ಬಿಲ್‌ ಗೇಟ್ಸ್‌ - ಮೆಲಿಂಡಾ ಗೇಟ್ಸ್‌ ವಿಚ್ಛೇದನ; ಗೂಗಲ್‌ನಲ್ಲಿ ಮೈಕ್ರೋಸಾಫ್ಟ್‌ ಷೇರು ಬೆಲೆಯನ್ನು ಹುಡುಕಿದ ಭಾರತೀಯರು

"ನಮ್ಮ ಜೀವನದ ಮುಂದಿನ ಹಂತದಲ್ಲಿ ನಾವು ದಂಪತಿಯಾಗಿ ಒಟ್ಟಿಗೆ ಕಳೆಯಬಹುದು ಎಂದು ನಾವು ಇನ್ನು ಮುಂದೆ ನಂಬುವುದಿಲ್ಲ. ಈ ಹೊಸ ಜೀವನದ ಹಾದಿ ಬದಲಾಯಿಸಲು ಪ್ರಾರಂಭಿಸಿದಾಗ ನಾವು ನಮ್ಮ ಕುಟುಂಬಕ್ಕೆ ಸ್ಪೇಸ್‌ ಮತ್ತು ಗೌಪ್ಯತೆಯನ್ನು ಬಯಸುತ್ತೇವೆ'' ಎಂದೂ ಅವರು ಟ್ವಿಟ್ಟರ್‌ನಲ್ಲಿ ಘೋಷಿಸಿದರು.

ಬಿಲ್​ಗೇಟ್ಸ್​ ದಂಪತಿ

ಬಿಲ್​ಗೇಟ್ಸ್​ ದಂಪತಿ

 • Share this:
  ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ದಂಪತಿ ವಿಚ್ಛೇದನ ಪಡೆಯುತ್ತಿರುವುದಾಗಿ ಸೋಮವಾರ ಪ್ರಕಟಿಸಿದ್ದಾರೆ. ಆದರೂ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಅವರ ಪತ್ನಿ ಮೆಲಿಂಡಾ ಅವರು ವಿಶ್ವದ ಅತಿದೊಡ್ಡ ಖಾಸಗಿ ದತ್ತಿ ಪ್ರತಿಷ್ಠಾನವಾದ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದರು. ಈ ಘೋಷಣೆಯನ್ನು ಇಬ್ಬರೂ ಒಂದೇ ರೀತಿಯ ಟ್ವೀಟ್‌ ಮೂಲಕ ಮಾಡಿದ್ದಾರೆ. ತಮ್ಮ 27 ವರ್ಷಗಳ ವಿವಾಹವನ್ನು ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ.

  ಅಲ್ಲದೆ, ವಿಚ್ಛೇದನಕ್ಕಾಗಿ ಸಿಯಾಟಲ್‌ನ ಕಿಂಗ್ ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ''ಮದುವೆ ಸರಿಪಡಿಸಲು ಆಗದ ರೀತಿ ಮುರಿದುಬಿದ್ದಿದೆ'' ಎಂದಿದ್ದಾರೆ. ಬಿಲ್ ಗೇಟ್ಸ್ 100 ಬಿಲಿಯನ್‌ ಡಾಲರ್‌ಗಿಂತಲೂ ಅಧಿಕ ಆಸ್ತಿ ಹೊಂದಿದ್ದು, ಈ ಹಿಂದೆ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿಯಾಗಿದ್ದರು. ದಂಪತಿ ತಮ್ಮ ಎಸ್ಟೇಟ್‌ ಆಸ್ತಿಯನ್ನು ಹೇಗೆ ಸೆಟಲ್‌ ಮಾಡಿಕೊಳ್ಳುತ್ತಾರೆ ಮತ್ತು ಇದರಿಂದ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ ಮೇಲಾಗುವ ಯಾವುದೇ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಬಹುದು.

  ದಂಪತಿಗೆ ಅಪ್ರಾಪ್ತ ಮಕ್ಕಳಿಲ್ಲ ಎಂದು ವಿಚ್ಛೇದನ ಅರ್ಜಿಯಲ್ಲಿ ಹೇಳಿಕೊಂಡಿದ್ದು, ಅವರ ಮೂವರು ಮಕ್ಕಳಲ್ಲಿ ಕಿರಿಯವರಿಗೆ ಇತ್ತೀಚೆಗೆ 18 ವರ್ಷ ತುಂಬಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅಲ್ಲದೆ, ಇಬ್ಬರೂ ಆಸ್ತಿ ವಿಭಜನೆಯ ಬಗ್ಗೆ ತಮ್ಮ ಒಪ್ಪಂದವನ್ನು ಅಂಗೀಕರಿಸುವಂತೆ ನ್ಯಾಯಾಲಯವನ್ನು ಕೇಳಿಕೊಂಡರು. ಆದರೆ, ಈ ಬಗ್ಗೆ ಯಾವುದೇ ವಿವರವನ್ನು ಬಹಿರಂಗಪಡಿಸಿಲ್ಲ.

  "ನಮ್ಮ ಜೀವನದ ಮುಂದಿನ ಹಂತದಲ್ಲಿ ನಾವು ದಂಪತಿಯಾಗಿ ಒಟ್ಟಿಗೆ ಕಳೆಯಬಹುದು ಎಂದು ನಾವು ಇನ್ನು ಮುಂದೆ ನಂಬುವುದಿಲ್ಲ. ಈ ಹೊಸ ಜೀವನದ ಹಾದಿ ಬದಲಾಯಿಸಲು ಪ್ರಾರಂಭಿಸಿದಾಗ ನಾವು ನಮ್ಮ ಕುಟುಂಬಕ್ಕೆ ಸ್ಪೇಸ್‌ ಮತ್ತು ಗೌಪ್ಯತೆಯನ್ನು ಬಯಸುತ್ತೇವೆ'' ಎಂದೂ ಅವರು ಟ್ವಿಟ್ಟರ್‌ನಲ್ಲಿ ಘೋಷಿಸಿದರು.

  Davanagere: ಜೈನ್ ಸಮುದಾಯದಿಂದ 65 ಬೆಡ್​​​ಗಳುಳ್ಳ ಕೋವಿಡ್ ಸೆಂಟರ್ ಸಿದ್ಧ

  ಗೂಗಲ್‌ನಲ್ಲಿ ಮೈಕ್ರೋಸಾಫ್ಟ್‌ ಷೇರಿನ ಬೆಲೆಯ ಹುಡುಕಾಟ..!

  ಈ ಸುದ್ದಿ ಹೊರಹೊಮ್ಮುತ್ತಿದ್ದಂತೆ ಸಾರ್ವಜನಿಕರು ಗೂಗಲ್‌ನಲ್ಲೇ ಗೂಢಚಾರಿಕೆ ಮಾಡಿದ್ದಾರೆ. ಪ್ರತಿಯೊಬ್ಬರೂ ಎಷ್ಟು ಆಸ್ತಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಗೂಗಲ್‌ನಲ್ಲಿ ಹುಡುಕಿದ್ದಾರೆ. ಜತೆಗೆ, ಕಳೆದ 1 ದಿನದಲ್ಲಿ ಗೂಗಲ್ ಇಂಡಿಯಾದಲ್ಲಿ ಪ್ರಮುಖ ಪ್ರಶ್ನೆ ಎಂದರೆ, ‘ಮೈಕ್ರೋಸಾಫ್ಟ್ ಷೇರು ಬೆಲೆ.’

  1994 ರಲ್ಲಿ ಹವಾಯಿಯಲ್ಲಿ ಗೇಟ್ಸ್‌ ದಂಪತಿ ವಿವಾಹವಾದರು. 1987 ರಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಪ್ರಾಡಕ್ಟ್‌ ಮ್ಯಾನೇಜರ್‌ ಆಗಿ ಮೆಲಿಂಡಾ ಕೆಲಸ ಮಾಡಲು ಪ್ರಾರಂಭಿಸಿದ ನಂತರ ಅವರಿಬ್ಬರೂ ಭೇಟಿಯಾದರು.

  ತನ್ನ 2019 ರ ಆತ್ಮಚರಿತ್ರೆ, ದಿ ಮೊಮೆಂಟ್ ಆಫ್ ಲಿಫ್ಟ್‌ನಲ್ಲಿ, ಮೆಲಿಂಡಾ ಗೇಟ್ಸ್ ತನ್ನ ಬಾಲ್ಯ, ಜೀವನ ಮತ್ತು ಖಾಸಗಿ ಹೋರಾಟಗಳ ಬಗ್ಗೆ ಹಾಗೂ ಸಾರ್ವಜನಿಕ ಐಕಾನ್‌ನ ಪತ್ನಿಯಾಗಿ ಮತ್ತು ಮೂರು ಮಕ್ಕಳೊಂದಿಗೆ ಮನೆಯಲ್ಲಿಯೇ ಇರುವ ತಾಯಿಯ ಸಂಕಷ್ಟಗಳ ಬಗ್ಗೆ ಬರೆದುಕೊಂಡಿದ್ದಾರೆ. ಕಚೇರಿಯ ಭೋಜನಕೂಟದಲ್ಲಿ ಭೇಟಿಯಾದ ನಂತರ, ಪದಬಂಧಗಳ ಪರಸ್ಪರ ಪ್ರೀತಿಯನ್ನು ಹಂಚಿಕೊಂಡ ನಂತರ ಮತ್ತು ಗಣಿತ ಆಟದಲ್ಲಿ ಬಿಲ್ ಗೇಟ್ಸ್‌ ಅನ್ನು ಸೋಲಿಸಿದ ನಂತರ ಮೆಲಿಂಡಾ ಬಿಲ್ ಗೇಟ್ಸ್ ಹೃದಯವನ್ನು ಗೆದ್ದರು.

  ಸಿಯಾಟಲ್ ಮೂಲದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ವಿಶ್ವದ ಅತ್ಯಂತ ಪ್ರಭಾವಶಾಲಿ ಖಾಸಗಿ ಫೌಂಡೇಶನ್‌ ಆಗಿದ್ದು, ಸುಮಾರು 50 ಬಿಲಿಯನ್ ಡಾಲರ್‌ ಮೌಲ್ಯದ ದತ್ತಿಯನ್ನು ಹೊಂದಿದೆ. ಇದು 2000 ರಲ್ಲಿ ಸಂಯೋಜನೆಯಾದಾಗಿನಿಂದ ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿ ಹಾಗೂ ಯು.ಎಸ್. ಶಿಕ್ಷಣ ವಿಷಯಗಳ ಮೇಲೆ ಕೇಂದ್ರೀಕರಿಸಿದೆ.

  1994 ರಿಂದ 2018 ರವರೆಗೆ ಬಿಲ್‌ ಗೇಟ್ಸ್‌ ಮತ್ತು ಅವರ 56 ವರ್ಷದ ಪತ್ನಿ ಸಿಯಾಟಲ್ ಮೂಲದ ಪ್ರತಿಷ್ಠಾನಕ್ಕೆ 36 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಉಡುಗೊರೆಗಳನ್ನು ನೀಡಿದ್ದಾರೆ ಎಂದು ವೆಬ್‌ಸೈಟ್ ತಿಳಿಸಿದೆ. ಕಳೆದ ವರ್ಷ, ಹೂಡಿಕೆದಾರ ವಾರೆನ್ ಬಫೆಟ್ ತನ್ನ ಬರ್ಕ್‌ಷೈರ್ ಹ್ಯಾಥ್‌ವೇ ಇಂಕ್ (ಬಿಆರ್‌ಕೆಎಎನ್) ನಿಂದ 2 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಹಣವನ್ನು ಗೇಟ್ಸ್ ಫೌಂಡೇಶನ್‌ಗೆ ದೇಣಿಗೆ ನೀಡಿದ್ದಾಗಿ ವರದಿಯಾಗಿತ್ತು. ಬಫೆಟ್‌ ಸಾವಿಗೆ ಮುಂಚಿತವಾಗಿ ತನ್ನ ಸಂಪೂರ್ಣ ಸಂಪತ್ತನ್ನು ಬಿಟ್ಟುಕೊಡುವ ಯೋಜನೆಗಳ ಭಾಗವಾಗಿ ಈ ಹಣ ನೀಡಲಾಗಿತ್ತು ಎಂದೂ ತಿಳಿದುಬಂದಿದೆ.

  ಗೇಟ್ಸ್ ಫೌಂಡೇಶನ್ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಹವಾಮಾನವನ್ನು ಕೇಂದ್ರೀಕರಿಸಿದೆ. ಇದರ ಉಪಕ್ರಮಗಳಲ್ಲಿ ಕೊರೊನಾ ವೈರಸ್‌ ಲಸಿಕೆಗಳು, ರೋಗನಿರ್ಣಯ ಪರೀಕ್ಷೆಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳ ಅಭಿವೃದ್ಧಿ, ಸಾರ್ವಜನಿಕ ರೇಡಿಯೋ ಹಾಗೂ ಸೌರಶಕ್ತಿ ಚಾಲಿತ ಶೌಚಾಲಯಗಳ ತಯಾರಿಕೆಗೆ ಬೆಂಬಲವಿದೆ.

  ಅಮೆರಿಕದ ಇನ್ನೊಬ್ಬ ಪ್ರಮುಖ ಬಿಲಿಯನೇರ್ ಮತ್ತು ಲೋಕೋಪಕಾರಿ ಅಮೆಜಾನ್.ಕಾಮ್ ಇಂಕ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ತಮ್ಮ ಮಾಜಿ ಪತ್ನಿ ಮ್ಯಾಕೆಂಜಿ ಜತೆಗೆ ವಿಚ್ಛೇದನ ಪಡೆದುಕೊಂಡ ಎರಡು ವರ್ಷಗಳ ಬಳಿಕ ಬಿಲ್ ಗೇಟ್ಸ್‌ - ಮೆಲಿಂಡಾ ಗೇಟ್ಸ್‌ ವಿಚ್ಛೇದನ ಪ್ರಕರಣ ಬೆಳಕಿಗೆ ಬಂದಿದೆ.
  Published by:Latha CG
  First published: