news18-kannada Updated:October 20, 2020, 8:57 AM IST
ನಿತೀಶ್ ಕುಮಾರ್-ತೇಜಸ್ವಿ ಯಾದವ್.
ಪಾಟ್ನಾ: ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆ ಹತ್ತಿರಾಗುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಬಿಹಾರದಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವ ಕಾತರತೆಯಲ್ಲಿದ್ದರೆ ಮತ್ತೊಂದೆಡೆ ಯುವ ನಾಯಕ ತೇಜಸ್ವಿ ಯಾದವ್ ಎನ್ಡಿಎ ಮೈತ್ರಿಗೆ ಸವಾಲಾಗಿ ಪರಿಣಮಿಸುತ್ತಿದ್ದಾರೆ. ಸತತವಾಗಿ ಆಡಳಿತರೂಢ ಸರ್ಕಾರ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ತೇಜಸ್ವಿ ಯಾದವ್ ಇದೀಗ ನಿತೀಶ್ ಕುಮಾರ್ ಅವರಿಗೆ ಬಹಿರಂಗ ಸವಾಲು ಹಾಕುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಬಿಹಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ರಾಜ್ಯದ ಅಭಿವೃದ್ಧಿ ಕುರಿತು ನೇರ ಚರ್ಚೆಗೆ ಆಹ್ವಾನಿಸುವ ಮೂಲಕ ಸವಾಲು ಹಾಕಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ, ಸರ್ಕಾರದ ಮುಖ್ಯಸ್ಥರಾಗಿ ಕಳೆದ 15 ವರ್ಷಗಳಲ್ಲಿ ಅವರು ಮಾಡಿದ ಸಾಧನೆಗಳ ಬಗ್ಗೆ ಚರ್ಚಿಸಲು ಅಭಿವೃದ್ಧಿಯ ವಿಷಯದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲು ಯಾವುದೇ ಸಮಯ ಮತ್ತು ಸ್ಥಳವನ್ನು ಆಯ್ಕೆ ಮಾಡಬಹುದು ಎಂದು ತೇಜಸ್ವಿ ಯಾದವ್ ನಿತೀಶ್ ಕುಮಾರ್ ಅವರಿಗೆ ಸವಾಲು ಹಾಕಿದರು.
“ಕಳೆದ 15 ವರ್ಷಗಳಲ್ಲಿ ನಿತೀಶ್ ಕುಮಾರ್ ಅವರು ತಮ್ಮ ಸಾಧನೆಗಳ ಬಗ್ಗೆ ನನ್ನೊಂದಿಗೆ ಚರ್ಚಿಸಲಿ ಎಂದು ನಾನು ಒತ್ತಾಯಿಸುತ್ತೇನೆ. ಬಿಹಾರದ ವೈಶಾಲಿಯಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವ ಸ್ಥಾಪನೆಯಾದ ಕಾರಣ, ಇಲ್ಲಿ ನಾವು ಮುಖ್ಯಮಂತ್ರಿ ಅಭ್ಯರ್ಥಿಗಳ ನಡುವೆ ನೇರ ಚರ್ಚೆ ನಡೆಯಬೇಕು ಎನ್ನುವ ಈ ಸಂಪ್ರದಾಯವನ್ನು ಪ್ರಾರಂಭಿಸೋಣ” ಎಂದಿದ್ದಾರೆ.
“ಜನರು ರಾಜ್ಯ ಸರ್ಕಾರದ ಮೇಲೆ ತೀವ್ರ ಕೋಪಗೊಂಡಿದ್ದು, ಮಹಾ ಘಟಬಂಧನ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ ಎಂದು ತೇಜಸ್ವಿ ಯಾದವ್ ಹೇಳಿದರು.
ಪ್ರತಿ ಚುನಾವಣಾ ಸಭೆಯಲ್ಲೂ ನಿರುದ್ಯೋಗ ಮತ್ತು ವಲಸೆಯ ವಿಷಯಗಳ ಬಗ್ಗೆ ತೇಜಸ್ವಿ ಯಾದವ್ ನಿರಂತರವಾಗಿ ಆಡಳಿತ ಪಕ್ಷವನ್ನು ಗುರಿಯಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕೋವಿಡ್ ಕಾರಣಕ್ಕೆ ವಿಳಂಬ ಆಯ್ತು, ಪೌರತ್ವ ಕಾಯ್ದೆ ಶೀಘ್ರದಲ್ಲೇ ಅನುಷ್ಠಾನ: ಜೆ.ಪಿ. ನಡ್ಡಾ
ಇದರ ನಡುವೆ, ಸವಾಲಿಗೆ ಪ್ರತಿಕ್ರಿಯಿಸಿದ ಬಿಹಾರದ ಮಾಜಿ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ನಿತ್ಯಾನಂದ್ ರೈ, “ಅಭಿವೃದ್ಧಿಯ ವಿಷಯದಲ್ಲಿ ಎಲ್ಲಿಯಾದರೂ ಚರ್ಚಿಸಲು ಅವರು ಸಿದ್ಧರಾಗಿದ್ದಾರೆ. ಆದರೆ ಈಗ ನಿತೀಶ್ ಕುಮಾರ್ ಎನ್ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ” ಎಂದರು.
ಬಿಹಾರದಲ್ಲಿ, 243 ಸದಸ್ಯರ ವಿಧಾನಸಭಾ ಚುನಾವಣೆಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7 ರಂದು ಮತದಾನ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಹೊರಬೀಳಲಿದೆ.
Published by:
MAshok Kumar
First published:
October 20, 2020, 8:57 AM IST