ಬಿಹಾರ (ಅಕ್ಟೋಬರ್12); ಉತ್ತರಪ್ರದೇಶದ ಹತ್ರಾಸ್ ಎಂಬಲ್ಲಿ ಕಳೆದ ತಿಂಗಳು ಓರ್ವ ದಲಿತ ಯುವತಿಯನ್ನು ಕೆಲವರು ಸಾಮೂಹಿಕ ಅತ್ಯಾಚಾರವೆಸಗಿ ಅತ್ಯಂತ ನಿರ್ಧಯವಾಗಿ ಕೊಲೆ ಮಾಡಿದ್ದರು. ಈ ಘಟನೆ ಇದೀಗ ರಾಷ್ಟ್ರಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ನಡುವೆ ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐಗೆ ವಹಿಸಲಾಗಿದೆ. ಆದರೆ, ಈ ಘಟನೆ ಮಾಸುವ ಮುನ್ನವೇ ಬಿಹಾರ ರಾಜ್ಯದ ಬಕ್ಸರ್ ಜಿಲ್ಲೆಯಲ್ಲಿ ಮತ್ತೋರ್ವ ದಲಿತ ಮಹಿಳೆಯೊಬ್ಬರ ಮೇಲೆ ಕೆಲವು ಕಿರಾತಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯ ಮಗುವಿನ ಸಮೇತ ಅವರನ್ನು ಕಾಲುವೆಗೆ ಎಸೆದಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಸಂತ್ರಸ್ತ ಮಹಿಳೆಯ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಐದು ವರ್ಷದ ಮಗುವನ್ನು ಕಾಲುವೆಗೆ ಎಸೆದಿದ್ದರಿಂದ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ಏಳು ಆರೋಪಿಗಳಲ್ಲಿ ಒಬ್ಬನನ್ನು ಈಗಾಗಲೇ ಬಂಧಿಸಲಾಗಿದೆ. ಇಬ್ಬರನ್ನು ಗುರುತಿಸಲಾಗಿದೆ. ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಪಾಟ್ನಾದಿಂದ 135 ಕಿ.ಮೀ ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ. ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ಕೆ.ಕೆ.ಸಿಂಗ್ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ತಿಂಗಳು ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದ ಉತ್ತರ ಪ್ರದೇಶದ ಹತ್ರಾಸ್‌ನ 20 ವರ್ಷದ ಯುವತಿಯನ್ನು ಕ್ರೂರವಾಗಿ ಅತ್ಯಾಚಾರಗೈದು ಹಲ್ಲೆ ಮಾಡಿದ್ದ ಘಟನೆಯ ಬೆನ್ನಲ್ಲೇ, ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ನಡುವೆ ಈ ಘಟನೆ ನಡೆದಿದೆ.
ದೆಹಲಿಯಲ್ಲಿ 2012 ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರವನ್ನು ನೆನಪಿಸುವ ಹತ್ರಾಸ್ ಪ್ರಕರಣವನ್ನು ಸಿಬಿಐ ತೆಗೆದುಕೊಂಡಿದೆ. ಯುವತಿಯನ್ನು ತನ್ನ ಹಳ್ಳಿಯ ನಾಲ್ಕು ಮೇಲ್ಜಾತಿ ಪುರುಷರು ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಆಕೆಯ ಕುಟುಂಬ ಇಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಹಾಜರಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ