Bitcoin Scam ದೊಡ್ಡದು, ಅದನ್ನು ಮುಚ್ಚಿಡುತ್ತಿರುವುದು ಇನ್ನೂ ದೊಡ್ಡದು: Rahul Gandhi

ರಾಹುಲ್ ಗಾಂಧಿ ಅವರು ಬಿಟ್ ಕಾಯಿನ್ ಹಗರಣದ ವಿಷಯದಲ್ಲಿ ಯಾರ ಹೆಸರನ್ನೂ ಹೇಳದೆ ಪರೋಕ್ಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಡೆಗೆ ಬೊಟ್ಟು ಮಾಡಿದ್ದಾರೆ. 

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ, ನ. 13: ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ (Bitcoin Scam) ಭಾರೀ ಸದ್ದು ಮಾಡುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಇದೇ ವಿಷಯವನ್ನು ಬಳಸಿಕೊಂಡು ಪ್ರತಿಪಕ್ಷ ಕಾಂಗ್ರೆಸ್ (Congress) ಮತ್ತು ಆಡಳಿತಾರೂಢ ಬಿಜೆಪಿ (BJP) ನಾಯಕರು ಬಸವರಾಜ ಬೊಮ್ಮಾಯಿ (CM Basavaraja Bommai) ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು 'ಬಿಟ್‌ಕಾಯಿನ್ ಹಗರಣ ದೊಡ್ಡದು. ಅದಕ್ಕಿಂತ ಮುಚ್ಚಿಡುತ್ತಿರುವುದು ಇನ್ನೂ ದೊಡ್ಡದು. ಏಕೆಂದರೆ ಅದು ಯಾರದೋ ಹುಸಿ ವರ್ಚಸ್ಸನ್ನು ಮುಚ್ಚಿಡುವಂಥದ್ದು' ಎಂದು ಹೇಳಿದ್ದಾರೆ.

ಒಗಟಿನ ರೂಪದಲ್ಲಿ ಟ್ವೀಟ್ (Tweet) ಮಾಡಿರುವ ರಾಹುಲ್ ಗಾಂಧಿ ಅವರು ಬಿಟ್ ಕಾಯಿನ್ ಹಗರಣದ ವಿಷಯದಲ್ಲಿ ಯಾರ ಹೆಸರನ್ನೂ ಹೇಳದೆ ಪರೋಕ್ಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಕಡೆಗೆ ಬೊಟ್ಟು ಮಾಡಿದ್ದಾರೆ. ಬಿಟ್ ಕಾಯಿನ್ ಹಗರಣ ಬಯಲಾದರೆ ಅವರ ವರ್ಚಸ್ಸಿಗೆ ಧಕ್ಕೆ ಆಗಲಿದೆ, ಅದೇ ಕಾರಣಕ್ಕೆ ಮುಚ್ಚಿಡುತ್ತಿದ್ದಾರೆ ಎಂದು ಹೇಳಿದ್ದಾರೆ.



ಅತ್ಯಂತ ದೊಡ್ಡ ಹಗರಣ!

ಇದಕ್ಕೂ ಮೊದಲು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಇದಲ್ಲದೆ ಇವತ್ತು ದೆಹಲಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ (Ranadeep Surjewala) ಬಿಟ್ ಕಾಯಿನ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಹಾಲಿ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (Special Investigation Team) ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಅಲ್ಲದೆ ಬಿಟ್ ಕಾಯಿನ್ ಹಗರಣ  ಅತ್ಯಂತ ದೊಡ್ಡ ಹಗರಣ. ಈ‌ ಹಗರಣದ ನಾಯಕ ಮತ್ತು ಖಳನಾಯಕ ಇಬ್ವರೂ ಬಿಜೆಪಿಯವರೇ. ಭಾರತದ ರೂಪಾಯಿ ಪ್ರಕಾರ ಒಂದು ಬಿಟ್ ಕಾಯಿನ್ 51 ಲಕ್ಷ ರೂಪಾಯಿ. ಯಾಕೆ ಈ ಹಗರಣದ ಬಗ್ಗೆ ಜಾರಿ‌ ನಿರ್ದೇಶನಾಲಯ (Enforcement Directorate), ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಮತ್ತು ಇಂಟರ್ ಪೋಲ್ (Interpol)  ಸುಮ್ಮನಿವೆ? ಎಂದು ಪ್ರಶ್ನಿಸಿದರು.

ರಾಜ್ಯದ ಬಿಜೆಪಿ ಸರ್ಕಾರ ಬಿಟ್ ಕಾಯಿನ್ ಹಗರಣದಲ್ಲಿ ಶಾಮೀಲಾಗಿದೆ. ಇದು ಅತ್ಯಂತ ಷಡ್ಯಂತ್ರ ರೂಪಿಸಿ ಮಾಡಿರುವ ಹಗರಣ. ತನಿಖಾ ಸಂಸ್ಥೆಗಳ ದಿಕ್ಕು ತಪ್ಪಿಸಿ ಮಾಡಿರುವ ಹಗರಣ. ತನಿಖೆಯನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದಲೇ ಜಾರಿ‌ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಇಂಟರ್ ಪೋಲ್ ಗಳಿಗೆ ತಿಳಿಸಿಲ್ಲ. ಬಿಟ್ ಕಾಯಿನ್ ಹಗರಣದ ವಿಚಾರಣೆಗೆಂದು 2019ರ ನವೆಂಬರ್ 14 ಶ್ರೀಕಿಯನ್ನು ಬಂಧಿಸಲಾಗಿದೆ.  ಆತ 120 ದಿನ ಕಸ್ಟಡಿಯಲ್ಲಿ ಇದ್ದ. ಅವನ ವಿರುದ್ಧ 5 ದೂರು ದಾಖಲಿಸಲಾಗಿದೆ. ಒಂದು ಕೇಸಿನಲ್ಲಿ ಕಸ್ಟಡಿ ಮುಗಿಯುತ್ತಿದ್ದಂತೆ ಇನ್ನೊಂದು ಕೇಸ್ ಮೇಲೆ ಬಂಧಿಸಲಾಗಿದೆ. ಶ್ರೀಕಿ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ 'ಬೇರೆ ಬೇರೆ ದೇಶಗಳ ಕಂಪನಿ, ಸರ್ಕಾರಿ ಖಾತೆಗಳನ್ನು ಹ್ಯಾಕ್ ಮಾಡಿದ್ದಾನೆ ಎಂಬ ಸಂಗತಿಗಳನ್ನು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದೇನೆ' ಎಂದು ಹೇಳಿದ್ದಾನೆ. ಆದರೆ ಕರ್ನಾಟಕ ಸರ್ಕಾರ (Karnataka Government) ಇಂಟರ್ ಪೋಲ್ ಗೆ ಮಾಹಿತಿ ನೀಡಿಲ್ಲ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಿಂದೆ ಗೃಹ ಸಚಿವರಾಗಿದ್ದಾಗಲೇ ಈ ಹಗರಣ ಬೆಳಕಿಗೆ ಬಂದಿದೆ. ಶ್ರೀಕಿಯನ್ನು ಬಂಧಿಸಿದಾಗ, ಬಿಡುಗಡೆಯಾದಾಗ ಕೂಡ ಬೊಮ್ಮಾಯಿ ಗೃಹ ಸಚಿವರಾಗಿದ್ದರು ಎಂದು ರಣದೀಪ್ ಸುರ್ಜೆವಾಲಾ ವಿವರಿಸಿದರು.

1.20 ಲಕ್ಷ ಬಿಟ್ ಕಾಯಿನ್ ಕದ್ದಿರುವುದಾಗಿ ಶ್ರೀಕಿ ಹೇಳಿದ್ದಾನೆ. ಒಂದು ಬಿಟ್ ಕಾಯಿನ್ ಗೆ 51 ಲಕ್ಷ ರೂಪಾಯಿ ಇದೆ. ಶ್ರೀಕಿ ಡಾರ್ಕ್ ವೆಬ್ ಹ್ಯಾಕ್ ಮಾಡಿರುವ ಮಾಹಿತಿ ಇದೆ. ಬೆಂಗಳೂರು ಪೊಲೀಸರು ಶ್ರೀಕಿ ಬಳಿ 31 ಬಿಟ್​ ಕಾಯಿನ್ ವಶಕ್ಕೆ ಪಡೆದಿದ್ದರು. 9 ಕೋಟಿ ಮೌಲ್ಯದ ಆ ಬಿಟ್ ಕಾಯಿನ್ ಎಲ್ಲಿಗೆ ಹೋದವು? ಈ ಬಗ್ಗೆ ಬೆಂಗಳೂರು ಪೊಲೀಸರೇ ಹೇಳಿದ್ದಾರೆ. ಆನಂತರ ಇಲ್ಲ ಎಂದಿದ್ದಾರೆ. 24 ವ್ಯಾಲೆಟ್ ಗಳಿಂದ ಬಿಟ್ ಕಾಯಿನ್ ಗಳ ವರ್ಗಾವಣೆ ಆಗಿದೆ. ಕದ್ದಿರುವ ಬಿಟ್ ಕಾಯಿನ್ ಗಳ ವರ್ಗಾವಣೆ ಮಾಡಲಾಗಿದೆ. 2 ದಿನದಲ್ಲಿ 5,200 ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆ ಮಾಡಲಾಗಿದೆ. ಈ ಎರಡು ದಿನ ಆತ ಬೆಂಗಳೂರು ಪೊಲೀಸರ ವಶದಲ್ಲಿದ್ದ ಎಂದು ಗಂಭೀರ ಆರೋಪ ಮಾಡಿದರು.
'ಬಿಟ್ ಕಾಯಿನ್ ಬಗ್ಗೆ ಚಿಂತಿಸಬೇಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ' ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಹಾಗಾದರೆ ಬಿಟ್ ಕಾಯಿನ್ ಹಗರಣದ ನಾಯಕ, ಖಳನಾಯಕ ಯಾರು? ಪ್ರಧಾನಿ ಜೊತೆ ಚರ್ಚೆ ಮಾಡಿದ ಬಸವರಾಜ ಬೊಮ್ಮಾಯಿ ಹಗರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಯಾಕೆ ತಿಳಿಸಿಲ್ಲ? ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ಸರ್ಕಾರ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಹಾಲಿ ಜಡ್ಜ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ಆಗಬೇಕು. ಆಗ ಮಾತ್ರ ಸತ್ಯ ಹೊರ ಬರಲು ಸಾಧ್ಯ. ಪ್ರಧಾನಿ ಮೋದಿ ಅಮೇರಿಕಾಕ್ಕೆ ತೆರಳಿದ್ದಾಗ ಈ ಬಗ್ಗೆ ಪ್ರಸ್ತಾಪವಾಗಿದೆ. ಇದರಿಂದ ಅವರು ಮುಜುಗರ ಅನುಭವಿಸಬೇಕಾಯಿತು ಎಂದ ರಣದೀಪ್ ಸುರ್ಜೆವಾಲಾ 'ಇಡಿ ಎಂದರೆ ಎಲೆಕ್ಷನ್ ಡಿಪಾರ್ಟ್ಮೆಂಟ್. ಅದು ಬಿಜೆಪಿಯ ಎಲೆಕ್ಷನ್ ಡಿಪಾರ್ಟ್‌ಮೆಂಟ್ ಆಗಿದೆ.15 ಫೆಬ್ರವರಿ 2021ರಲ್ಲಿ ಇಡಿ ಕೇಳಿದೆ. ಆದರೂ ಮಾಹಿತಿ ನೀಡಿಲ್ಲ. ನಾಲ್ಕೈದು ತಿಂಗಳ ಬಳಿಕ ಕೇವಲ 1 ಕೇಸಿನ ಬಗ್ಗೆ ಮಾತ್ರ ಇಡಿಗೆ ಮಾಹಿತಿ ನೀಡಲಾಗಿದೆ. ಇದು ಕೇವಲ ಇಡಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಇಂಟರ್ ಪೋಲ್, ರಾಷ್ಟ್ರೀಯ ತನಿಖಾ ಸಂಸ್ಥೆ, ಭಾರತೀಯ ರಿಸರ್ವ್ ಬ್ಯಾಂಕ್ ( Reserve Bank of India) ವ್ಯಾಪ್ತಿಗೂ ಬರಲಿದೆ ಎಂದು ಸುರ್ಜೆವಾಲಾ ಅವರು ಹೇಳಿದರು.

ಇದನ್ನು ಓದಿ: ಇನ್ನು 15 ದಿನ ಸಮಯ ಕೊಡಿ Bitcoin ಹಗರಣದ ವಾಸ್ತವಾಂಶ ಹೊರಗೆ ತೆಗೆಯುತ್ತೇನೆ; HD Kumaraswamy

ಶ್ರೀಕಿ ಕಸ್ಢಡಿಯಲ್ಲಿದ್ದಾಗಲೇ ಬಿಟ್ ಕಾಯಿನ್ ವರ್ಗಾವಣೆ ಆಗಿದೆ. ಕಾಂಗ್ರೆಸ್ ನಾಯಕರಿದ್ದರೆ ಅವರನ್ನು ಶಿಕ್ಷಿಸಲಿಲ್ಲ ಏಕೆ?. ಅವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಕಾಂಗ್ರೆಸ್ ನವರಿಗೆ ಗೊತ್ತಿತ್ತು ಎನ್ನೋದು ಬೇರೆ. ಬಿಜೆಪಿಯವರೇ ಹಗರಣ ಮಾಡಿದ್ದಾರೆ ಎನ್ನುವುದು ಬೇರೆ. ಪ್ರಧಾನಿ ಮೋದಿ ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಪ್ರಧಾನಿ ಮೋದಿ ಪ್ರತಿಕ್ರಿಯೆ ಬಳಿಕ ಕಾಂಗ್ರೆಸ್ ಮುಂದಿನದನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.
Published by:HR Ramesh
First published: