Bird Flu : ರಾಜಸ್ಥಾನದಲ್ಲಿ ಹಕ್ಕಿ ಜ್ವರದಿಂದ ನೂರಾರು ಕಾಗೆಗಳು ಸಾವು; ಅಪಾಯಕಾರಿ ವೈರಸ್​ ಹರಡದಂತೆ ಹೈ ಅಲರ್ಟ್​

Bird Flu in Rajasthan: ರಾಜಸ್ಥಾನದಲ್ಲಿ ಡಿಸೆಂಬರ್ 25ರಿಂದ ಸಾವನ್ನಪ್ಪಿದ ಕಾಗೆಗಳ ಸಂಖ್ಯೆ 252ಕ್ಕೆ ಏರಿಕೆಯಾಗಿದೆ. ಹಕ್ಕಿ ಜ್ವರದ ವೈರಸ್ ಬಹಳ ಅಪಾಯಕಾರಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕಾಗೆಗಳು

ಕಾಗೆಗಳು

  • Share this:
ಜೈಪುರ (ಜ. 4): ರಾಜಸ್ಥಾನದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ರಾಜ್ಯಾದ್ಯಂತ ಆತಂಕ ಸೃಷ್ಟಿಸಿದೆ. ರಾಜಸ್ಥಾನದ ಇಂದೋರ್, ಜಲಾವರ್​​ನಲ್ಲಿ ಸಾಕಷ್ಟು ಕಾಗೆಗಳು ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದು, ಹಕ್ಕಿ ಜ್ವರದ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಪಶು ಸಂಗೋಪನಾ ಇಲಾಖೆಯಿಂದ ಕಂಟ್ರೋಲ್ ರೂಂ ತೆರೆಯಲಾಗಿದೆ. ಹಾಗೇ, ರಾಜ್ಯಾದ್ಯಂತ ಹಕ್ಕಿ ಜ್ವರದ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಆದೇಶಿಸಲಾಗಿದೆ.

ಭಾನುವಾರ ಪ್ರಸಿದ್ಧ ಪ್ರವಾಸಿ ತಾಣವಾದ ಜಲಮಹಲ್​ನಲ್ಲಿ 7 ಕಾಗೆಗಳು ಸತ್ತುಬೀಳುವ ಮೂಲಕ ರಾಜಸ್ಥಾನದಲ್ಲಿ ಇತ್ತೀಚೆಗೆ ಸಾವನ್ನಪ್ಪಿದ ಕಾಗೆಗಳ ಸಂಖ್ಯೆ 252ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಶು ಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಂಜಿ ಲಾಲ್ ಮೀನಾ, ಮುಖ್ಯವಾಗಿ ಕಾಗೆಗಳಲ್ಲಿ ಹಕ್ಕಿ ಜ್ವರದ ಕೇಸ್​ಗಳು ಹೆಚ್ಚಾಗಿ ಪತ್ತೆಯಾಗಿವೆ. ಇದು ಮನುಷ್ಯರಿಗೂ ಹರಡುವ ಆತಂಕ ಎದುರಾಗಿರುವುದರಿಂದ ಹೆಚ್ಚಿನ ನಿಗಾ ವಹಿಸಲಾಗಿದೆ. ಕೊರೋನಾ ಜೊತೆಗೆ ಹಕ್ಕಿ ಜ್ವರವನ್ನು ಕೂಡ ನಿಯಂತ್ರಿಸಬೇಕಾದ ಸವಾಲು ನಮ್ಮ ಮುಂದಿದೆ. ಮುಖ್ಯವಾಗಿ ಕೋಟ ಮತ್ತು ಜೋಧ್​ಪುರದಲ್ಲಿ ಹಕ್ಕಿ ಜ್ವರದಿಂದ ಕಾಗೆಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿವೆ ಎಂದಿದ್ದಾರೆ.ಹಕ್ಕಿ ಜ್ವರದ ವೈರಸ್ ಬಹಳ ಅಪಾಯಕಾರಿಯಾಗಿದ್ದು, ಅದರ ನಿಯಂತ್ರಣಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಕ್ಕಿ ಜ್ವರದ ಪ್ರಕರಣ ಹೆಚ್ಚಾಗಿರುವ ಪ್ರದೇಶಗಳ ಜನರು ಸಸ್ಯಾಹಾರವನ್ನೇ ಹೆಚ್ಚಾಗಿ ಸೇವಿಸುವುದು ಉತ್ತಮ ಎಂದು ಕುಂಜಿ ಲಾಲ್ ಮೀನಾ ತಿಳಿಸಿದ್ದಾರೆ.

ಡಿಸೆಂಬರ್ 25ರಿಂದ ಜಲಾವರ್​ನಲ್ಲಿ ಕಾಗೆಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸಾವನ್ನಪ್ಪಿದ ಕಾಗೆಗಳ ಸ್ಯಾಂಪಲ್ ಅನ್ನು ಭೂಪಾಲ್​ನಲ್ಲಿರುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್​ಗೆ ಕಳುಹಿಸಲಾಗಿದೆ. ಇದುವರೆಗೂ ಜಲಾವರ್​ನಲ್ಲಿ 100, ಬರಾನ್​ನಲ್ಲಿ 72, ಕೋಟದಲ್ಲಿ 47, ಪಲಿಯಲ್ಲಿ 19, ಜೋಧ್​ಪುರದಲ್ಲಿ 7, ಜೈಪುರದಲ್ಲಿ 7 ಕಾಗೆಗಳು ಸಾವನ್ನಪ್ಪಿವೆ.
Published by:Sushma Chakre
First published: