Bihar Election Results - ಬಿಹಾರ ಅತಂತ್ರ ವಿಧಾನಸಭೆ ಆದಲ್ಲಿ ಚಿರಾಗ್ ಪಾಸ್ವಾನ್ ಕಿಂಗ್ ಮೇಕರ್?

ಚಿರಾಗ್ ಪಾಸ್ವಾನ್

ಚಿರಾಗ್ ಪಾಸ್ವಾನ್

ಬಿಹಾರ ವಿಧಾನಸಭೆ ಫಲಿತಾಂಶ ಎತ್ತ ಬೇಕಾದರೂ ವಾಲುವ ಸಾಧ್ಯತೆ ಇದ್ದು, ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಅಚ್ಚರಿ ಎನಿಸುವುದಿಲ್ಲ. ಅಂಥ ಸ್ಥಿತಿ ಬಂದಲ್ಲಿ ಚಿರಾಗ್ ಪಾಸ್ವಾನ್ ಅವರು ಕಿಂಗ್ ಮೇಕರ್​ಗಳ ಪೈಕಿ ಇರಲಿದ್ದಾರೆ.

  • Share this:

    ಪಾಟ್ನಾ(ನ. 10): ಬಿಹಾರದ 243 ಸ್ಥಾನಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಬೆಳಗ್ಗೆಯಿಂದ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಮಧ್ಯಾಹ್ನ 12:30ಕ್ಕೆ ಎಂಟು ಸುತ್ತುಗಳ ಮತ ಎಣಿಕೆ ಮುಗಿದ ಬಳಿಕ ಎನ್​ಡಿಎ ಮೈತ್ರಿಕೂಟ 127 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಆರ್​ಜೆಡಿ ನೇತೃತ್ವದ ಮಹಾಘಟಬಂಧನ ಮೈತ್ರಿಕೂಟ 103 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಬಹುಮತಕ್ಕೆ ಬೇಕಿರುವುದು 122 ಸ್ಥಾನ. ಇದೇ ಟ್ರೆಂಡ್ ಮುಂದುವರಿದಲ್ಲಿ ಜೆಡಿಯು ನೇತೃತ್ವದ ಎನ್​ಡಿಎ ಮೈತ್ರಿಕೂಟ ಬಹುಮತ ಪಡೆಯುವ ಸಾಧ್ಯತೆ ಇದೆ. ಆದರೆ, ಎಂಟು ಸುತ್ತುಗಳ ನಂತರ ಬಂದಿರುವ ಮಾಹಿತಿ ಗಮನಿಸಿದರೆ 75ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಅಂತರ 1 ಸಾವಿರ ಮತಗಳಿಗಿಂತ ಕಡಿಮೆ ಇದೆ. ಅದರಲ್ಲೂ 28 ಕ್ಷೇತ್ರಗಳಲ್ಲಿ ಅಂತರ 500ಕ್ಕಿಂತ ಕಡಿಮೆ ಇದೆ. ಇನ್ನೂ 20 ಸುತ್ತುಗಳು ಕೂಡ ಹೀಗೇ ಮುಂದುವರಿದಲ್ಲಿ ಫಲಿತಾಂಶ ಹೇಗೆ ಬೇಕಾದರೂ ವಾಲಬಹುದು. ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಯೂ ಹೆಚ್ಚಿದೆ.


    ಅತಂತ್ರ ವಿಧಾನಸಭೆ ನಿರ್ಮಾಣವಾದಲ್ಲಿ ಚಿರಾಗ್ ಪಾಸ್ವಾನ್ ಕಿಂಗ್ ಮೇಕರ್ ಆಗುವ ಸಾಧ್ಯತೆ ಇಲ್ಲದಿಲ್ಲ. ಅವರು ಕಿಂಗ್ ಮೇಕರ್ ಆಗಬೇಕೆಂದರೆ ಎಲ್​ಜೆಪಿ 4 ಸ್ಥಾನಗಳಲ್ಲಾದರೂ ಗೆಲ್ಲಬೇಕಾಗಿಬರಬಹುದು. ಪಾಸ್ವಾನ್ ಅಂತಿಮವಾಗಿ ಕಿಂಗ್ ಮೇಕರ್ ಆಗದಿದ್ದರೂ ಜೆಡಿಯು ಪಕ್ಷವನ್ನು ಸೋಲಿಸಿದ ಸಮಾಧಾನವಂತೂ ಪಡೆಯುತ್ತಾರೆ. ಬಿಹಾರ ಚುನಾವಣೆಯ ಉದ್ದಕ್ಕೂ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಕತ್ತಿ ಮಸೆಯುತ್ತಾ ಬಂದಿದ್ದ ಚಿರಾಗ್ ಪಾಸ್ವಾನ್ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಎಲ್​ಜೆಪಿ ಅಭ್ಯರ್ಥಿಗಳನ್ನ ನಿಲ್ಲಿಸಿದ್ದರು. ಇದು ಜೆಡಿಯು ವೋಟುಗಳಿಗೆ ಕತ್ತರಿ ಹಾಕಿದಂತೆ ತೋರುತ್ತಿದೆ. ಜೆಡಿಯು ಕಳೆದ ಬಾರಿಗಿಂತ 20ಕ್ಕೂ ಹೆಚ್ಚು ಕ್ಷೇತ್ರಗಳನ್ನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಾಗೇನಾದರೂ ಆದರೆ ಅದರ ಡ್ಯಾಮೇಜ್​ಗೆ ಪಾಸ್ವಾನ್ ಅವರೇ ಹೆಚ್ಚು ಕಾರಣರಾಗುತ್ತಾರೆ.


    ಇದನ್ನೂ ಓದಿ: Assembly Bypolls Result - ದೇಶಾದ್ಯಂತ 59 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ; ಬಿಜೆಪಿಗೆ ಹೆಚ್ಚು ಮುನ್ನಡೆ


    ಎನ್​ಡಿಎ ಬಹುಮತಕ್ಕೆ ಬೆರಳೆಣಿಕೆ ಸ್ಥಾನಗಳ ಕೊರತೆ ಬಂದಲ್ಲಿ ಚಿರಾಗ್ ಪಾಸ್ವಾನ್ ಮುನ್ನೆಲೆಗೆ ಬರುತ್ತಾರೆ. ಆದರೆ, ಅವರು ನಿತೀಶ್ ಕುಮಾರ್ ನೇತೃತ್ವದ ಸರಕಾರದಲ್ಲಿರಲು ಒಪ್ಪುತ್ತಾರಾ ಎಂಬುದು ಪ್ರಶ್ನೆ. ನರೇಂದ್ರ ಮೋದಿ ಅವರಿಗೆ ನಿಷ್ಠೆ ತೋರಿರುವ ಪಾಸ್ವಾನ್ ಅವರು ಅಸಾಮಾನ್ಯ ಸಂದರ್ಭದಲ್ಲಿ ಮಹಾಘಟಬಂಧನ್ ಕಡೆ ವಾಲಿದರೂ ಅಚ್ಚರಿ ಇಲ್ಲ. ಮಹಾರಾಷ್ಟ್ರದಲ್ಲಿ ಕಟ್ಟರ್ ಹಿಂದೂ ಪಂಥೀಯ ಪಕ್ಷವೆನಿಸಿದ್ದ ಶಿವಸೇನೆಯೇ ಕಾಂಗ್ರೆಸ್ ಮತ್ತು ಎನ್​ಸಿಪಿ ಜೊತೆ ಮಹಾಘಟಬಂಧನ್​ಗೆ ಕೈಜೋಡಿಸಿರುವಾಗ ಚಿರಾಗ್ ಪಾಸ್ವಾನ್ ಅವರ ಯಾವ ನಡೆ ಕೂಡ ಅನಿರೀಕ್ಷಿತ ಎನಿಸುವುದಿಲ್ಲ. ಆದರೆ, ಅವರು ನಾಲ್ಕೈದು ಸ್ಥಾನವನ್ನಾದರೂ ಗೆಲ್ಲಬೇಕಾಗಬಹುದು.

    Published by:Vijayasarthy SN
    First published: