ಪಾಟ್ನಾ: ಹಿಂದೂ ರಾಷ್ಟ್ರದ (Hindu Nation) ಪರಿಕಲ್ಪನೆಗೆ ಜೆಡಿಯು (JDU) ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ (Bihar CM) ನಿತೀಶ್ ಕುಮಾರ್ (Nitish Kumar) ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬಿಹಾರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ನಿತೀಶ್ ಕುಮಾರ್, ಸಂಘ ಪರಿವಾರದ ಹಿಂದೂ ರಾಷ್ಟ್ರ ಪರಿಕಲ್ಪನೆಯು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆದರ್ಶ ಹಾಗೂ ಆಶಯಕ್ಕೆ ವಿರುದ್ಧವಾದದ್ದು ಎಂದು ಹೇಳಿದರು.
ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿ ಅವರ ಆಶಯಕ್ಕೆ ವಿರುದ್ಧವಾದ ಯಾವುದೇ ಮಾತನ್ನೂ ನಾವು ಕೇಳಬಾರದು ಎಂದಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಎಲ್ಲ ಧರ್ಮಗಳ ಜನರೂ ಒಗ್ಗಟ್ಟಿನಿಂದ ಬಾಳುವ ದೇಶ ನಮ್ಮದು. ಮಹಾತ್ಮ ಗಾಂಧಿ ಅವರು ಈ ಏಕತೆಗಾಗಿಯೇ ಹೋರಾಡಿದರು. ಆದರೆ ಇದೇ ಕಾರಣಕ್ಕೆ ಅವರ ಹತ್ಯೆಯೂ ಆಯ್ತು ಎಂದು ವಿಷಾದ ವ್ಯಕ್ತಪಡಿಸಿದರು. ಅಲ್ಲದೇ ನಾವು ಈಗ ಮಹಾತ್ಮ ಗಾಂಧೀಜಿ ಅವರ ಆಶಯದಂತೆಯೇ ಸರ್ಕಾರವನ್ನು ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: Nitish Kumar: ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಸಾಯುವುದೇ ಮೇಲು: ಬಿಹಾರ ಸಿಎಂ
'ಬಾಪು ಆಶಯಗಳನ್ನು ತಿರುಚಲು ಯತ್ನಿಸಿದರೆ ಅದು ವಿಕೃತಿ'
ಮಹಾತ್ಮ ಗಾಂಧೀಜಿ ಅವರ ಆಶಯಗಳನ್ನು ತಿರುಚಲು ಯತ್ನಿಸಿದರೆ ಅದು ವಿಕೃತಿಯಾಗುತ್ತದೆ ಎಂದು ಹೇಳಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಕಳೆದ ವರ್ಷವಷ್ಟೇ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದಾರೆ. ಅಲ್ಲದೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ನಿಲುವನ್ನೂ ಜೆಡಿಯು ನಾಯಕ ವಿರೋಧಿಸಿದ್ದಾರೆ. 1990 ರಿಂದಲೂ ಬಿಜೆಪಿ ಜೊತೆ ಗುರುತಿಸಿ ಕೊಂಡಿದ್ದ ನಿತೀಶ್ ಕುಮಾರ್, ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಕಳೆದ ವರ್ಷವಷ್ಟೇ ಬಿಜೆಪಿ ಜೊತೆಗಿನ ಸಖ್ಯ ಕಡಿದುಕೊಂಡಿದ್ದ ನಿತೀಶ್ ಕುಮಾರ್, ಮಹಾಘಟಬಂಧನ್ ಜೊತೆ ಸೇರಿ ಸರ್ಕಾರ ರಚಿಸಿದ್ದರು.
‘ಬಿಜೆಪಿ ಜೊತೆ ಮೈತ್ರಿ ಮಾಡುವ ಬದಲು ಸಾಯುವುದೇ ಮೇಲು’
ಕಳೆದ ವಾರ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್, ಬಿಜೆಪಿ ಜೊತೆ ಮೈತ್ರಿ ಮಾಡುವ ಬದಲು ಸಾಯುವುದೇ ಮೇಲು ಎಂದು ಹೇಳಿದ್ದರು. ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಉದ್ದೇಶ ಪೂರ್ವಕವಾಗಿ ಆಧಾರ ರಹಿತ ಆರೋಪಗಳನ್ನು ಮಾಡಿ ನಮ್ಮನ್ನು ಸಿಕ್ಕಿಸಿಹಾಕಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ ಎಂದು ಆರೋಪಿಸಿದ್ದ ಅವರು ಇನ್ನು ಮುಂದೆ ಬಿಜೆಪಿ ಜೊತೆ ಮೈತ್ರಿಯ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಇದನ್ನೂ ಓದಿ: Bihar CM: ಟ್ವೀಟ್ ಮಾಡೋದು ನಿನ್ನ ಕೆಲಸವಲ್ಲ, ಐಪಿಎಸ್ ಅಧಿಕಾರಿ ವಿರುದ್ಧ ಕಿಡಿಕಾರಿದ ಬಿಹಾರ ಸಿಎಂ
ಜನಪ್ರಿಯವಲ್ಲದ ಮುಖ್ಯಮಂತ್ರಿ ಜೊತೆ ಮತ್ತೆ ಮೈತ್ರಿ ಸಾಧ್ಯವಿಲ್ಲ. ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿ ಅವರ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದ್ದ ಬಿಜೆಪಿ ನಾಯಕರಿಗೆ ಖಡಕ್ ತಿರುಗೇಟು ನೀಡಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಸಾಯುವುದೇ ಮೇಲು. ಬಿಜೆಪಿ ಪಕ್ಷದ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಡಿಸಿಎಂ ತೇಜಸ್ವಿ ಯಾದವ್ ಮತ್ತು ಲಾಲು ಪ್ರಸಾದ್ ಯಾದವ್ ವಿರುದ್ಧ ಪ್ರಕರಣಗಳು ದಾಖಲಿಸಿದ್ದರಿಂದ ನಾವು ಮತ್ತೆ ಬಿಜೆಪಿ ಜೊತೆ ಹೋಗುತ್ತೇವೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದರು.
ನಮ್ಮ ಪಕ್ಷದ ಜೊತೆ ಮೈತ್ರಿ ಸರ್ಕಾರ ರಚನೆ ಮಾಡಿದ್ದಕ್ಕೆ ತೇಜಸ್ವಿ ಯಾದವ್ ಮತ್ತು ಅವರ ತಂದೆ ಲಾಲು ಪ್ರಸಾದ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲು ಬಿಜೆಪಿಯವರು ಬಹಳ ಪ್ರಯತ್ನ ಪಟ್ಟರು. ಈಗ ಪುನಃ ಅವರ ಹಿಂದೆ ಬಿದ್ದಿದ್ದಾರೆ. ಇಂತಹ ಕೆಲಸಗಳನ್ನು ಬಿಜೆಪಿಯವರು ಮಾಡುತ್ತಲೇ ಇರುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ನಿತಿಶ್ ಕುಮಾರ್ ಕಿಡಿಕಾರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ