ಬಿಹಾರ (ನವೆಂಬರ್ 07); ಬಹು ನಿರೀಕ್ಷೆ ಮೂಡಿಸಿರುವ ಬಿಹಾರ ವಿಧಾನಸಭಾ ಚುನಾವಣೆ ಅಂತಿಮ ಘಟ್ಟ ತಲುಪಿದ್ದು, ಇಂದು ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಅಂತಿಮ ಹಂತದಲ್ಲಿ 78 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, 2.35 ಕೋಟಿ ಮತದಾರರು 1,204 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಅರ್ಹರಾಗಿದ್ದಾರೆ. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶೇ.34.82 ರಷ್ಟು ಮತಗಳ ಚಲಾವಣೆಯಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮೊದಲೆರಡು ಹಂತದ ಮತದಾನಕ್ಕಿಂತ ಈ ಬಾರಿ ಅಧಿಕ ಮತದಾನವಾಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಈ ನಡುವೆ ಇಂದು ಸಂಜೆ 6 ಗಂಟೆ ವೇಳೆಗೆ ಮತದಾನ ಅಂತಿಮವಾಗಲಿದ್ದು, ನ್ಯೂಸ್18 ನೆಟ್ವರ್ಕ್ ಆರು ಗಂಟೆಯ ನಂತರ ಸಮೀಕ್ಷಾ ವರದಿ ನೀಡಲಿದೆ ಎಂದು ತಿಳಿಸಿದೆ.
ಕೊರೋನಾ ಬಿಕ್ಕಟ್ಟಿನ ನಡುವೆಯೂ ಇಡೀ ದೇಶ ಬಿಹಾರ ವಿಧಾನಸಭಾ ಚುನಾವಣೆಯನ್ನು ಕಾತರದಿಂದ ಕಾಯುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಬಿಹಾರದಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವ ತವಕದಲ್ಲಿದ್ದರೆ ಮತ್ತೊಂದೆಡೆ ಯುವ ನಾಯಕ ತೇಜಸ್ವಿ ಯಾದವ್ ಎನ್ಡಿಎ ಮೈತ್ರಿಗೆ ಸವಾಲಾಗಿ ಪರಿಣಮಿಸುತ್ತಿದ್ದಾರೆ. ಈ ನಡುವೆ ಮೊದಲೆರಡು ಹಂತದ ಮತದಾನ ಮುಕ್ತಾಯವಾಗಿದೆ.
ಮೊದಲ ಹಂತದ ಮತದಾನ ಅಕ್ಟೋಬರ್.28 ರಂದು ನಡೆದಿದ್ದರೆ, ಎರಡನೇ ಹಂತದ ಮತದಾನ ನವೆಂಬರ್ 03 ರಂದು ನಡೆದಿತ್ತು. ಇಂದು ಮೂರನೇ ಹಂತದ ಮತದಾನ ಅಂತಿಮ ಘಟ್ಟ ತಲುಪಿದ್ದು, ನವೆಂಬರ್ 10 ರಂದು ಫಲಿತಾಂಶ ಹೊರ ಬೀಳಲಿದೆ. ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಆದರೆ, ಇದೇ ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಸಂದರ್ಶಿಸಿರುವ ನ್ಯೂಸ್10 ಮೀಡಿಯಾ ನೆಟ್ವರ್ಕ್ ಚುನಾವಣಾ ಸಮೀಕ್ಷೆಯನ್ನು ಸಿದ್ದಪಡಿಸಿದ್ದು ಸಂಜೆ 7ರ ನಂತರ ಈ ಸಮೀಕ್ಷಾ ವರದಿ ಟಿವಿಯಲ್ಲಿ ಪ್ರದರ್ಶನವಾಗಲಿದೆ. ಈ ಸಮೀಕ್ಷೆಯಲ್ಲಿ ಗೆಲುವು ಯಾರ ಕಡೆ ಇರಲಿದೆ ಎಂದು ನುರಿತ ರಾಜಕೀಯ ತಜ್ಞರು ವಿಶ್ಲೇಷಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ