• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Bihar CM: ಟ್ವೀಟ್‌ ಮಾಡೋದು ನಿನ್ನ ಕೆಲಸವಲ್ಲ, ಐಪಿಎಸ್ ಅಧಿಕಾರಿ ವಿರುದ್ಧ ಕಿಡಿಕಾರಿದ ಬಿಹಾರ ಸಿಎಂ

Bihar CM: ಟ್ವೀಟ್‌ ಮಾಡೋದು ನಿನ್ನ ಕೆಲಸವಲ್ಲ, ಐಪಿಎಸ್ ಅಧಿಕಾರಿ ವಿರುದ್ಧ ಕಿಡಿಕಾರಿದ ಬಿಹಾರ ಸಿಎಂ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಬಿಹಾರದ ಹಿರಿಯ ಸರ್ಕಾರಿ ಅಧಿಕಾರಿಗಳ ವಿರುದ್ಧ ವಿಕಾಸ್‌ ವೈಭವ್ ಟ್ವೀಟ್‌ ಮಾಡಿದ್ದರು. ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಬೆನ್ನಲ್ಲೇ ವಿಕಾಸ್‌ ವೈಭವ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

  • Share this:

ಪಾಟ್ನಾ: ಬಿಹಾರದ ಐಪಿಎಸ್‌ ಅಧಿಕಾರಿಯೊಬ್ಬರು (IPS Officer) ತಮ್ಮ ಹಿರಿಯ ಅಧಿಕಾರಿಗಳ ವಿರುದ್ಧ ಟ್ವೀಟ್‌ ಮಾಡಿರುವುದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅಧಿಕಾರಿಯ ವಿರುದ್ಧ ಕಿಡಿಕಾರಿರುವ ನಿತೀಶ್ ಕುಮಾರ್, ‘ಯಾರಾದರೂ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರೆ ಅವರ ಕೆಲಸ ಟ್ವೀಟ್‌ ಮಾಡುವುದಲ್ಲ. ಇದು ಅತ್ಯಂತ ಕೆಟ್ಟ ಬೆಳವಣಿಗೆಯಾಗಿದೆ. ಏನಾದರೂ ಸಮಸ್ಯೆ ಇದ್ದರೆ, ಅವರು ತಮ್ಮ ಇಲಾಖೆ ಅಥವಾ ಹಿರಿಯರಿಗೆ ತಿಳಿಸಬೇಕು. ವೈಯಕ್ತಿಕವಾಗಿ ತಿಳಿಸಿ ಬಗೆಹರಿಸಿಕೊಳ್ಳಬೇಕು, ಸಾರ್ವಜನಿಕವಾಗಿ ಘೋಷಿಸಬಾರದು. ಕಾನೂನು ಇರುವುದು ಇದೇ ರೀತಿ’ ಎಂದು ಹೇಳಿದ್ದಾರೆ.


ಬಿಹಾರದ ಐಪಿಎಸ್‌ ಅಧಿಕಾರಿ ವಿಕಾಸ್‌ ವೈಭವ್‌ ಅವರು ತಮ್ಮ ಹಿರಿಯ ಅಧಿಕಾರಿಗಳ ವಿರುದ್ಧ ಟ್ವೀಟ್‌ ಮಾಡಿರುವುದು ಬಿಹಾರದಲ್ಲಿ ಸಂಚಲನ ಸೃಷ್ಟಿಸಿದೆ. ಬಿಹಾರದ ಅಗ್ನಿಶಾಮಕ ಇಲಾಖೆಯ ಐಜಿ ಆಗಿರುವ ವಿಕಾಸ್‌ ವೈಭವ್‌ ಮಾಡಿರುವ ಟ್ವೀಟ್‌ಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಗರಂ ಆಗಿದ್ದಾರೆ. ಜೊತೆಗೆ ಈ ಪ್ರಕರಣದ ಕುರಿತು ತನಿಖೆ ನಡೆಸಿ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ವರದಿ ನೀಡಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಇದನ್ನೂ ಓದಿ: IndiGo Airlines: ವಿಮಾನದಲ್ಲೂ ಯಡವಟ್ಟು, ಬಿಹಾರಕ್ಕೆ ಹೋಗಬೇಕಿದ್ದ ಪ್ರಯಾಣಿಕನನ್ನು ರಾಜಸ್ಥಾನಕ್ಕೆ ಕರೆದೊಯ್ದ ಇಂಡಿಗೋ!


ಬಿಹಾರದ ಹಿರಿಯ ಸರ್ಕಾರಿ ಅಧಿಕಾರಿಗಳ ವಿರುದ್ಧ ವಿಕಾಸ್‌ ವೈಭವ್ ಟ್ವೀಟ್‌ ಮಾಡಿದ್ದರು. ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಬೆನ್ನಲ್ಲೇ ವಿಕಾಸ್‌ ವೈಭವ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ಟ್ವೀಟ್‌ನಲ್ಲಿ ಅಗ್ನಿಶಾಮಕ ದಳದ ಹಿರಿಯ ಹಾಗೂ ಡಿಜಿ ಶ್ರೇಣಿಯ ಶೋಭಾ ಅಹೋತ್ಕರ್ ಅವರನ್ನು ಗುರಿಯಾಗಿಸಿಕೊಂಡು ವಿಕಾಸ್‌ ವೈಭವ್‌ ಅವರು, ನಾನು ದಿನನಿತ್ಯ ಡಿಜಿ ಮೇಡಮ್‌ ಅವರಿಂದ ನಿಂದನೆಗೆ ಒಳಗಾಗುತ್ತಿದ್ದೇನೆ ಎಂದು ನೋವಿನಿಂದ ಬರೆದುಕೊಂಡಿದ್ದಾರೆ.


ವಿಪಕ್ಷಗಳಿಗೆ ಆಹಾರ


2022ರ ಅಕ್ಟೋಬರ್‌ 18ರಿಂದ ನನ್ನನ್ನು ಹೋಮ್ ಗಾರ್ಡ್ಸ್ ಮತ್ತು ಅಗ್ನಿಶಾಮಕ ಸೇವೆಗಳಿಗೆ ಐಜಿಯನ್ನಾಗಿ ನೇಮಕ ಮಾಡಲಾಗಿದೆ. ಅಂದಿನಿಂದ ನಾನು ಎಲ್ಲಾ ಹೊಸ ಜವಾಬ್ದಾರಿಗಳನ್ನು ನಿರ್ವಹಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಆದರೆ, ಪ್ರತಿ ದಿನ ನನ್ನನ್ನು ಡಿಜಿ ಮೇಡಂ ಅನಗತ್ಯವಾಗಿ ನಿಂದಿಸುತ್ತಿದ್ದಾರೆ. ಅವರು ನಿಂದನೆ ಮಾಡಿರುವುದಕ್ಕೆ ನನ್ನ ಬಳಿ ದಾಖಲೆ ಕೂಡ ಇದೆ. ಎಂದು ಐಪಿಎಸ್‌ ಅಧಿಕಾರಿ ವಿಕಾಸ್‌ ವೈಭವ್‌ ಟ್ವೀಟ್‌ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿಪಕ್ಷಗಳಿಗೆ ಸಿಕ್ಕ ಆಹಾರವಾಗಿ ಪರಿಣಮಿಸಿತ್ತು.


ಶೋಕಾಸ್ ನೋಟಿಸ್ ಜಾರಿ


ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿ ವಿಕಾಸ್‌ ವೈಭವ್ ಅವರಿಗೆ ನೀಡಿರುವ ಶೋಕಾಸ್ ನೋಟಿಸ್ ಹತ್ತಾರು ಕಾನೂನಿನ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಟ್ವೀಟ್‌ ಮಾಡುವ ಮೂಲಕ ಕಚೇರಿ ವಿಷಯವನ್ನು ಸಾರ್ವಜನಿಕ ವೇದಿಕೆಗೆ ತರಲಾಗಿದೆ. ಕಚೇರಿ ಸಭೆಗಳಲ್ಲಿ ನಡೆದ ಚರ್ಚೆಗಳನ್ನು ನೀವು ಇಲ್ಲಿ ದಾಖಲಿಸಿರುವುದು ಸ್ಪಷ್ಟವಾಗಿದ್ದು, ನಿಮ್ಮ ತಪ್ಪು ಉದ್ದೇಶವನ್ನು ತೋರಿಸುತ್ತದೆ. ಇದು ಅಧಿಕೃತ ರಹಸ್ಯ ಕಾಯಿದೆಯ ಸಂಬಂಧಿತ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ. ಜೊತೆಗೆ, ವಿಕಾಸ್ ವೈಭವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ತಮ್ಮ ಹಿರಿಯ ಅಧಿಕಾರಿಯ ಇಮೇಜ್‌ಗೆ ಕಳಂಕ ತರಲು ಪ್ರಯತ್ನಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Railway Track Stolen: ಬಿಹಾರದಲ್ಲಿ ಬರೋಬ್ಬರಿ 2 ಕಿಮೀನಷ್ಟು ರೈಲ್ವೆ ಹಳಿಯನ್ನೇ ಕದ್ದ ಖದೀಮರು!


ವಿಕಾಸ್‌ ವೈಭವ್‌ ಅವರ ನಡವಳಿಕೆ ಹಿರಿಯ ಪೊಲೀಸ್ ಅಧಿಕಾರಿಯ ನಡವಳಿಕೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಕಾನೂನಿಗೆ ವಿರುದ್ಧವಾಗಿ ಅವರು ವರ್ತಿಸುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಅಖಿಲ ಭಾರತ ಸೇವಾ ನಡವಳಿಕೆ ನಿಯಮಗಳು, 1968ರ ನಿಯಮ 3 ರಂತೆ ಗೌಪ್ಯತೆಯ ಉಲ್ಲಂಘನೆಯ ಆರೋಪಗಳ ಮೇಲೆ ಅವರಿಗೆ ಕಾರಣ ಕೇಳಿ ಶೋಕಾಸ್‌ ನೋಟಿಸ್‌ ನೀಡಲಾಗಿದ್ದು, ಅಖಿಲ ಭಾರತೀಯ ಸೇವೆಯ ಪ್ರತಿಯೊಬ್ಬ ಸದಸ್ಯರು ಸೌಜನ್ಯಯುತವಾಗಿ ವರ್ತಿಸಬೇಕು ಎಂದು ನಿಬಂಧನೆಗಳು ಹೇಳುತ್ತವೆ. ಕರ್ತವ್ಯದಲ್ಲಿರುವ ಅಧಿಕಾರಿಗಳು ತಮ್ಮ ಅಧಿಕೃತ ಕರ್ತವ್ಯಗಳ ನಿರ್ವಹಣೆಯಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ.


ಇದೆಲ್ಲದರ ಮಧ್ಯೆ, ಹಿರಿಯ ಐಪಿಎಸ್ ಅಧಿಕಾರಿ ವಿಕಾಸಗ ವೈಭವ್ ಅವರು ಮತ್ತೊಂದು ಟ್ವೀಟ್ ಮಾಡಿದ್ದು, ‘ನಾನು ಬಂಧಗಳಿಂದ ಮುಕ್ತವಾಗಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ಇಷ್ಟೊಂದು ರಾಜಕೀಯ ಬೆಳವಣಿಗೆಗಳ ಮಧ್ಯೆ ಅವರು ಈ ರೀತಿ ಟ್ವೀಟ್ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Published by:Avinash K
First published: