• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Bharat Bandh – ಭಾರತ್ ಬಂದ್​ಗೆ ಬೆಂಬಲವಾಗಿ ದೇಶಾದ್ಯಂತ ಪ್ರತಿಭಟನೆಗಳ ಮಹಾಪೂರ; ರಸ್ತೆ ತಡೆ, ರೈಲು ತಡೆ, ಮುಷ್ಕರ

Bharat Bandh – ಭಾರತ್ ಬಂದ್​ಗೆ ಬೆಂಬಲವಾಗಿ ದೇಶಾದ್ಯಂತ ಪ್ರತಿಭಟನೆಗಳ ಮಹಾಪೂರ; ರಸ್ತೆ ತಡೆ, ರೈಲು ತಡೆ, ಮುಷ್ಕರ

ಪಶ್ಚಿಮ ಬಂಗಾಳದಲ್ಲಿ ರೈಲ್ ರೋಕೋ ನಡೆಸಿದ ಪ್ರತಿಭಟನಾಕಾರರು

ಪಶ್ಚಿಮ ಬಂಗಾಳದಲ್ಲಿ ರೈಲ್ ರೋಕೋ ನಡೆಸಿದ ಪ್ರತಿಭಟನಾಕಾರರು

ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳ ಬಿಸಿ ಹೆಚ್ಚಿದೆ. ಪಂಜಾಬ್, ಹರಿಯಾಣದ ದೆಹಲಿ ಗಡಿಭಾಗಗಳಲ್ಲಿ ರೈತರು ಉಗ್ರ ಹೋರಾಟಕ್ಕೆ ಸದಾ ಅಣಿಗೊಂಡಿದ್ಧಾರೆ. ರಸ್ತೆ ತಡೆ, ರೈಲು ತಡೆ, ಮುಷ್ಕರ ದೇಶಾದ್ಯಂತ ನಡೆದಿವೆ.

 • Share this:

  ನವದೆಹಲಿ(ಡಿ. 08): ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನ ವಿರೋಧಿಸಿ ‘ಭಾರತ್ ಬಂದ್’ ನಡೆಸುತ್ತಿರುವ ರೈತ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗಳ ಮಹಾಪೂರವನ್ನೇ ಹರಿಸಿವೆ. ದೇಶದ ಬಹುತೇಕ ಕಡೆ ರಸ್ತೆ ತಡೆ, ರೈಲ್ ರೋಕೋ ಇತ್ಯಾದಿ ಪ್ರತಿಭಟನೆಗಳು ನಡೆಸಲಾಗುತ್ತಿದೆ. ಜನ ಸಾಮಾನ್ಯರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ರೈತರು ಎಲ್ಲಿಯೂ ಬಲವಂತದಿಂದ ಅಂಗಡಿ-ಮುಂಗಟ್ಟು, ಸಾರಿಗೆಯನ್ನು ಬಂದ್ ಮಾಡುವ ಕೆಲಸ ಮಾಡಿಲ್ಲ. ಆದರೆ, ಪ್ರತಿಯೊಂದು ಜಿಲ್ಲೆಗಳಲ್ಲೂ ರೈತರು ಅಲ್ಲಲ್ಲಿ ವಿವಿಧ ರೀತಿಯಲ್ಲಿ ಪ್ರತಿಭಟನೆಗಳನ್ನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


  ಪ್ರತಿಭಟನೆಗಳ ಕೇಂದ್ರ ಬಿಂದುವಾಗಿರುವ ದೆಹಲಿ-ಪಂಜಾಬ್-ಹರಿಯಾಣ ಗಡಿಭಾಗಗಳಲ್ಲಿ ಭಾರೀ ಬಿಗಿಭದ್ರತೆ ವಹಿಸಲಾಗಿದೆ. 13 ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿರುವ ದಹಲಿ-ಹರಿಯಾಣ ಗಡಿಭಾಗವಾದ ಸಿಂಘು ಬಳಿ ಭದ್ರತೆ ಇಂದು ಇನ್ನಷ್ಟು ಹೆಚ್ಚಿಸಲಾಗಿದೆ. ದೆಹಲಿಯೊಳಗೆ ಪ್ರತಿಭಟನಾಕಾರರು ನುಗ್ಗುವ ಸಾಧ್ಯತೆ ಇರುವುದರಿಂದ ಟಿಕ್ರಿ, ಝರೋಡಾ, ಧಾನ್ಸಾ ಗಡಿಭಾಗವನ್ನು ಪೊಲೀಸರು ಮುಚ್ಚಿದ್ದಾರೆ. ಬಡುಸರಾಯ್, ಝಟಿಕಾರ ಗಡಿಭಾಗಗಳಲ್ಲಿ ನಿರ್ಬಂಧ ಹೇರಿ ಕೆಲ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.


  ತೆಲಂಗಾಣ, ಪಶ್ಚಿಮ ಬಂಗಾಳ ಮೊದಲಾದ ಕೆಲ ರಾಜ್ಯಗಳಲ್ಲಿ ರೈತರ ಪ್ರತಿಭಟನೆಗಳು ಜೋರಾಗಿವೆ. ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್​ಎಸ್ ಸೇರಿದಂತೆ ಎಲ್ಲಾ ಬಿಜೆಪಿಯೇತರ ಪಕ್ಷಗಳು ಬಂದ್​ಗೆ ಬೆಂಬಲ ನೀಡಿವೆ. ಇಲ್ಲಿ ಆಟೋ, ಕ್ಯಾಬ್​ಗಳೂ ಇಂದು ರಸ್ತೆಗಿಳಿದಿಲ್ಲ. ಬಸ್ಸುಗಳ ಸಂಚಾರವೂ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಪ್ರತಿಭಟನೆಯ ಬಿಸಿ ಮುಟ್ಟಿಸುತ್ತಿವೆ. ಇಲ್ಲಿ ರೈಲು ತಡೆ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟನೆಗಳನ್ನ ನಡೆಸಲಾಗುತ್ತಿದೆ.


  ಇದನ್ನೂ ಓದಿ: Bharat Bandh – ಇಂದಿನ ಭಾರತ್ ಬಂದ್​ಗೆ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳಿಂದ ಭಾರೀ ಬೆಂಬಲ


  ಮಹಾರಾಷ್ಟ್ರದಲ್ಲಿ ಭಾರತ್ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿಯ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚಾರ ಮಾಡುತ್ತಿವೆ. ಪ್ರತಿಭಟನೆ ತೀವ್ರ ಮಟ್ಟಕ್ಕೆ ಹೋದರೆ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕರ್ನಾಟಕದಲ್ಲಿ ಕೆಲ ಕಡೆ ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆಗಳು ಪ್ರಾರಂಭಗೊಂಡಿವೆ. ಮಧ್ಯಾಹ್ನದಷ್ಟರಲ್ಲಿ ಇಲ್ಲಿ ಪ್ರತಿಭಟನೆಯ ಕಾವು ತಾರಕಕ್ಕೇರುವ ನಿರೀಕ್ಷೆ ಇದೆ. ಅದನ್ನು ಎದುರಿಸಲು ರಾಜ್ಯ ಸರ್ಕಾರ ಬಿಗಿ ಭದ್ರತೆಯ ಬಂದೋಬಸ್ತ್ ಮಾಡಿದೆ.


  ರೈತ ಸಂಘಟನೆಗಳು ಭಾರತ್ ಬಂದ್ ನಿಮಿತ್ತ ದೆಹಲಿಯನ್ನ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನ ಬೆಳಗ್ಗೆಯಿಂದಲೇ ತಡೆಯುವ ಉದ್ದೇಶ ಹೊಂದಿದ್ದವು. ಆದರೆ, ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗುವ ಕಾರಣ ಬೆಳಗ್ಗೆ 11ರಿಂದ ಮಧ್ಯಾಹ್ನ 3ಗಂಟೆಯವರೆಗೆ ಚಕ್ಕಾ ಜಾಮ್ (ಸಂಚಾರ ತಡೆ) ಮಾಡಲು ರೈತರು ನಿರ್ಧರಿಸಿದ್ಧಾರೆ.

  Published by:Vijayasarthy SN
  First published: