ಬಿಹಾರ (ಅಕ್ಟೋಬರ್ 23); ಕೊರೋನಾ ವೈರಸ್ ದಾಳಿ, ಲಾಕ್ಡೌನ್, ಚೀನಾ ಗಡಿ ಸಂಘರ್ಷ, ವಲಸೆ ಕಾರ್ಮಿಕರ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಏನನ್ನೂ ಮಾಡಿಲ್ಲ. ಬಿಹಾರಕ್ಕೂ ಅವರಿಂದ ಯಾವ ಕೊಡುಗೆಯೂ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಕಿಡಿಕಾರಿದ್ದಾರೆ. ಬಿಹಾರದ ನವಾಡಾದಲ್ಲಿ ನಡೆದ ಕಾಂಗ್ರೆಸ್-ಆರ್ಜೆಡಿ ಜಂಟಿ ಚುನಾವಣಾ ರ‍್ಯಾಲಿಯಲ್ಲಿ ಯುವ ನಾಯಕ ತೇಜಸ್ವಿಯಾದವ್ ಜೊತೆಗೂಡಿ ಚುನಾವಣಾ ಪ್ರಚಾರ ನಡೆಸಿರುವ ರಾಹುಲ್ ಗಾಂಧಿ ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯಗಳನ್ನು ಜನರ ಮುಂದಿಟ್ಟು ಮತಯಾಚಿಸಿದ್ದಾರೆ. ಅಲ್ಲದೆ, ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಳ್ಳುಗಾರ ಎಂದು ಜರಿದಿರುವ ರಾಹುಲ್ ಗಾಂಧಿ, "ಚೀನಾ ನಮ್ಮ ಭಾರತದ ಭೂಮಿಯೊಳಗೆ ಬಂದಾಗ, ಪ್ರಧಾನಿ ಅದನ್ನು ಏಕೆ ನಿರಾಕರಿಸಿದರು? ಇಂದು, ಅವರು ಜವಾನರ ತ್ಯಾಗದ ಮುಂದೆ ತಲೆ ಬಾಗುತ್ತೇನೆದ ಎಂದು ಹೇಳುತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ನೀವು ಯಾಕೆ ಸುಳ್ಳು ಹೇಳಿದ್ದೀರಿ?
ಮೋದಿ ಜಿ ನೀವು ಬಿಹಾರಿಗಳಿಗೂ ಸುಳ್ಳು ಹೇಳಬೇಡಿ. ನೀವು ಬಿಹಾರದ ಯುವಕರಿಗೆ ಉದ್ಯೋಗ ನೀಡಿದ್ದೀರಾ? ಕಳೆದ ಚುನಾವಣೆಯಲ್ಲಿ ನೀವು 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದಿರಿ. ಆದರೆ, ಯಾರಿಗೂ ಉದ್ಯೋಗ ಸಿಗಲಿಲ್ಲ. ಸಾರ್ವಜನಿಕವಾಗಿ, ನಾನು ಸೈನಿಕರು, ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ತಲೆ ಬಾಗುತ್ತೇನೆ ಎನ್ನುತ್ತೀರಿ ಆದರೆ, ಮನೆಗೆ ತಲುಪಿದಾಗ ಬಂಡವಾಳಶಾಹಿಗಳಿಗಾಗಿ ಮಾತ್ರ ಕೆಲಸ ಮಾಡುತ್ತೀರಿ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೋವಿಡ್ -19 ಮತ್ತು ಮುಂದಿನ ವಲಸೆ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, "ಎಲ್ಲಾ ವಲಸೆ ಕಾರ್ಮಿಕರನ್ನು ಕೊರೋನಾ ಸಂದರ್ಭದಲ್ಲಿ ಮತ್ತೆ ಬಿಹಾರಕ್ಕೆ ಕಳುಹಿಸಲಾಯಿತು. ನೀವು ಮೈಲಿ ನಡೆದುಕೊಂಡು ಹೋಗುತ್ತಿದ್ದಾಗ ಪಿಎಂ ಮೋದಿ ಆ ಸಮಯದಲ್ಲಿ ಏನು ಮಾಡುತ್ತಿದ್ದರು? ಅವರು ನಿಮಗೆ ರೈಲುಗಳನ್ನು ಒದಗಿಸಿದ್ದರೆ? ನಿಮ್ಮ ಸಮಸ್ಯೆಗಳಿಗೆ ಕಿವಿಗೊಟ್ಟರೆ, ನಿಮ್ಮ ಹಸಿವನ್ನು ನೀಗಿಸಿದರೆ?" ಎಂದು ಪ್ರಶ್ನೆ ಮಾಡಿದ್ದಾರೆ.
ಈ ರ‍್ಯಾಲಿ ವೇಳೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿರುವ ತೇಜಸ್ವಿ ಯಾದವ್, "ಎನ್ಡಿಎ ಮೈತ್ರಿ ಕೂಟದ ವಿರುದ್ಧ ಮತ ಚಲಾಯಿಸುವ ಮೂಲಕ ನಿತೀಶ್ ಕುಮಾರ್ ಅವರನ್ನು ಮನೆಯಲ್ಲಿಯೇ ಇರಿಸಿ. ಏಕೆಂದರೆ ಕೊರೋನಾ ಸಂದರ್ಭದಲ್ಲಿ ಅವರು 144 ದಿನಗಳ ಕಾಲ ಮನೆಯಲ್ಲಿಯೇ ಕಳೆದಿದ್ದರು. ಆದರೆ, ಈಗ ಮಾತ್ರ ಅವರು ತಮ್ಮ ಮನೆಯಿಂದ ಹೊರ ಬಂದಿದ್ದಾರೆ.
ಏಕೆ ಈಗ ಮನೆಯಿಂದ ಹೊರಬರಬೇಕು? ಏಕೆಂದರೆ ಅವರಿಗೆ ಇಷ್ಟು ದಿನ ನೀವು ಬೇಕಿರಲಿಲ್ಲ. ಆದರೆ, ಈಗ ನಿಮ್ಮ ಮತದ ಅವಶ್ಯಕತೆ ಇದೆ. ಇದೇ ಕಾರಣಕ್ಕೆ ಅವರು ಮನೆಯಿಂದ ಹೊರಬಂದಿದ್ದಾರೆ. ಇಂತವರಿಗೆ ನೀವು ಮತ ಚಲಾಯಿಸಬೇಕೆ? ಅಥವಾ ಮನೆಯಲ್ಲಿಯೇ ಉಳಿಸಬೇಕೆ? ಎಂಬುದನ್ನು ನೀವೆ ನಿರ್ಧರಿಸಿ" ಎಂದು ಕಿಡಿಕಾರಿದ್ದಾರೆ.
ಬಿಹಾರ ರಾಜ್ಯದ ವಿಧಾನಸಭೆಗೆ ಮುಂದಿನ ವಾರ ಚುನಾವಣೆ ನಡೆಯಲಿದೆ. ಹೀಗಾಗಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಇಂದು ಒಂದೇ ದಿನ ಬಿಹಾರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಬಿಹಾರದಲ್ಲಿ ಇಂದು ತಮ್ಮ ಮೊದಲ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ತಮ್ಮ ಸರ್ಕಾರದ ಕ್ರಮವನ್ನು ಟೀಕಿಸಿದ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ : ಬಿಹಾರವನ್ನು ಶಿಲಾಯುಗಕ್ಕೆ ತಳ್ಳಿದವರಿಗೆ ಜನರ ಬಳಿ ಮತ ಕೇಳುವ ಧೈರ್ಯ ಎಷ್ಟು? - ಪ್ರಧಾನಿ ಮೋದಿ
"370 ನೇ ವಿಧಿ ರದ್ದುಗೊಳ್ಳಲು ಎಲ್ಲರೂ ಕಾಯುತ್ತಿದ್ದರು ಆದರೆ ಈ ಜನರು ಅಧಿಕಾರಕ್ಕೆ ಬಂದ ನಂತರ ನಿರ್ಧಾರವನ್ನು ರದ್ದುಗೊಳಿಸುತ್ತೇವೆ ಎಂದು ಹೇಳುತ್ತಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ರ‍್ಯಾಲಿಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಭಾಗವಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ