Haiti Earthquake- ಹೇತಿ ದೇಶದಲ್ಲಿ ಭಾರೀ ಭೂಕಂಪ; 300ಕ್ಕೂ ಹೆಚ್ಚು ಮಂದಿ ಸಾವು
2010ರಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿ 3 ಲಕ್ಷಕ್ಕೂ ಹೆಚ್ಚು ಮಂದಿಯನ್ನ ಕಳೆದುಕೊಂಡಿದ್ದ ಹೇಟಿ ದೇಶಕ್ಕೆ ಇದೀಗ 7.2 ತೀವ್ರತೆಯ ಭೂಕಂಪ ಅಪ್ಪಳಿಸಿದೆ. ಸದ್ಯ ಮುನ್ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ಬಗ್ಗೆ ವರದಿಗಳಿವೆ.
ನವದೆಹಲಿ, ಆ. 15: ದಶಕದ ಹಿಂದೆ ಭಾರೀ ಭೂಕಂಪದಿಂದ (Earthquake) ತತ್ತರಿಸಿಹೋಗಿದ್ದ ಹೇತಿ (Republic of Haiti) ದೇಶದಲ್ಲಿ ಮತ್ತೊಮ್ಮೆ ಭೂಮಿ ದೊಡ್ಡದಾಗಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆ ದಾಖಲಾಗಿದ್ದ ಈ ಭೂಕಂಪಕ್ಕೆ 300ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆಂದು ವರದಿಗಳು ಹೇಳುತ್ತಿವೆ. ಅಮೆರಿಕದ ಭೂಸರ್ವೇಕ್ಷಣಾ ವಿಭಾಗ ನೀಡಿರುವ ಮಾಹಿತಿ ಪ್ರಕಾರ ಕೆರಿಬಿಯನ್ ದ್ವೀಪ ಸಮೂಹದ ಭಾಗವಾಗಿರುವ ಹೈತಿ ದೇಶದ ರಾಜಧಾನಿ ಪೋರ್ಟ್ ಔ ಪ್ರಿನ್ಸ್ (Port-au-Prince) ನಗರದಿಂದ ಪಶ್ಚಿಮಕ್ಕೆ 125 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು. ಭಾರತೀಯ ಕಾಲಮಾನದಲ್ಲಿ ನಿನ್ನೆ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ನಿನ್ನೆಯ ಆರಂಭಿಕ ವರದಿ ಪ್ರಕಾರ 29 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತಾದರೂ ಈಗ ಬಂದಿರುವ ವರದಿಗಳ (ಎನ್ಡಿಟಿವಿ) ಪ್ರಕಾರ 300ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ನೂರಾರು ಮನೆಗಳು, ಕಟ್ಟಡಗಳು ಉರುಳಿಬಿದ್ದಿವೆ. ಹಲವಾರು ಮಂದಿ ಕಾಣೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಹೀಗಾಗಿ, ಸಾವಿನ ಸಂಖ್ಯೆ ಇನ್ನೂ ಬಹಳಷ್ಟು ಹೆಚ್ಚಿರುವ ಸಾಧ್ಯತೆ ಇದೆ.
ಅಮೆರಿಕದ ಸಮೀಪ ಇರುವ ಹೇತಿ ದೇಶದಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಮೆರಿಕ ಈಗಾಗಲೇ ನೆರವಿನ ಪ್ಯಾಕೇಜ್ ಪ್ರಕಟಿಸಿದ್ದಾರೆ. “ಕಷ್ಟದ ಪರಿಸ್ಥಿತಿಯಲ್ಲಿರುವ ಹೇತಿ ದೇಶಕ್ಕೆ ಈಗ ಭೂಕಂಪದ ಪೆಟ್ಟು ಬಿದ್ದಿರುವುದು ನನಗೆ ನೋವು ತಂದಿದೆ. ಈ ಸಂದರ್ಭದಲ್ಲಿ ಹೇತಿ ದೇಶಕ್ಕೆ ಅಮೆರಿಕ ನೆರವು ನೀಡುತ್ತದೆ” ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ಹೈಟಿ ಪ್ರಧಾನಿ ಏರಿಯಲ್ ಹೆನ್ರಿ ಅವರು ಹೆಲಿಕಾಪ್ಟರ್ ಮೂಲಕ ಹಾನಿಗೀಡಾದ ಪ್ರದೇಶದ ಸರ್ವೇಕ್ಷಣೆ ಮಾಡಿದ್ದಾರೆ. ಒಂದು ತಿಂಗಳ ಕಾಲ ತುರ್ತು ಸ್ಥಿತಿ ಘೋಷಿಸಿರುವ ಅವರು ತಮ್ಮ ದೇಶದ ಜನತೆಗೆ ಆತಂಕಕ್ಕೊಳಗಾಗದೇ ಧೈರ್ಯದಿಂದ ಪರಿಸ್ಥಿತಿ ಎದುರಿಸುವಂತೆ ಕರೆ ನೀಡಿದ್ಧಾರೆ.
ಭೂಕಂಪ ಭಾರೀ ತೀವ್ರತೆ ಇದ್ದರಿಂದ ಸುನಾಮಿ ಏಳುವ ಅಪಾಯ ಇತ್ತು. ಹೇತಿಯ ಕರಾವಳಿ ತೀರಕ್ಕೆ 10 ಅಡಿ ಎತ್ತರದ ದೈತ್ಯ ಅಲೆಗಳು ಅಪ್ಪಳಿಸಬಹುದು ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ ಎಚ್ಚರಿಕೆಯನ್ನೂ ನೀಡಿತ್ತು. ಆದರೆ, ಅದೃಷ್ಟಕ್ಕೆ ಸುನಾಮಿ ಸೃಷ್ಟಿಯಾಗಲಿಲ್ಲ.
ಹೇಟಿ ದೇಶ 2010ರಲ್ಲಿ ಆದ ಭೂಕಂಪ ದುರಂತವನ್ನ ಯಾವತ್ತೂ ಮರೆಯುವಂತಿಲ್ಲ. ಆ ವರ್ಷ ಸಂಭವಿಸಿದ ಭೂಕಂಪ 7.0 ತೀವ್ರತೆ ಇತ್ತಾದರೂ 2 ಲಕ್ಷಕ್ಕೂ ಹೆಚ್ಚು ಮಂದಿಯನ್ನ ಬಲಿತೆಗೆದುಕೊಂಡಿತ್ತು. ಹೇತಿ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ನಗರವನ್ನು ಬಹುತೇಕ ನೆಲಸಮಗೊಳಿಸಿಬಿಟ್ಟಿತ್ತು. ಇನ್ನೂ ಕೆಲ ನಗರಗಳೂ ಕೂಡ ತತ್ತರಿಸಿದ್ದವು. ಆ ದುರಂತದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 50 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಆ ಮಹಾದುರಂತದಿಂದ ಹೈತಿ ದೇಶ ಇನ್ನೂ ಚೇತರಿಕೆ ಕಂಡಿಲ್ಲ, ಆಗಲೇ ಮತ್ತೊಂದು ಭೂಕಂಪ ಅಪ್ಪಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಹೇತಿ ಅಧ್ಯಕ್ಷ ಜೋವೆನೆಲ್ ಮೋಯ್ಸ್ ಅವರ ಹತ್ಯೆಯಾಗಿ ರಾಜಕೀಯ ವಿಪ್ಲವದ ಸ್ಥಿತಿಯನ್ನ ಅದು ಎದುರಿಸುತ್ತಿದೆ. ಇಂಥ ಹೊತ್ತಲ್ಲಿ ಸಂಭವಿಸಿದ ಭೂಕಂಪದಿಂದ ಸೃಷ್ಟಿಯಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಟಿ ದೇಶಕ್ಕೆ ಸವಾಲಿನದ್ದಾಗಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ