ಪಾಟ್ನಾ: ಬಿಜೆಪಿ ಜೊತೆ ಮೈತ್ರಿ (Alliance with BJP) ಮಾಡುವ ಬದಲು ಸಾಯುವುದೇ ಮೇಲು ಎಂದು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ (Nitish Kumar) ಹೇಳಿದ್ದಾರೆ. ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejaswi Yadav) ವಿರುದ್ಧ ಉದ್ದೇಶ ಪೂರ್ವಕವಾಗಿ ಆಧಾರ ರಹಿತ ಆರೋಪಗಳನ್ನು ಮಾಡಿ ನಮ್ಮನ್ನು ಸಿಕ್ಕಿಸಿಹಾಕಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ ಎಂದು ಆರೋಪಿಸಿರುವ ನಿತಿಶ್ ಕುಮಾರ್, ಇನ್ನು ಮುಂದೆ ಬಿಜೆಪಿ ಜೊತೆ ಮೈತ್ರಿಯ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ತೇಜಸ್ವಿ ಯಾದವ್ ಅವರ ತಂದೆ ಲಾಲೂ ಪ್ರಸಾದ್ ಯಾದವ್ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳು ದಾಖಲಾದ ಬಳಿಕ ಬಿಹಾರ ಸಿಎಂ ನಿತಿಶ್ ಕುಮಾರ್ ಮತ್ತೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಬಿಹಾರದಲ್ಲಿ ಹರಿದಾಡಿತ್ತು. ಈ ಊಹಾಪೋಹಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕರು, ಜನಪ್ರಿಯವಲ್ಲದ ಮುಖ್ಯಮಂತ್ರಿ ಜೊತೆ ಮತ್ತೆ ಮೈತ್ರಿ ಸಾಧ್ಯವಿಲ್ಲ. ನಿತಿಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: Tejashwi Yadav: ಬಿಹಾರ ಡಿಸಿಎಂ ತೇಜಸ್ವಿ ಯಾದವ್‌ಗೆ ಬಿಗ್ ಶಾಕ್, ಜಾಮೀನು ರದ್ದುಗೊಳಿಸುವಂತೆ ಸಿಬಿಐ ಆಗ್ರಹ!
ಊಹಾಪೋಹಗಳಿಗೆ ತೆರೆ ಎಳೆದ ಸಿಎಂ
ಬಿಜೆಪಿಯವರ ಮೈತ್ರಿ ತಿರಸ್ಕಾರ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಖಡಕ್ ತಿರುಗೇಟು ನೀಡಿರುವ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಸಾಯುವುದೇ ಮೇಲು ಎಂದು ಹೇಳಿದ್ದಾರೆ. ಆ ಮೂಲಕ ಬಿಹಾರ ರಾಜಕೀಯ ವಲಯದಲ್ಲಿ ಎದ್ದಿದ್ದ ಬಹುದೊಡ್ಡ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಮುಂದುವರಿದು ಮಾತನಾಡಿರುವ ಸಿಎಂ ನಿತಿಶ್ ಕುಮಾರ್, ಬಿಜೆಪಿ ಪಕ್ಷದ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಡಿಸಿಎಂ ತೇಜಸ್ವಿ ಯಾದವ್ ಮತ್ತು ಲಾಲು ಪ್ರಸಾದ್ ಯಾದವ್ ವಿರುದ್ಧ ಪ್ರಕರಣಗಳು ದಾಖಲಿಸಿದ್ದರಿಂದ ನಾವು ಮತ್ತೆ ಬಿಜೆಪಿ ಜೊತೆ ಹೋಗುತ್ತೇವೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:Bihar: ಜೆಡಿಯು ಮುಕ್ತವಾದ ಮಣಿಪುರ, ಶೀಘ್ರವೇ ಬಿಹಾರದಲ್ಲೂ ಮಹಾಮೈತ್ರಿ ಮುರಿಯುತ್ತೇವೆ: ಸುಶೀಲ್ ಮೋದಿ
'ಈ ಜನರು ಇಂತಹ ಕೆಲಸ ಮಾಡುತ್ತಲೇ ಇರುತ್ತಾರೆ'
ನಮ್ಮ ಪಕ್ಷದ ಜೊತೆ ಮೈತ್ರಿ ಸರ್ಕಾರ ರಚನೆ ಮಾಡಿದ್ದಕ್ಕೆ ತೇಜಸ್ವಿ ಯಾದವ್ ಮತ್ತು ಅವರ ತಂದೆ ಲಾಲು ಪ್ರಸಾದ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲು ಬಿಜೆಪಿಯವರು ಬಹಳ ಪ್ರಯತ್ನ ಪಟ್ಟರು. ಈಗ ಪುನಃ ಅವರ ಹಿಂದೆ ಬಿದ್ದಿದ್ದಾರೆ. ಇಂತಹ ಕೆಲಸಗಳನ್ನು ಬಿಜೆಪಿಯವರು ಮಾಡುತ್ತಲೇ ಇರುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ನಿತಿಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಹೇಳಿಕೆಗೆ ನಿತೇಶ್ ಕುಮಾರ್ ವ್ಯಂಗ್ಯ
ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ 36 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಯ ಕುರಿತು ವ್ಯಂಗ್ಯವಾಡಿರುವ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್, ಯಾವಾಗಲೂ ಹಿಂದುತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ಬಿಜೆಪಿಯವರು ನಮ್ಮ ಜೊತೆ ಮೈತ್ರಿಯಲ್ಲಿ ಇದ್ದಾಗ ಮುಸ್ಲಿಂ ಸೇರಿ ಎಲ್ಲ ಸಮುದಾಯದ ಮತಗಳನ್ನೂ ಪಡೆಯುತ್ತಿದ್ದರು. ಕಳೆದ ಬಾರಿ ಬಿಹಾರದ ದೀರ್ಘಾವಧಿ ಮುಖ್ಯಮಂತ್ರಿ (ನಿತಿಶ್ ಕುಮಾರ್) ಜೊತೆ ಮೈತ್ರಿ ಮಾಡಿದ್ದರಿಂದಲೇ ಬಿಜೆಪಿಯು ತನ್ನ ಅತಿದೊಡ್ಡ ಚುನಾವಣಾ ಯಶಸ್ಸನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ