Bihar Assembly Election 2020 Results Live: ಬಿಹಾರ ಚುನಾವಣೆ – ಜೆಡಿಯುಗೆ ಹಿನ್ನಡೆಯಾದರೂ ಸರಳ ಬಹುಮತದತ್ತ ಎನ್​ಡಿಎ

ಸಂಜೆ 5ರವರೆಗೂ ನಡೆದ ಮತ ಎಣಿಕೆಯ ಮಾಹಿತಿ ಪ್ರಕಾರ ಎನ್​ಡಿಎ 48 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ಸೇರಿದಂತೆ 121 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಎಂಜಿಬಿ 113 ಕ್ಷೇತ್ರಗಳಲ್ಲಿ ಮುಂದಿದೆ. ಈವರೆಗೂ ಶೇ. 55ರಷ್ಟು ಮತ ಎಣಿಕೆಯಾಗಿದೆ.

Bihar Election Result 2020

Bihar Election Result 2020

 • Share this:
  ಬಿಹಾರ ರಾಜ್ಯದ 243 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಸರಳ ಬಹುಮತದತ್ತ ಸಾಗುತ್ತಿದೆ. ಮತ ಎಣಿಕೆಯ ಆರಂಭದಲ್ಲಿ ಎನ್​ಡಿಎ ಮತ್ತು ಮಹಾಘಟಬಂಧನ್ ಮಧ್ಯೆ ನಿಕಟ ಪೈಪೋಟಿ ಮತ್ತು ಸಮಾನ ಮುನ್ನಡೆ ಸ್ಥಿತಿ ಇದ್ದರೂ 11:30ರ ನಂತರ ಎನ್​ಡಿಎ ಮುನ್ನಡೆ ಸಂಖ್ಯೆ ಹೆಚ್ಚಾಯಿತು. ಸಂಜೆ 5ರ ವೇಳೆಗೆ ಬಂದ ಮಾಹಿತಿ ಪ್ರಕಾರ 48 ಕ್ಷೇತ್ರಗಳಲ್ಲಿ ಎನ್​ಡಿಎ ಗೆಲುವು ಸಾಧಿಸಿದರೆ, ಮಹಾಘಟಬಂಧನ ಮೈತ್ರಿಕೂಟ 31ರಲ್ಲಿ ಗೆದ್ದಿದೆ. ಎನ್​ಡಿಎ ಮೈತ್ರಿಕೂಟ ಒಟ್ಟಾರೆ 121 ಕಡೆ ಮುನ್ನಡೆ ಹೊಂದಿದರೆ, ಮಹಾಘಟಬಂಧನ್ 113 ಕಡೆ ಮುನ್ನಡೆ ಪಡೆದಿದೆ. ಎನ್​ಡಿಎ ಮೈತ್ರಿಕೂಟದಲ್ಲಿ ಜೆಡಿಯುಗಿಂತ ತುಸು ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಮಹಾಘಟಬಂಧನದಲ್ಲಿ ಆರ್​ಜೆಡಿ ಅತಿಹೆಚ್ಚು ಸ್ಥಾನ ಪಡೆದರೂ ಕಳೆದ ಬಾರಿಗಿಂತ ಅದರ ಸಾಧನೆ ಕುಂದಿದೆ. ಎಡಪಕ್ಷಗಳೂ ತಮ್ಮ ಅಸ್ತಿತ್ವವನ್ನು ಜೋರಾಗಿಯೇ ತೋರಿಸುತ್ತಿವೆ. ಒಟ್ಟಾರೆ ಪಕ್ಷಾವಾರು ಲೆಕ್ಕ ತೆಗೆದುಕೊಂಡಾಗ ಆರಂಭದಿಂದಲೂ ಆರ್​ಜೆಡಿ ಮೊದಲ ಸ್ಥಾನದಲ್ಲಿತ್ತು. ಆದರೆ, 11:30ರ ನಂತರ ಬಿಜೆಪಿ ಗರಿಷ್ಠ ಸ್ಥಾನಗಳಲ್ಲಿ ಮುನ್ನಡೆ ಹೊಂದಿದ ಪಕ್ಷವಾಗಿ ಹೊರಹೊಮ್ಮಿತು. ಸಂಜೆ ಆರ್​ಜೆಡಿ ಸಂಖ್ಯೆ ಮತ್ತೆ ಹೆಚ್ಚಾಯಿತು. ಜೆಡಿಯು ಮೂರನೇ ಸ್ಥಾನಗಳಲ್ಲಿವೆ.

  ಸಂಜೆ ಐದವರೆಗೆ ಎಣಿಕೆಯಾದ ಮತಗಳ ಪ್ರಮಾಣ ಶೇ. 55 ಮಾತ್ರ. ಆದರೆ, 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಅಂತರ ಸಾವಿರ ಮತಗಳಿಗಿಂತ ಕಡಿಮೆ ಇದೆ. 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮತಗಳ ಮುನ್ನಡೆ 2 ಸಾವಿರಕ್ಕಿಂತ ಕಡಿಮೆ ಇದೆ. ಹೀಗಾಗಿ, ಮುಂದಿನ ಸುತ್ತುಗಳ ಬಳಿಕ ಮುನ್ನಡೆ ಲೆಕ್ಕಾಚಾರದಲ್ಲಿ ಸ್ವಲ್ಪ ಬದಲಾಗಬಹುದು. ಇನ್ನೂ ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇದೆ. ಕೆಲ ಕ್ಷೇತ್ರಗಳಲ್ಲಿ 50 ಸುತ್ತುಗಳವರೆಗೆ ಮತ ಎಣಿಕೆ ಮಾಡಬೇಕಿದೆ. ಹೀಗಾಗಿ, ಫಲಿತಾಂಶ ಯಾವ ಕಡೆ ಬೇಕಾದರೂ ಅಂತಿಮವಾಗಿ ವಾಲಬಹುದು. ಇವತ್ತು ಸಂಜೆಯಾದರೂ ಸಂಪೂರ್ಣ ಫಲಿತಾಂಶ ಬರುವುದು ಅನುಮಾನ ಎಂಬಂತಿದೆ.

  ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಅತಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿರುವುದು ಎಡಪಕ್ಷಗಳು. ಸಿಪಿಐ(ಎಂಲ್), ಮಾರ್ಕ್ಸ್​ವಾದಿ ಕಮ್ಯೂನಿಸ್ಟ್ ಪಕ್ಷ ಮತ್ತು ಸಿಪಿಐ ಪಕ್ಷಗಳು ಉತ್ತಮ ಸಾಧನೆ ಮಾಡುತ್ತಿರುವಂತಿದೆ. ಆರ್​ಜೆಡಿ ಪಕ್ಷ ಕಳೆದ ಬಾರಿಗಿಂತ ತುಸು ಕಡಿಮೆ ಸ್ಥಾನ ಪಡೆಯುವಂತಿದೆ. ಜೆಡಿಯು ಸ್ಥಿತಿ ಕೂಡ ಇದೇ ಆಗಿದೆ. ಬಿಜೆಪಿಗೆ ಹೆಚ್ಚು ಲಾಭವಾಗುತ್ತಿರುವಂತಿದೆ. ಇಲ್ಲಿ ಜೆಡಿಯು  ಹಿನ್ನಡೆಗೆ ಪ್ರಮುಖ ಕಾರಣವಾಗಿರುವುದು ಎಲ್​ಜೆಪಿ. ಜೆಡಿಯು ಪಕ್ಷವನ್ನ ಸೋಲಿಸಲೆಂದೇ ಕಣಕ್ಕಿಳಿದಂತಿರುವ ಎಲ್​ಜೆಪಿಯ ಅಜೆಂಡಾ ವರ್ಕೌಟ್ ಆಗುತ್ತಿರುವಂತಿದೆ. ಗಮನಾರ್ಹ ವಿಚಾರವೆಂದರೆ ಮುಸ್ಲಿಮ್ ಸಮುದಾಯದ ಪ್ರಾಬಲ್ಯ ಹೆಚ್ಚಿರುವ 53 ಕ್ಷೇತ್ರಗಳಲ್ಲಿ ಎನ್​ಡಿಎ 36 ಕಡೆ ಮುನ್ನಡೆ ಸಾಧಿಸಿದೆ. ಇದು ಧಾರ್ಮಿಕ ಸಮುದಾಯಗಳ ಧ್ರುವೀಕರಣ ಆಗಿರಬಹುದಾ ಎಂಬುದನ್ನು ಸೂಚಿಸುತ್ತದೆ.

  ಎರಡು ಮತ್ತು ಮೂರನೇ ಹಂತದ ಮತದಾನದಲ್ಲಿ ಎನ್​​ಡಿಎ ಮೈಲುಗೈ:

  ಮತ್ತೊಂದು ಕುತೂಹಲಕಾರಿ ವಿಚಾರ ಎಂದರೆ, ಮೊದಲ ಹಂತದ ಮತದಾನ ನಡೆದ ಕ್ಷೇತ್ರಗಳಲ್ಲಿ ಆರ್​ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ದಿಗ್ವಿಜಯದತ್ತ ಸಾಗುತ್ತಿದೆ. ಆದರೆ, ಎರಡನೇ ಹಂತದ ಮತದಾನವಾದ ಕ್ಷೇತ್ರಗಳಲ್ಲಿ ಎನ್​ಡಿಎ ಮೇಲುಗೈ ಹೊಂದಿದೆ. ಮೂರನೇ ಹಂತದ ಮತದಾನದ ಕ್ಷೇತ್ರಗಳಲ್ಲಿ ಎನ್​ಡಿಎ ಸ್ಪಷ್ಟ ಮುನ್ನಡೆ ಪಡೆದಿದೆ.

  ಹಲವಾರು ಕಾರಣಕ್ಕೆ ಬಿಹಾರ ಚುನಾವಣೆ ರಾಷ್ಟ್ರವ್ಯಾಪಿ ಕುತೂಹಲ ಮೂಡಿಸಿದೆ. ಎನ್​ಡಿಎ ಮತ್ತು ಮಹಾಘಟಬಂಧನ (ಎಂಟಿಬಿ) ಇಲ್ಲಿ ಪ್ರಮುಖ ಮೈತ್ರಿಕೂಟಗಳಾಗಿವೆ. ಹಾಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್​ಡಿಎ ವಿರುದ್ಧ ತೇಜಸ್ವಿ ಯಾದವ್ ನೇತೃತ್ವದ ಎಂಟಿಬಿ ತೀವ್ರ ಸ್ಪರ್ಧೆಯೊಡ್ಡಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಮಹಾಘಟಬಂಧನದ ಗೆಲುವನ್ನು ಸೂಚಿಸಿವೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಅಕ್ಟೋಬರ್ 28, ನವೆಂಬರ್ 3 ಹಾಗೂ ನವೆಂಬರ್ 7ರಂದು ಮತದಾನ ನಡೆದಿತ್ತು. ಒಟ್ಟಾರೆ ಶೇ 57ರಷ್ಟು ಮತದಾನವಾಗಿತ್ತು. 3,755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುತ್ತಿದೆ.

  ಮುನ್ನಡೆಯಲ್ಲಿರುವ ಪ್ರಮುಖರು: ತೇಜಸ್ವಿ ಯಾದವ್ (ಆರ್​ಜೆಡಿ), ನಿತೀಶ್ ಕುಮಾರ್ (ಜೆಡಿಯು), ಶ್ರೇಯಸಿ ಸಿಂಗ್(ಬಿಜೆಪಿ), ಅನಂತ್ ಸಿಂಗ್(ಆರ್​ಜೆಡಿ), ಎನ್.ಕೆ. ಯಾದವ್ (ಬಿಜೆಪಿ),

  ಹಿನ್ನಡೆಯಲ್ಲಿರುವ ಪ್ರಮುಖರು: ತೇಜ್ ಪ್ರತಾಪ್ ಯಾದವ್ (ಆರ್​ಜೆಡಿ), ಪಪ್ಪು ಯಾದವ್, ಲವ್ ಸಿನ್ಹಾ(ಕಾಂಗ್ರೆಸ್), ಚಂದ್ರಿಕಾ ರಾಯ್ (ಜೆಡಿಯು), ಪ್ರವೀಣ್ ಸಿಂಗ್ (ಕಾಂಗ್ರೆಸ್), ಸಂತೋಷ್ ಕುಮಾರ್, ಲಲನ್ ಕುಮಾರ್(ಕಾಂಗ್ರೆಸ್), ಸುಭಾಷಿಣಿ ಯಾದವ್, ಮಸ್ಕೂರ್ ಉಸ್ಮಾನಿ (ಕಾಂಗ್ರೆಸ್).

  ಬಿಹಾರ ವಿಧಾನಸಭೆ ಚುನಾವಣೆ ವಿವರ:
  ಒಟ್ಟು ಸ್ಥಾನಗಳು: 243
  ಒಟ್ಟು ಅಭ್ಯರ್ಥಿಗಳು: 3,755
  ಪ್ರಮುಖ ಸ್ಪರ್ಧೆ: ಎನ್​​ಡಿಎ ವರ್ಸಸ್ ಮಹಾಘಟಬಂಧನ ಮೈತ್ರಿಕೂಟ
  ಈಗ ಆಡಳಿತದಲ್ಲಿರುವುದು: ಎನ್​ಡಿಎ ಮೈತ್ರಿಕೂಟ

  ಎನ್​ಡಿಎ ಮೈತ್ರಿಕೂಟದಲ್ಲಿರುವ ಪಕ್ಷಗಳು ಮತ್ತು ಸ್ಪರ್ಧಿಸಿರುವ ಕ್ಷೇತ್ರಗಳು:
  1) ಜೆಡಿಯು – 115 ಕ್ಷೇತ್ರಗಳಲ್ಲಿ ಸ್ಪರ್ಧೆ
  2) ಬಿಜೆಪಿ – 110
  3) ವಿಕಾಶೀಲ್ ಇನ್ಸಾನ್ ಪಾರ್ಟಿ – 11
  4) ಹಿಂದೂಸ್ತಾನಿ ಅವಾಮ್ ಮೋರ್ಚಾ – 7

  ಮಹಾಘಟಬಂಧನದಲ್ಲಿರುವ ಪಕ್ಷಗಳು ಮತ್ತು ಸ್ಪರ್ಧಿಸಿರುವ ಕ್ಷೇತ್ರಗಳು:
  1) ಆರ್​ಜೆಡಿ – 144 ಕ್ಷೇತ್ರಗಳಲ್ಲಿ ಸ್ಪರ್ಧೆ
  2) ಕಾಂಗ್ರೆಸ್ – 70
  3) ಸಿಪಿಐ(ಎಂಎಲ್) – 19
  4) ಸಿಪಿಐ – 6
  5) ಸಿಪಿಐಎಂ – 6

  ಚುನಾವಣಾ ಫಲಿತಾಂಶದ ಬಗ್ಗೆ ಇಂಗ್ಲಿಷ್​ ಭಾಷೆಯಲ್ಲಿ ಓದಲು ಇಲ್ಲಿ ಕ್ಲಿಕ್​ ಮಾಡಿ

  ಇದೇ ಬಿಹಾರದಲ್ಲಿ ಕಳೆದ ಬಾರಿ, ಅಂದರೆ 2015ರ ವಿಧಾನಸಭಾ ಚುನಾವಣೆ ವಿಷಯದಲ್ಲಿ ಹೇಳಲಾಗಿದ್ದ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ಸುಳ್ಳಾಗಿದ್ದವು.‌ ಅಷ್ಟೇ ಅಲ್ಲ, ಹಲವು ಬಾರಿ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾದ ಉದಾಹರಣೆಗಳಿವೆ. ಹಾಗಾಗಿಯೇ ಈ ಬಾರಿಯ ಬಿಹಾರ ಚುನಾವಣೆಯ ಎಕ್ಸಿಟ್ ಪೋಲ್ ಹೇಳಿರುವಂಥದೇ ಫಲಿತಾಂಶ ಬರುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವಂಥದೇ ಫಲಿತಾಂಶ ಬಂದರೆ ಆರ್ ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನಕ್ಕೆ ಭಾರಿ ಬಲ ಬಂದಂತಾಗುತ್ತದೆ. ಬಿಹಾರದಲ್ಲಿ ಅಧಿಕಾರ ಹಿಡಿದ ಕಾರಣಕ್ಕೆ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲೂ ಬಿಜೆಪಿ ಮೇಲೆ ದಾಳಿ ಮಾಡಲು ಬ್ರಹ್ಮಾಸ್ತ್ರ ಸಿಕ್ಕಂತಾಗುತ್ತದೆ.

  ಮಹಾಮೈತ್ರಿ ಗೆದ್ದರೆ ಎಲ್ಲರಿಗಿಂತ ಹೆಚ್ಚು ಅದೃಷ್ಟ ಖುಲಾಯಿಸುವುದು ತೇಜಸ್ವಿ ಯಾದವ್ ಅವರಿಗೆ. ಈಗಾಗಲೇ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿರುವುದರಿಂದ ತೇಜಸ್ವಿ ಯಾದವ್ ಅನಾಯಾಸವಾಗಿ ಮುಖ್ಯಮಂತ್ರಿ ಆಗಲಿದ್ದಾರೆ. ಜೊತೆಗೆ ಅಪ್ಪ ಲಾಲೂಪ್ರಸಾದ್ ಯಾದವ್ ಬಳಿಕ ಆರ್​ಜೆಡಿ ಪಕ್ಷದಲ್ಲಿ ತೇಜಸ್ವಿ ಯಾದವ್ ಪ್ರಶ್ನಾತೀತ ನಾಯಕ ಆಗಿ ಹೊರಹೊಮ್ಮಲಿದ್ದಾರೆ.

  ಒಂದು ವೇಳೆ, ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗಿ ಎನ್​ಡಿಎ ಮೈತ್ರಿ ಕೂಟ ಗೆದ್ದರೆ ಬಿಜೆಪಿಗೆ ಭಾರೀ ಲಾಭವಾಗಲಿದೆ. ಅದು ಪಶ್ಚಿಮ ಬಂಗಾಳದ ಚುನಾವಣೆ ಅಥವಾ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಮಾತ್ರವಲ್ಲ. ಬಿಹಾರದಲ್ಲೂ ಸದ್ಯಕ್ಕೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ಕ್ರಮೇಣ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ ದಕ್ಕಿಸಿಕೊಳ್ಳುವ ಪ್ರಯತ್ನಗಳಾಗಲಿವೆ. ನಿತೀಶ್ ಕುಮಾರ್ ಅವರ ಜೆಡಿಯುಗಿಂತ ಬಿಜೆಪಿ ಹೆಚ್ಚು ಸೀಟು ಗೆದ್ದರೆ ಈ ಲೆಕ್ಕಾಚಾರವನ್ನು ಜಾರಿಗೊಳಿಸುವುದು ಸುಲಭವಾಗಲಿದೆ‌.

  ದೇಶಾದ್ಯಂತ ವಿಧಾನಸಭಾ ಉಪಚುನಾವಣೆಗಳ ಫಲಿತಾಂಶ: ಒಟ್ಟು 59
  ಬಿಜೆಪಿ 41, ಕಾಂಗ್ರೆಸ್ 11, ಇತರೆ 7
  ಮಧ್ಯಪ್ರದೇಶ: 28 (ಬಿಜೆಪಿ 20, ಕಾಂಗ್ರೆಸ್ 7, ಇತರೆ 1)
  ಗುಜರಾತ್: 8 (ಬಿಜೆಪಿ 8, ಕಾಂಗ್ರೆಸ್ 0)
  ಉತ್ತರ ಪ್ರದೇಶ: 7 (ಬಿಜೆಪಿ 6, ಇತರೆ 1)
  ಮಣಿಪುರ: 5 (ಬಿಜೆಪಿ 3, ಕಾಂಗ್ರೆಸ್ 1, ಇತರೆ 1)
  ಕರ್ನಾಟಕ: 2 (ಬಿಜೆಪಿ 2)
  ಒಡಿಶಾ: 2 (ಬಿಜೆಡಿ 1, ಇತರೆ 1)
  ಜಾರ್ಖಂಡ್: 2 (ಬಿಜೆಪಿ 1, ಕಾಂಗ್ರೆಸ್ 1)
  ನಾಗಾಲ್ಯಾಂಡ್: 2 (ಇತರೆ 2)
  ಛತ್ತೀಸ್​ಗಡ: 1 (ಕಾಂಗ್ರೆಸ್)
  ಹರಿಯಾಣ: 1 (ಕಾಂಗ್ರೆಸ್
  ತೆಲಂಗಾಣ: 1 (ಬಿಜೆಪಿ)
  Published by:Sharath Sharma Kalagaru
  First published: