news18-kannada Updated:November 11, 2020, 9:40 AM IST
ನಿತೀಶ್ ಕುಮಾರ್- ನರೇಂದ್ರ ಮೋದಿ
ಪಾಟ್ನಾ (ನ. 11): ಮತಗಟ್ಟೆಯ ಸಮೀಕ್ಷೆಯನ್ನು ಬುಡಮೇಲಾಗಿಸಿ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೊನೆಗೂ ಎನ್‌ಡಿಎ ಅಧಿಕಾರಕ್ಕೆ ಬಂದಿದೆ. ನಿತೀಶ್ ಕುಮಾರ್ ಮತ್ತೆ ಬಿಹಾರದ ಮುಖ್ಯಮಂತ್ರಿಯಾಗುವುದು ಪಕ್ಕಾ ಎನ್ನಲಾಗಿದೆ. ಬಿಹಾರದಲ್ಲಿ ಮತ್ತೊಮ್ಮೆ ಎನ್‌ಡಿಎ ಮೈತ್ರಿಕೂಡ ಜಯಭೇರಿ ಬಾರಿಸಿದೆ. ಸಾಕಷ್ಟು ಏರಿಳಿತಗಳ ನಡುವೆಯೂ, ಹಲವು ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದ ಎನ್‌ಡಿಎ ಸತತ 14 ಗಂಟೆಗಳ ಮತ ಎಣಿಕೆಯ ಬಳಿಕ ಗೆಲುವಿನ ನಗು ಬೀರಿದೆ. ಇದರಿಂದ ಬಿಹಾರದ ಅತಿದೊಡ್ಡ ಪಕ್ಷವಾಗಿ ಆರ್ಜೆಡಿ ಹೊರಹೊಮ್ಮಿದ್ದರೂ ತೇಜಸ್ವಿ ಯಾದವ್ ಮುಖ್ಯಮಂತ್ರಿ ಪದವಿಯ ಕನಸು ಕನಸಾಗಿಯೇ ಉಳಿಯಲಿದೆ. ಬಿಜೆಪಿಯೊಂದಿಗೆ ಕೈ ಜೋಡಿಸಿರುವ ಜೆಡಿಯು ಪಕ್ಷದ ನಿತೀಶ್ ಕುಮಾರ್ ಮತ್ತೊಮ್ಮೆ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ.
ನಿನ್ನೆಯ ಮತ ಎಣಿಕೆಯ ಆರಂಭದಲ್ಲಿ ಎನ್‌ಡಿಎ ಮತ್ತು ಮಹಾಘಟಬಂಧನ್ ಮಧ್ಯೆ ತೀವ್ರ ಪೈಪೋಟಿ ಮತ್ತು ಸಮಾನ ಮುನ್ನಡೆ ಸ್ಥಿತಿ ಇದ್ದರೂ ಮಧ್ಯಾಹ್ನದ ನಂತರ ಎನ್‌ಡಿಎ ಮುನ್ನಡೆ ಸಾಧಿಸಿತ್ತು. ಒಂದುವೇಳೆ ಬಿಹಾರದಲ್ಲಿ ಎನ್‌ಡಿಎ ಜಯ ಸಾಧಿಸಿದರೆ ನಿತೀಶ್ ಕುಮಾರ್ ಅವರೇ ಸರ್ಕಾರ ಮುನ್ನಡೆಸುವರು ಎಂದು ಹೇಳಲಾಗಿತ್ತು. ಅದರಂತೆ ನಿತೀಶ್ ಕುಮಾರ್ ಮತ್ತೊಮ್ಮೆ ಬಿಹಾರದ ಸಿಎಂ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ.
ಇತ್ತ ಕಾಂಗ್ರೆಸ್ ಕೂಡ ನಿತೀಶ್ ಕುಮಾರ್ಗೆ ಆಹ್ವಾನ ನೀಡಿದ್ದು, ನಮ್ಮ ಜೊತೆ ಕೈ ಜೋಡಿಸಿ, ತೇಜಸ್ವಿ ಯಾದವ್ಗೆ ಬೆಂಬಲ ನೀಡಬೇಕಾಗಿ ಮನವಿ ಮಾಡಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ನಿತೀಶ್ ಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಲು ಒಪ್ಪದಿದ್ದರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ದಿಗ್ವಿಜಯ್ ಸಿಂಗ್ ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಬಿಜೆಪಿಯನ್ನು ಯಾವ ಕಾರಣಕ್ಕೂ ನಂಬುವಂತಿಲ್ಲ. ಲಾಲೂ ಪ್ರಸಾದ್ ಯಾದವ್ ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಜೊತೆಗೆ ಬೆಂಬಲವಾಗಿದ್ದವರು. ಅವರ ಪಕ್ಷ ಅಧಿಕಾರಕ್ಕೆ ಬರಲು ನೀವು ಬಿಜೆಪಿಯನ್ನು ತೊರೆದು ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಜೊತೆ ಕೈ ಜೋಡಿಸಿ ಎಂದು ದಿಗ್ವಿಜಯ್ ಸಿಂಗ್ ಆಹ್ವಾನ ನೀಡಿದ್ದಾರೆ.
ನಿನ್ನೆ ಮಧ್ಯರಾತ್ರಿ ಬಿಹಾರದ ಎಲ್ಲ 243 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ, ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ 125 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಮಹಾಘಟಬಂಧನ್ 110 ಸ್ಥಾನಗಳನ್ನು ಪಡೆದಿದೆ. 75 ಸ್ಥಾನಗಳಲ್ಲಿ ಜಯ ಸಾಧಿಸಿರುವ ಆರ್ಜೆಡಿ ಬಿಹಾರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಯುಗಿಂತ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೂ ಈ ಮೊದಲೇ ಘೋಷಿಸಿದಂತೆ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಹೀಗಾಗಿ, ನಿತೀಶ್ ಕುಮಾರ್ ಕಡಿಮೆ ಸ್ಥಾನಗಳನ್ನು ಪಡೆದರೂ ಸಿಎಂ ಸ್ಥಾನ ಸಿಗುವುದು ಪಕ್ಕಾ ಆಗಿದೆ. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ ಬಿಹಾರದಲ್ಲಿ ಬಿಜೆಪಿ 72 ಸ್ಥಾನಗಳನ್ನು ಪಡೆದಿದೆ. ಜೆಡಿಯು 42 ಸ್ಥಾನಗಳನ್ನು ಪಡೆದಿದೆ. ಮಹಾಘಟಬಂಧನ್ದಲ್ಲಿ ಆರ್ಜೆಡಿ 75, ಕಾಂಗ್ರೆಸ್ 19, ಎಡಪಕ್ಷಗಳು 16 ಸ್ಥಾನಗಳನ್ನು ಗಳಿಸಿವೆ.
Published by:
Sushma Chakre
First published:
November 11, 2020, 9:33 AM IST