ಪಾಟ್ನಾ (ನವೆಂಬರ್ 10); ಬಿಹಾರದ ವಿಧಾನ ಸಭೆ ಚುನಾವಣೆ ಫಲಿತಾಂಶವನ್ನು ಇಡೀ ದೇಶ ಎದುರುನೋಡುತ್ತಿದೆ. ಈ ಫಲಿತಾಂಶವನ್ನು ಭವಿಷ್ಯದ ಭಾರತೀಯ ರಾಜಕಾರಣದ ದಿಕ್ಸೂಚಿ ಎಂದು ಬಣ್ಣಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ನವೆಂಬರ್ 07 ರಂದು ಕೊನೆಯ ಹಂತದ ಮತದಾನದ ನಂತರ ಎಕ್ಸಿಟ್ ಪೋಲ್ ಸಮೀಕ್ಷೆ ಹೊರಬಿದ್ದಿದ್ದವು. ಎಲ್ಲಾ ಸಮೀಕ್ಷೆಗಳೂ ಸಹ ಈ ಬಾರಿ ಬಿಹಾರದಲ್ಲಿ ಬದಲಾವಣೆ ಗಾಳಿ ಬೀಸಿದೆ. ಆರ್ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನ ಬಹುಮತ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದೇ ಅಂದಾಜಿಸಿದ್ದವು. ಆದರೆ, ಮತ ಎಣಿಕೆ ಆರಂಭವಾಗಿ ಎರಡು ಗಂಟೆ ಕಳೆದರೂ ಸಹ ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎ ನಿರಂತರವಾಗಿ ಮುನ್ನಡೆ ಸಾಧಿಸಿದ್ದು, ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಸುಳ್ಳಾಗಲಿವೆಯೇ? ಎಂಬ ಅನುಮಾನ ಇದೀಗ ಮನೆ ಮಾಡಿದೆ.
ಎನ್ಡಿಎ ಮೈತ್ರಿಕೂಟದಲ್ಲಿ ನಿತೀಶ್ ಕುಮಾರ್ ಅವರದ್ದು ದೊಡ್ಡ ಹೆಸರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ನಿತೀಶ್ ಕುಮಾರ್ ಕೇಂದ್ರ ರೈಲ್ವೆ ಸಚಿವರಾಗಿಯೂ ಕರ್ತವ್ಯ ನಿಭಾಯಿಸಿದ್ದರು. 2005ರಲ್ಲಿ ಬಿಹಾರದ ಸಿಎಂ ಆದನಂತರ ಅವರು ಹಲವು ಗಮನಾರ್ಹ ಕೆಲಸಗಳ ಮೂಲಕ ಗಮನ ಸೆಳೆದದ್ದು ಸುಳ್ಳಲ್ಲ.
ಈ ನಡುವೆ 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಎನ್ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆ ನಿತೀಶ್ ಕನಲಿ ಕೆಂಡವಾಗಿದ್ದರು. ಗೋದ್ರಾ ಹತ್ಯಾಕಾಂಡದ ರುವಾರಿ ಪ್ರಧಾನಿ ಹುದ್ದೆಗೆ ಏರುವುದು ಸರಿಯಲ್ಲ ಎಂದು ಹೇಳುವ ಮೂಲಕ ತನ್ನನ್ನು ಜಾತ್ಯಾತೀತವಾಗಿ ಎಂದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮುಂದಾಗಿದ್ದರು. ನಂತರ ಮೈತ್ರಿಯಿಂದಲೇ ಹೊರನಡೆದು ತನ್ನ ಸಾಂಪ್ರದಾಯಿಕ ಎದುರಾಳಿ ಆರ್ಜೆಡಿ ಜೊತೆಗೆ ಮೈತ್ರಿ ಸಾಧಿಸಿ ಮತ್ತೆ ಅಧಿಕಾರ ಅನುಭವಿಸಿದ್ದರು. ನಿತೀಶ್ ಅವರ ಈ ನಡೆ ವ್ಯಾಪಕ ಟೀಕೆಗೂ ಗುರಿಯಾಗಿತ್ತು.
ಇದನ್ನೂ ಓದಿ : Bihar Election Results 2020 - ಬಿಹಾರದಲ್ಲಿ ಅಚ್ಚರಿ ಮೂಡಿಸುತ್ತಾ ಸಿಪಿಐ-ಎಂಎಲ್ ಪಕ್ಷ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ