆ. ಜೊತೆಗೆ ಎಂಟಿಬಿ ನಾಗರಾಜ್ ಸಹ ನಗರಸಭೆ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಪಕ್ಷದ ಅಭ್ಯರ್ಥಿಗಳಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಬಗೆದು, ಮತದಾರರಿಗೆ ಸುಳ್ಳು ಭರವಸೆ ನೀಡಿದ ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡರಿಗೆ ಮತದಾರ ಈ ಫಲಿತಾಂದ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ತಮ್ಮನ್ನು ಮಾರಾಟ ಮಾಡಿಕೊಂಡಿದ್ದರು. ಹಾಗಾಗಿ ಅವರನ್ನು ಹೊಸಕೋಟೆ ಮತದಾರ ಮತ್ತು ದಿಲ್ಲಿ ಮತದಾರ ಶೂನ್ಯ ಸಂಪಾದನೆ ಮಾಡುವಂತೆ ಮಾಡಿದ್ದಾನೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರಸ್ಸಿರಿಗೆ ಭವಿಷ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಹರಿಹಾಯ್ದ ಎಂಟಿಬಿ ಪಕ್ಷ ಮೆಚ್ಚಿ ಯಾವುದೇ ಸ್ಥಾನಮಾನ ನೀಡಿದರು ನಾನು ಪಕ್ಷ ಮತ್ತು ನಾಯಕರ ತೀರ್ಮಾನಕ್ಕೆ ಬದ್ಧನಾಗಿರುತ್ತೆನೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.
ಇನ್ನು ಹೊಸಕೋಟೆ ನಗರಸಭೆ ಚುನಾವಣೆ ಫಲಿತಾಂಶ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಆದರು ವಿರೋಧ ಪಕ್ಷದಲ್ಲಿ ಕೂತು ಹೊಸಕೋಟೆ ನಗರ ಅಭಿವೃದ್ಧಿಗಾಗಿ ಶ್ರಮಿಸುತ್ತೆವೆ. ಅಂದಹಾಗೆ ನಗರಸಭೆ ಅವೈಜ್ಞಾನಿಕ ವಾರ್ಡ್ ವಿಂಗಡನೆ ಬಗ್ಗೆ ನಿರಂತರ ಹೋರಾಟ ನಡೆಸಲಾಗಿತ್ತು. ಕಾನೂನು ಹೋರಾಟದ ನಡುವೆಯು ತರಾತುರಿಯಲ್ಲಿ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು. ಹಾಗಾಗಿ ನಮ್ಮ ಅಭ್ಯರ್ಥಿಗಳಿಗೆ ಹಿನ್ನಡೆಯಾಯಿತು ಎಂದ ಅವರು ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ನಡೆಯುವ ಪರಿಷತ್ತು ಚುನಾವಣೆ ವಿಚಾರವಾಗಿ ಇಲ್ಲಿಯವರೆಗೆ ಯಾರೂ ಕೂಡ ನನ್ನನ್ನು ಸಂಪರ್ಕಿಸಿಲ್ಲ ಹಾಗಾಗಿ ಯಾರಿಗೆ ಮತ ನೀಡಬೇಕು ಎಂಬ ಬಗ್ಗೆ ಇನ್ನೂ ತಿರ್ಮಾನಿಸಿಲ್ಲ ಎಂದು ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ಏಜೆಂಟರು ಇಲ್ಲದೆ ವಾರ್ಡ್ ನಂ 21 ಮತ ಎಣಿಕೆ ನಡೆದಿದೆ ಎಂದು ಎಎಪಿ ಅಭ್ಯರ್ಥಿ ಅಸಾದುಲ್ಲ ಬೇಗ್ ಮತ್ತು ಕಾರ್ಯಕರ್ತರು ನ್ಯಾಯ ನೀಡುವಂತೆ ಕೆಲ ಪ್ರತಿಭಟನೆ ನಡೆಸಿದರು. ಬಳಿಕ ಅಧಿಕಾರಿಗಳ ಮನವೊಲಿಕೆ ಬಳಿಕ ಪ್ರತಿಭಟನೆ ವಾಪಸ್ ಪಡೆದಿದ್ದು,ಉಳಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.
(ವರದಿ: ಆದೂರು ಚಂದ್ರು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ