ನವದೆಹಲಿ (ಮಾ. 22): ಬಿಲ್ ಗೇಟ್ಸ್ ಜಗತ್ತಿನ ಶ್ರೀಮಂತರಲ್ಲಿ ಒಬ್ಬರು. ಈ ಸಿರಿವಂತ ಐಷಾರಾಮಿ ಜೀವನಶೈಲಿಯಲ್ಲಿ ಕಳೆದು ಹೋಗದೇ ತಮ್ಮ ಲೈಫ್ ಸ್ಟೈಲ್ನಲ್ಲಿ ಅವರು ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ತಮ್ಮೊಳಗಿರುವ ಪರಿಸರ ಕಾಳಜಿ ಮತ್ತು ಮುಂದಿನ ಪೀಳಿಗೆಯವರನ್ನು ಗಮನದಲ್ಲಿಟ್ಟುಕೊಂಡು ಪರಿಸರ ಸ್ನೇಹಿ ಜೀವನಶೈಲಿಗೆ ಬದಲಾಗಿದ್ದಾರೆ ಬಿಲ್ ಗೇಟ್ಸ್ .
ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯಿಂದ ವಾತಾವರಣದ ಮಾಲಿನ್ಯ ತಪ್ಪಿಸಲು ಬಿಲ್ ಗೇಟ್ಸ್ ತಮ್ಮ ಆಹಾರದ ತಟ್ಟೆಯಲ್ಲಿ ಸಿಂಥೆಟಿಕ್ ಮಾಂಸಾಹಾರ ಅಳವಡಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಏರ್ಕ್ರಾಫ್ಟ್ಗಳಿಗೆ ಹಸಿರು ಇಂಧನ ಖರೀದಿ ಆರಂಭಿಸಿದ್ದಾರೆ. ತಮ್ಮ ಮನೆಯಲ್ಲೂ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿದ್ದು, ಅತಿಹೆಚ್ಚು ವಿದ್ಯುತ್ ಉಳಿತಾಯ ಮಾಡುವುದರ ಜೊತೆಗೆ ಪರಿಸರ ನಾಶವನ್ನು ಕೂಡ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಪೆಟ್ರೋಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕಲ್ ವಾಹನಗಳನ್ನು ಬಳಸಲು ಆರಂಭಿಸುವ ಮೂಲಕ ಮತ್ತೊಮ್ಮೆ ಬಿಲ್ ಗೇಟ್ಸ್ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಬಿಸಿನೆಸ್ ಮ್ಯಾಗ್ನೆಟ್, ಸಮಾಜಸೇವಕ ಮತ್ತು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕರಾದ ಬಿಲ್ಗೇಟ್ಸ್ ವಾತಾವರಣದಲ್ಲಿ ಉಂಟಾಗುತ್ತಿರುವ ವ್ಯತಿರಿಕ್ತ ಬದಲಾವಣೆ ಮತ್ತು ಈ ಬಿಕ್ಕಟ್ಟನ್ನು ಬಗೆಹರಿಸುವ ಬಗ್ಗೆ ಗಮನ ನೀಡಬೇಕೆಂದು ಧ್ವನಿ ಎತ್ತುವುದರಲ್ಲಿ ಸದಾ ಮುಂದು. ಈ ನಿಟ್ಟಿನಲ್ಲಿ ಈಗ ವಾತಾವರಣದಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಈ ಬದಲಾವಣೆಯನ್ನು ಎದುರಿಸುವ ಬಗೆ ಹೇಗೆ ಎನ್ನುವುದರ ಬಗ್ಗೆ ಬಿಲ್ಗೇಟ್ಸ್ ತಮ್ಮ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: Ripped Jeans: ಹರಿದ ಜೀನ್ಸ್ ವಿವಾದ; 70ರ ದಶಕದಲ್ಲೇ ಶುರುವಾಗಿತ್ತು ಸೀಳಿದ ಜೀನ್ಸ್ ಟ್ರೆಂಡ್
ಇನ್ನು, ಬಿಲ್ ಗೇಟ್ಸ್ ರವರು ಆಗಾಗ ರೆಡ್ಡಿಟ್ನಲ್ಲಿ 'ಆಸ್ಕ್ ಮಿ ಎನಿಥಿಂಗ್' (ಏನಾದರೂ ಕೇಳಿ) ಎನ್ನುವ ಸೆಷನ್ಸ್ಗಳನ್ನು ಆಯೋಜಿಸುತ್ತಿರುತ್ತಾರೆ. ತೀರಾ ಇತ್ತೀಚೆಗೆ ಶುಕ್ರವಾರ ನಡೆದ ಸೆಷನ್ನಲ್ಲಿ ಗೇಟ್ಸ್ ವಾತಾವರಣದ ಬದಲಾವಣೆ ಬಗ್ಗೆ ತಾವು ಪುಸ್ತಕವೊಂದನ್ನು ಪ್ರಕಟಿಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಶಕ್ತಿ ಮತ್ತು ವಾತಾವರಣದಲ್ಲಿನ ಬದಲಾವಣೆ ಬಗ್ಗೆ ನಾನು ಸಾಕಷ್ಟು ಕಲಿತಿದ್ದೇನೆ. ಈ ನಿಟ್ಟಿನಲ್ಲಿ 15 ವರ್ಷಗಳಲ್ಲಿ ಅತ್ಯಂತ ಕ್ಷಿಪ್ರ ಬದಲಾವಣೆಗಳಾಗಿವೆ. ಈ ಹಿನ್ನೆಲೆಯಲ್ಲಿ ನಮ್ಮ ದೊಡ್ಡ ಗುರಿಗಳನ್ನು ತಲುಪಲು ಈ ಕಲಿಕೆಯ ಪ್ರಾಯೋಗಿಕ ಬಳಕೆಯ ಅಗತ್ಯವಿದೆ. ಇದಕ್ಕೆ ನಮಗೆ ಯೋಜನೆಯೊಂದು ಈಗ ಅಗತ್ಯವಿದೆ ಎಂದು ಬರೆದಿದ್ದಾರೆ.
ಇನ್ನು, ಶುಕ್ರವಾರ ನಡೆದ 'ಆಸ್ಕ್ ಮಿ ಎನಿಥಿಂಗ್' ಸೆಷನ್ನಲ್ಲಿ ಬಳಕೆದಾರರೊಬ್ಬರು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಹೇಗೆ ಎಂದು ಕೇಳಿದ್ದಾರೆ. ಈ ನಿಟ್ಟಿನಲ್ಲಿ ನಾವು ಇಂಗಾಲದ ಡೈ ಆಕ್ಸೈಡ್ ಹೊರ ಹಾಕುವ ವಿಷಯಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ತಾವು ಸಿಂಥೆಟಿಕ್ ಮಾಂಸಾಹಾರಕ್ಕೆ ಬದಲಾಗಿದ್ದು, ಏರ್ಕ್ರಾಫ್ಟ್ಗಳಿಗೆ ಹಸಿರು ಇಂಧನ ಖರೀದಿ, ಅಲ್ಲದೆ, ಮನೆಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿದ್ದು, ಎಲೆಕ್ಟ್ರಿಕಲ್ ವಾಹನಗಳ ಬಳಕೆ ಆರಂಭಿಸಿರುವುದಾಗಿ ಬಹಿರಂಗ ಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಮತ್ತೊಬ್ಬ ಬಳಕೆದಾರರು ವಾತಾವರಣ ಬದಲಾವಣೆಯ ವಿಚಾರದಲ್ಲಿ ತಂತ್ರಜ್ಞಾನ ಹೆಚ್ಚು ನೆರವಾಗುತ್ತದೆ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೇಟ್ಸ್ ನಮಗೆ ಸಿಂಥೆಟಿಕ್ ಮಾಂಸ, ಶಕ್ತಿ ಸಂಗ್ರಹಣ ಕೇಂದ್ರ, ಕಟ್ಟಡ ನಿರ್ಮಾಣ ವಸ್ತುಗಳ ಬಳಕೆಯಲ್ಲಿ ನೂತನ ವಿಧಾನ ಅಳವಡಿಸುವಿಕೆಯ ಅಗತ್ಯವಿದೆ. ಅಲ್ಲದೇ ವಿಶಿಷ್ಟವಾದ ಹೊಸ ಐಡಿಯಾಗಳಿಗೆ ನಾವು ತೆರೆದುಕೊಳ್ಳಬೇಕು ಎಂದರು.
ಅಲ್ಲದೆ, ಜಗತ್ತಿನ ಎಲ್ಲ ಶ್ರೀಮಂತ ರಾಷ್ಟ್ರಗಳು ಸಿಂಥೆಟಿಕ್ ಮಾಂಸವನ್ನು ಅಳವಡಿಸಿಕೊಳ್ಳುವುದು ಉತ್ತಮ. ಕಾಲಕಳೆದಂತೆ ಅದರ ರುಚಿಯಲ್ಲೂ ಸುಧಾರಣೆಯನ್ನು ಸಾಧಿಸಬಹುದು ಎಂದು ಗೇಟ್ಸ್ ಎಂಐಟಿ ಟೆಕ್ನಾಲಜಿಯ ಸಂದರ್ಶನದಲ್ಲಿ ಮಿಥೇನ್ ಹೊರಸೂಸುವಿಕೆ ನಿಯಂತ್ರಿಸುವುದು ಹೇಗೆ ಎನ್ನುವ ವಿಷಯದ ಕುರಿತು ಈ ರೀತಿಯಾಗಿ ಹೇಳಿದ್ದಾರೆ.
2015ರಲ್ಲೇ ಗೇಟ್ಸ್ ಜಾಗತಿಕವಾಗಿ ಹರಡುವ ಆರೋಗ್ಯ ಸಮಸ್ಯೆ ಬಗ್ಗೆ ಎಚ್ಚರಿಸಿದ್ದರು. ಅಲ್ಲದೆ, ಈ ನಿಟ್ಟಿನಲ್ಲಿ ನಾವು ಭವಿಷ್ಯದ ಸಮಸ್ಯೆಗಳ ಬಗ್ಗೆ ಜಾಗೃತರಾಗಿರಬೇಕು ಎನ್ನುವ ಆಶಯ ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ