ಬಿಹಾರ: ಹಿಂದಿನ ದಿನಗಳಲ್ಲಿ ಗೊತ್ತಾದ ವಿವಾಹ (Marriage) ನಿಂತರೆ ವಧು-ವರರ ಮನೆಯವರು ದೊಡ್ಡ ಆಘಾತದಂತೆ ಭಾವಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿವಾಹ, ನಿಶ್ಚಿತಾರ್ಥಗಳನ್ನು ರದ್ಧುಗೊಳಿಸುವುದು ಸಾಮಾನ್ಯವಾಗುತ್ತಿದೆ. ಮೊದಲಾದರೆ ವರದಕ್ಷಿಣೆ (Dowry) ಹೆಚ್ಚಾಗಿ ಕೇಳುವ ವಿಚಾರಕ್ಕೆ ಅಥವಾ ಕದ್ದು ಮುಚ್ಚಿ 2ನೇ ವಿವಾಹ ನಡೆಯುವ ವೇಳೆ ವಿವಾಹಗಳು ನಿಲ್ಲುತ್ತಿದ್ದವು. ಆದರೆ ಬಿಹಾರದಲ್ಲಿ (Bihar) ವಿಚಿತ್ರ ಕಾರಣದಿಂದ ಮದುವೆ ನಿಂತಿದೆ. ಇಲ್ಲಿ ಸ್ವತಃ ವರ ಕುಡಿದು ಟೈಟಾಗಿ (Drunk Man) ಮದುವೆ ದಿನವನ್ನೇ ಮರೆತಿದ್ದಾನೆ. ವಧುವಿನ ಕಡೆಯವರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ವರನ ಆಗಮನಕ್ಕೆ ಕಾದು ಕಾದು ಸುಸ್ತಾಗಿ ಮನೆಗೆ ತೆರಳಿದ್ದಾರೆ.
ಕುಡಿದು ಟೈಟಾದ ವರ
ಕಲ್ಯಾಣ ಮಂಟಪದಲ್ಲಿ ವಧು ಹಾಗೂ ವಧುವಿನ ಕಡೆಯವರು, ಸಂಬಂಧಿಕರು ವಿವಾಹಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರು. ಆದರೆ ವರ ಮಾತ್ರ ಆಗಮಿಸಿಲ್ಲ. ಆತ ಕಂಠಪೂರ್ತಿ ಕುಡಿದಿದ್ದರಿಂದ ಇಂದು ತನ್ನ ಮದುವೆ ಅನ್ನೋದನ್ನೇ ಮರೆತಿದ್ದಾನೆ. ಬಿಹಾರದ ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವಿವಾಹ ನಿರಾಕರಿಸಿದ ವಧು
ಕುಡಿತದ ಅಮಲು ಇಳಿದ ಮೇಲೆ ವರ ವಧುವಿನ ಮನೆಗೆ ತೆರಳಿದ್ದಾನೆ. ಆದರೆ ಆತನನ್ನು ಮದುವೆಯಾಗಲು ವಧು ನಿರಾಕರಿಸಿದ್ದಾಳೆ. ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಂತಹ ವ್ಯಕ್ತಿಯೊಂದಿಗೆ ಜೀವನ ಪರ್ಯಂತ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ವಧು ಹೇಳಿದ್ದಾಳೆ. ಈಗಾಗಲೆ ಆತ ದೊಡ್ಡ ಕುಡುಕ ಎಂಬ ಮಾಹಿತಿಯಿತ್ತು. ಆದರೆ ವಿವಾಹದ ದಿನವೇ ಮತ್ತೆ ಕುಡಿದು ಕಲ್ಯಾಣ ಮಂಟಪಕ್ಕೆ ಬಾರದ ಹಿನ್ನಲೆ ತಾನೂ ಆತನನ್ನು ವಿವಾಹವಾಗಲ್ಲ ಎಂದಿದ್ದಾಳೆ.
ಇದನ್ನೂ ಓದಿ: Marriage: ತಾಳಿ ಕಟ್ಟಿದ ಮೂರೇ ದಿನಕ್ಕೆ ಕಾಲ್ಕಿತ್ತ ಗಂಡ? ಇದು ಮದುವೆಯೇ ಅಲ್ಲ ಎಂದ ಪತಿರಾಯ
ಮದುವೆ ಖರ್ಚು ಬರಿಸಲು ಆಗ್ರಹ
ಮಾತ್ರವಲ್ಲ, ವಧುವಿನ ಮನೆಯವರು ಮದುವೆಯ ವ್ಯವಸ್ಥೆಗೆ ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವಂತೆ ವರನ ಕುಟುಂಬಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ವರನ ಕಡೆಯವರ ಕೆಲವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಕುಡಿದು ಟೈಟಾಗಿ ಬಂದ ವರನ ಕಡೆಯವರು, ಮದುವೆ ಕ್ಯಾನ್ಸಲ್
ಅಸ್ಸಾಂನ ನಲ್ಬರಿ ಜಿಲ್ಲೆಯ ಬರ್ಖಾನಾಜನ್ ಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ವಧುವಿನ ಕಡೆಯವರು ಕಲ್ಯಾಣ ಮಂಟಪದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರೆ, ವರ ಹಾಗೂ ಆತನ ಜತೆಗಿದ್ದ ಆತನ ತಂದೆ ಮಿತಿಮೀರಿ ಕುಡಿದು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದಾರೆ. ವರ ವಿಪರೀತ ಕುಡಿದಿದ್ದರಿಂದ ವಿವಾಹ ಕಾರ್ಯಕ್ರಮಗಳನ್ನು ನೆರೆವೇರಿಸಲಾಗದೇ ಹಸಮಣೆಯಲ್ಲೇ ಬಿದ್ದಿದ್ದಾನೆ.
ಇದನ್ನೂಓದಿ: Marriage: ವಯಸ್ಸು, ಕಾಯಿಲೆ ಮುಚ್ಚಿಟ್ಟು ಆಗಿದ್ದ ಮದುವೆಯನ್ನು ಅಸಿಂಧುಗೊಳಿಸಿದ ನ್ಯಾಯಾಲಯ
ಹಸಮಣೆಯಲ್ಲೇ ಬಿದ್ದ ವರ
ವಿವಾಹ ಸಮಾರಂಭದಲ್ಲಿ ಪುರೋಹಿತರು ಮಂತ್ರಗಳನ್ನು ಉಚ್ಛರಿಸಿ ವರನಿಗೆ ವಿವಾಹ ಕಾರ್ಯಗಳನ್ನು ಬೋಧಿಸುತ್ತಿದ್ದಾಗ ಅದನ್ನು ಪಾಲಿಸಲು ಆತ ಹೆಣಗಾಡಿದ್ದಾನೆ. ಅತಿಯಾಗಿ ಕುಡಿದ ಪರಿಣಾಮ ಅಮಲೇರಿದಂತೆ ವರ್ತಿಸುತ್ತಿದ್ದ, ಇದರಿಂದ ಕೋಪಗೊಂಡ ವಧು ತನಗೆ ಈ ವಿವಾಹವೇ ಬೇಡ ಎಂಬ ನಿರ್ಧಾರಕ್ಕೆ ಬಂದು ವಿವಾಹವನ್ನು ರದ್ದುಗೊಳಿಸಿದ್ದಳು. ಇದಲ್ಲದೆ ಸೀದಾ ಪೊಲೀಸ್ ಠಾಣೆಗೆ ತೆರಳಿ ವರನ ಕಡೆಯವರ ವಿರುದ್ಧ ದೂರು ನೀಡಿದ್ದಳು. ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು, ಈ ಹಣವನ್ನ ವರನ ಕಡೆಯವರಿಂದ ಕೊಡಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ವಿವಾಹ ರದ್ದು
ಉತ್ತರ ಪ್ರದೇಶದಲ್ಲಿ ವಿಚಿತ್ರ ಕಾರಣಕ್ಕೆ ಮದುವೆ ನಿಂತಿದೆ. ವಧುಗೆ ಪಿಯುಸಿಯಲ್ಲಿ ಅಂಕ ಕಡಿಮೆ ಬಂದಿದೆ, ಹಾಗಾಗಿ ತಾನೂ ಆಕೆಯನ್ನು ವಿವಾಹ ಆಗುವುದಿಲ್ಲ ಎಂದು ವರ ವಿವಾಹವನ್ನು ರದ್ದುಗೊಳಿಸಿದ್ದಾನೆ. ಆದರೆ ವರದಕ್ಷಿಣೆ ನೀಡದ ಹಿನ್ನೆಲೆ ಏಕಾಏಕಿ ಮದುವೆ ರದ್ದುಮಾಡಿ, ಈಗ ಕ್ಷುಲ್ಲಕ ಕಾರಣ ನೀಡಿದ್ದಾರೆ ಎಂದು ಪೊಲೀಸರಿಗೆ ವಧುವಿನ ಕಡೆಯವರು ದೂರು ನೀಡಿದ್ದಾರೆ. ವರನ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ