ಉತ್ತರಪ್ರದೇಶದಲ್ಲಿ ಕಾಂಗ್ರೆಸ್​​ಗೆ ಭೀಮಸೇನೆ ಮುಖ್ಯಸ್ಥ ಚಂದ್ರಶೇಖರ್​​​ ಆಜಾದ್​​​​​ ಬೆಂಬಲ; ಎಸ್​​​ಪಿ-ಬಿಎಸ್​​ಪಿ ಮೈತ್ರಿಗೆ ಭಾರೀ ಹಿನ್ನಡೆ!

ಬಿಎಸ್​​ಪಿ ಮುಖ್ಯಸ್ಥೆ ಹೇಳಿಕೆಯಿಂದ ಕೆರಳಿರುವ ಆಜಾದ್‌ ಹೀಗೆ ಕಾಂಗ್ರೆಸ್​​​ ಬೆನ್ನಿಗೆ ನಿಂತಿದ್ದಾರೆ. ತಮ್ಮ ಚಿತ್ರ ಹಿಡಿದು ರ‍್ಯಾಲಿ ನಡೆಸಿದ ದಲಿತರ ಮೇಲೆ ಎಸ್‌ಪಿ-ಬಿಎಸ್‌ಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆಜಾದ್‌ ಆರೋಪಿಸಿ, ಈ ರೀತಿ ನಿರ್ಧಾರ ತಾಳಿದ್ಧಾರೆ.

Ganesh Nachikethu | news18
Updated:April 10, 2019, 8:12 AM IST
ಉತ್ತರಪ್ರದೇಶದಲ್ಲಿ ಕಾಂಗ್ರೆಸ್​​ಗೆ ಭೀಮಸೇನೆ ಮುಖ್ಯಸ್ಥ ಚಂದ್ರಶೇಖರ್​​​ ಆಜಾದ್​​​​​ ಬೆಂಬಲ; ಎಸ್​​​ಪಿ-ಬಿಎಸ್​​ಪಿ ಮೈತ್ರಿಗೆ ಭಾರೀ ಹಿನ್ನಡೆ!
ಚಂದ್ರಶೇಖರ್ ಆಜಾದ್ ಮತ್ತು ಮಾಯಾವತಿ
Ganesh Nachikethu | news18
Updated: April 10, 2019, 8:12 AM IST
ಲಕ್ನೋ(ಏ.10): ಭೀಮಸೇನೆ ಮುಖ್ಯಸ್ಥ ಚಂದ್ರಶೇಖರ್​​ ಆಜಾದ್​​ ಉತ್ತರಪ್ರದೇಶದಲ್ಲಿ ಕಾಂಗ್ರೆಸ್​​ಗೆ ಬೆಂಬಲ ಘೋಷಿಸಿದ್ಧಾರೆ. ಶಹರಾನ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಕಣಕ್ಕಿಳಿದಿರುವ ಕಾಂಗ್ರೆಸ್‌ ಅಭ್ಯರ್ಥಿ ಇಮ್ರಾನ್‌ ಮಸೂದ್‌ಗೆ ಮತ ಹಾಕುವಂತೆ ಆಜಾದ್​​ ಕರೆ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ‘ಭೀಮ್​​ ಆರ್ಮಿ’ ಪರವಾಗಿ ಒಲವು ಹೊಂದಿರುವ ದಲಿತರು ಸಾಕಷ್ಟು ಸಂಖ್ಯೆಯಲ್ಲಿದ್ಧಾರೆ. ಹೀಗಾಗಿ ಆಜಾದ್​​ ಕಾಂಗ್ರೆಸ್​​ಗೆ ನೀಡಿರುವ ಬೆಂಬಲದಿಂದ ಎಸ್​​​ಪಿ-ಬಿಎಸ್​​​ಪಿ ಮೈತ್ರಿಗೆ ಭಾರೀ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

ಉತ್ತರಪ್ರದೇಶದ ಪಶ್ಚಿಮ ಭಾಗಕ್ಕೆ ಸೇರಿರುವ ಲೋಕಸಭಾ ಕ್ಷೇತ್ರ ಶಹರಾನ್‌ಪುರ. ಈ ಭಾಗದಲ್ಲಿ ಚಂದ್ರಶೇಖರ್​​ ಆಜಾದ್​​ ಪರವಾಗಿ ಕೆಲಸ ಮಾಡುತ್ತಿರುವ ದಲಿತರ ಸಂಖ್ಯೆ ಗಣನೀಯವಾಗಿದೆ. ಹಾಗಾಗಿ ಆಜಾದ್​​ ಕರೆ ಇಲ್ಲಿನ ಹಾಲಿ ಬಿಜೆಪಿ ಸಂಸದ ರಾಘವ್‌ ಲಖನ್‌ಪಾಲ್‌ ಎದುರಾಳಿಯಾಗಿರುವ ಬಿಎಸ್‌ಪಿ-ಎಸ್‌ಪಿ ಮೈತ್ರಿ ಅಭ್ಯರ್ಥಿ ಫೈಜುಲ್‌ ರೆಹ್ಮಾನ್‌ ಮೇಲೆ ತುಸು ಹೆಚ್ಚೇ ಪರಿಣಾಮ ಬೀರಲಿದೆ. ಮತದಾರ ಆಜಾದ್​​ ಕರೆಗೆ ಓಗೊಟ್ಟು ಕಾಂಗ್ರೆಸ್​​ ಬೆಂಬಲಕ್ಕೆ ನಿಲ್ಲಬಹುದು ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ಒಂದೂವರೆ ವರ್ಷದಿಂದ ಸೆರೆಮನೆ ವಾಸದಲಿದ್ದ ದಲಿತ ಹೋರಾಟಗಾರ ಚಂದ್ರಶೇಖರ್​ ಆಜಾದ್ ಶಹರಾನ್​ಪುರ ಜೈಲಿನಿಂದ ಬಿಡುಗಡೆಯಾಗಿದ್ದರು. ದಲಿತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಆಜಾದ್​ರನ್ನು ಬಿಡುಗಡೆ ಮಾಡಿತ್ತು. ಅಲ್ಲದೇ ಚಂದ್ರಶೇಖರ್​ನನ್ನು ನೂರಾರು ಜನ ಹೋರಾಟಗಾರರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಇದರಿಂದ ಮುಂದೆ ರಾಜ್ಯದಲ್ಲಿ ಮಾಯಾವತಿ ಅವರ ವರ್ಚಸ್ಸು ಕಡಿಮೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿತ್ತು.

ಇದನ್ನೂ ಓದಿ: ಯುವಕರ ಧ್ವನಿ ಹತ್ತಿಕ್ಕುವ ಕೆಲಸ ಬಿಜೆಪಿ ಮಾಡುತ್ತಿದೆ; ಪ್ರಿಯಾಂಕಾ ಗಾಂಧಿ ಆರೋಪ!

ಈ ಬೆನ್ನಲ್ಲೇ ಆಜಾದ್​​ ಕೂಡ ಬಹಿರಂಗವಾಗಿಯೇ ಬಿಎಸ್​​​ಪಿ ವಿರುದ್ಧ ಕೆಂಡಕಾರಿದ್ದರು. ಇದರಿಂದ ಬೇಸತ್ತ ಮಾಜಿ ಸಿಎಂ ಮಾಯಾವತಿಯವರು ಆಜಾದ್‌ 'ಬಿಜೆಪಿಯ ಏಜೆಂಟ್‌, ದಲಿತರ ಮತಗಳನ್ನು ಒಡೆಯುವುದೇ ಅವರ ಉದ್ದೇಶ ಎಂದಿದ್ದರು. ಇದೀಗ ಬಿಎಸ್​​ಪಿ ಮುಖ್ಯಸ್ಥೆ ಹೇಳಿಕೆಯಿಂದ ಕೆರಳಿರುವ ಆಜಾದ್‌ ಹೀಗೆ ಕಾಂಗ್ರೆಸ್​​​ ಬೆನ್ನಿಗೆ ನಿಂತಿದ್ದಾರೆ. ತಮ್ಮ ಚಿತ್ರ ಹಿಡಿದು ರ‍್ಯಾಲಿ ನಡೆಸಿದ ದಲಿತರ ಮೇಲೆ ಎಸ್‌ಪಿ-ಬಿಎಸ್‌ಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆಜಾದ್‌ ಆರೋಪಿಸಿ, ಈ ರೀತಿ ನಿರ್ಧಾರ ತಾಳಿದ್ಧಾರೆ.

ಇನ್ನು ಒಂದು ವಾರದ ಹಿಂದೆಯಷ್ಟೇ ಆಜಾದ್‌ ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ಸೂಕ್ತ ಅಭ್ಯರ್ಥಿ ಇಲ್ಲದೇ ಹೋದಲ್ಲಿ ತಾವೇ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. ಮೋದಿ ಸೋಲಿಸುವುದೇ ನನ್ನ ಗುರಿ ಎಂದಿದ್ದ ಆಜಾದ್​​ ನಡೆಯಿಂದ ಎಸ್ಪಿ-ಬಿಎಸ್ಪಿ ಮೈತ್ರಿಗೆ ರಾಜ್ಯಾದ್ಯಂತ ತೊಡಕಾಗುವ ಸಾಧ್ಯತೆ ಇದೆ ಎನ್ನುತ್ತಿದ್ದರು ರಾಜಕೀಯ ತಜ್ಙರು.ಇದನ್ನೂ ಓದಿ: ಕೊನೆಗೂ ಜೈಲಿನಿಂದ ಭೀಮಸೇನೆ ಮುಖ್ಯಸ್ಥ ಬಿಡುಗಡೆ: ‘ಬಿಜೆಪಿಗೆ ಮತ ನೀಡಬೇಡಿ’ ಎಂದು ಚಂದ್ರಶೇಖರ್​​ ಆಜಾದ್​ ಕರೆ

ಜತೆಗೆ ಈ ಹಿಂದೆ ಚಂದ್ರಶೇಖರ್​​​ ಆಜಾದ್​​​ನನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​​​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಭೇಟಿ ಮಾಡಿದ್ದರು. ಈಗಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ಗಂಭೀರ ಹೆಜ್ಜೆಯೊಂದನ್ನು ಮುಂದೆ ಇರಿಸಿದ್ದಾರೆ ಎನ್ನಲಾಗಿತ್ತು. ಉತ್ತರ ಪ್ರದೇಶದ ಮೀರತ್​ನ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಆಜಾದ್ ಅವರನ್ನು ಕಾಂಗ್ರೆಸ್ಸಿಗರು ಭೇಟಿ ಮಾಡಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಅಲ್ಲದೇ ಅಂದೇ ಆಜಾದ್​​ ಕಾಂಗ್ರೆಸ್​​ ಬೆಂಬಲಕ್ಕೆ ನಿಲ್ಲಬಹುದು ಎಂದು ಊಹಿಸಲಾಗಿತ್ತು.
----------------
First published:April 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ