Bharat Bandh| ನಾಳೆ ಭಾರತ್ ಬಂದ್; ಇಲ್ಲಿದೆ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಪಕ್ಷ-ರಾಜ್ಯ ಸರ್ಕಾರಗಳ ಪಟ್ಟಿ

ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಬಂದ್‌ಗೆ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (AAP) ಮತ್ತು ತೆಲುಗು ದೇಶಂ ಪಕ್ಷ (TDP) ಮತ್ತು ಎಡಪಕ್ಷಗಳು ಈಗಾಗಲೇ ಬೆಂಬಲವನ್ನು ಘೋಷಿಸಿವೆ.

ರೈತ ಹೋರಾಟ (ಪ್ರಾತಿನಿಧಿಕ ಚಿತ್ರ)

ರೈತ ಹೋರಾಟ (ಪ್ರಾತಿನಿಧಿಕ ಚಿತ್ರ)

 • Share this:
  ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಯ (Agriculture Bill) ವಿರುದ್ಧ ರೈತರು ಸತತ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ರೈತರ ಹೋರಾಟದ ಬಗ್ಗೆ ಕೇಂದ್ರ ಸರ್ಕಾರ (Central Government) ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೆ, ರೈತರ ಬೇಡಿಕೆಗೂ ಮಣಿಯವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಪರಿಣಾಮ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (Samyukt Kisan Morcha) ಸೆಪ್ಟೆಂಬರ್​. 27 ರಂದು ಭಾರತ್ ಬಂದ್​ಗೆ ಕರೆ ನೀಡಿದೆ. ಈ ಬಂದ್​ಗೆ ಬಿಜೆಪಿ (BJP) ಏತರ ಸರ್ಕಾರವಿರುವ ಅನೇಕ ರಾಜ್ಯಗಳು ಮತ್ತು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಬಂದ್‌ಗೆ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (AAP) ಮತ್ತು ತೆಲುಗು ದೇಶಂ ಪಕ್ಷ (TDP) ಮತ್ತು ಎಡಪಕ್ಷಗಳು ಈಗಾಗಲೇ ಬೆಂಬಲವನ್ನು ಘೋಷಿಸಿವೆ. ಇದಲ್ಲದೆ, ರೈತ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಉಳಿದ ಎಲ್ಲಾ ರಾಜಕೀಯ ಪಕ್ಷಗಳ ಪಟ್ಟಿ ಇಲ್ಲಿದೆ.

  ವೈಎಸ್ಆರ್ ಕಾಂಗ್ರೆಸ್;

  ವೈಎಸ್ಆರ್ ಕಾಂಗ್ರೆಸ್ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ರೈತರು ಕರೆ ನೀಡಿರುವ ಸೆಪ್ಟೆಂಬರ್ 27 ಭಾರತ್ ಬಂದ್‌ಗೆ ಬೆಂಬನ ನೀಡಿದೆ. ಆಂಧ್ರಪ್ರದೇಶದ ಮಾಹಿತಿ ಮತ್ತು ಸಾರಿಗೆ ಸಚಿವ ಪೆರ್ನಿ ವೆಂಕಟರಾಮಯ್ಯ (ನಾನಿ) ಶನಿವಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರ ರೈತರ ಪ್ರತಿಭಟನೆಗೆ ಸಂಪೂರ್ನ ಬೆಂಬಲ ನೀಡಿದೆ. ಜೊತೆಗೆ ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆಯ ಕಾರ್ಮಿಕರ ಪ್ರತಿಭಟನೆಯನ್ನು ಬೆಂಬಲಿಸಿ, ಕೇಂದ್ರ ಸರ್ಕಾರದ ಖಾಸಗೀಕರಣ ಪ್ರಯತ್ನಗಳನ್ನು ವಿರೋಧಿಸುತ್ತೇವೆ ಎಂದಿದ್ದಾರೆ.

  ಕಾಂಗ್ರೆಸ್;

  ಭಾರತ್ ಬಂದ್‌ಗೆ ತನ್ನ ಬೆಂಬಲ ನೀಡಿರುವ ಕಾಂಗ್ರೆಸ್, ಪ್ರತಿಭಟನಾಕಾರರೊಂದಿಗೆ ಸರ್ಕಾರ ಚರ್ಚೆಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದೆ. ಶಾಂತಿಯುತ ಮುಷ್ಕರಕ್ಕೆ ಕರೆ ನೀಡಿರುವ ಕಾಂಗ್ರೆಸ್ ವಕ್ತಾರ ಗೌರವ ವಲ್ಲಭ್, ಕೇಂದ್ರದ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಗಳು ನೀಡಿದ ಭಾರತ್ ಬಂದ್‌ಗೆ ಪಕ್ಷ ಮತ್ತು ಅದರ ಎಲ್ಲಾ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ. ಪ್ರತಿ ರೈತನಿಗೂ ಎಮ್‌ಎಸ್‌ಪಿಯನ್ನು ಕಾನೂನುಬದ್ಧ ಹಕ್ಕಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

  ಆಮ್ ಆದ್ಮಿ ಪಕ್ಷ;

  ಸೆಪ್ಟೆಂಬರ್ 27 ರಂದು ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ ಭಾರತ್ ಬಂದ್ ಕರೆಗೆ ಎಎಪಿ ಸಹ ಬೆಂಬಲ ನೀಡಿದೆ. ರೈತರಿಗೆ ಒಗ್ಗಟ್ಟಿನ ಈ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಪಕ್ಷವು ಬೆಂಬಲವನ್ನು ಘೋಷಿಸಿದೆ ಎಂದು ಎಎಪಿ ನಾಯಕ ರಾಘವ್ ಚಡ್ಡಾ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷವು ರೈತರ ದೆಹಲಿ ಚಲೋ ಆರಂಭವಾದಾಗಿನಿಂದ ರೈತರಿಗೆ ಬೆಂಬಲವಾಗಿ ನಿಂತಿದೆ.

  ತೆಲುಗು ದೇಶಂ ಪಕ್ಷ ಮತ್ತು ಎಡಪಕ್ಷಗಳು;

  ಭಾರತ್ ಬಂದ್ ಅನ್ನು ಯಶಸ್ವಿಗೊಳಿಸಲು ಆಂಧ್ರಪ್ರದೇಶದ ಕಮ್ಯುನಿಸ್ಟ್ ಪಾರ್ಟಿ ಇಂಡಿಯಾ (ಸಿಪಿಐ) ಕಚೇರಿಯಲ್ಲಿ ಎಡ ಪಕ್ಷಗಳು, ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಯಿಂದ ಸಭೆ ನಡೆದಿದೆ. ಸಿಪಿಐ ರಾಜ್ಯ ನಾಯಕ ದೊಣೆಪುಡಿ ಶಂಕರ್, "ದೆಹಲಿಯಲ್ಲಿ ರೈತರು ಒಂಬತ್ತು ತಿಂಗಳಿಂದ ಆಂದೋಲನ ನಡೆಸುತ್ತಿದ್ದಾರೆ, ಆದ್ದರಿಂದ ಅವರನ್ನು ಬೆಂಬಲಿಸಲು ಈ ಭಾರತ್ ಬಂದ್ ನಡೆಯಲಿದೆ" ಎಂದು ಹೇಳಿದ್ದರು.

  ಜಂಟಿ ಹೇಳಿಕೆಯಲ್ಲಿ, ಎಡಪಕ್ಷಗಳಾದ ಸಿಪಿಐ, ಸಿಪಿಐ (ಎಂ), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ-ಲೆನಿನಿಸ್ಟ್)-ಭಾರತ್ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವಂತೆ ಜನರನ್ನು ಕೋರಿದೆ.

  ಆರ್‌ಜೆಡಿ ನಾಯಕ ತೇಜಶ್ವಿ ಯಾದವ್;

  ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಸೆಪ್ಟೆಂಬರ್ 27 ರಂದು ಭಾರತ್ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕರೆಗೆ ಬೆಂಬಲ ನೀಡಿದ್ದಾರೆ.

  ಕೇರಳ ಸರ್ಕಾರ: ಎಲ್‌ಡಿಎಫ್;

  ಕೇರಳದ ಆಡಳಿತಾರೂಢ ಎಲ್‌ಡಿಎಫ್ ಕೂಡ ರೈತರಿಗೆ ಬೆಂಬಲ ಸೂಚಿಸಲು, ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ತಿರುವನಂತಪುರಂನಲ್ಲಿ ಆಡಳಿತ ಪಕ್ಷದ ಮೈತ್ರಿಕೂಟದ ನಾಯಕರ ಸಭೆಯ ನಂತರ ಸಿಪಿಐ (ಎಂ) ಹಂಗಾಮಿ ಕಾರ್ಯದರ್ಶಿ ಎ ವಿಜಯರಾಘವನ್ ಬೆಂಬಲ ಘೋಷಿಸಿರುವುದಾಗಿ ಹೇಳಿದ್ದಾರೆ.

  "ಪ್ರತಿಭಟನೆಯಲ್ಲಿ ಐದು ಲಕ್ಷ ಜನರು ಭಾಗವಹಿಸಲಿದ್ದಾರೆ. ಸಾರಿಗೆ ನೌಕರರು, ಬ್ಯಾಂಕ್ ಉದ್ಯೋಗಿಗಳು ಮತ್ತು ರೈತ ಸಂಘಟನೆಗಳು ಸೇರಿದಂತೆ 100 ಕ್ಕೂ ಹೆಚ್ಚು ಸಂಘಟನೆಗಳು ಎಲ್‌ಡಿಎಫ್ ಆಂದೋಲನಕ್ಕೆ ತಮ್ಮ ಬೆಂಬಲವನ್ನು ನೀಡಿವೆ" ಎಂದು ವಿಜಯರಾಘವನ್ ಹೇಳಿದ್ದಾರೆ.

  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI);

  "ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸೆಪ್ಟೆಂಬರ್ 27 ರಂದು ಭಾರತ್ ಬಂದ್ ಗೆ ತನ್ನ ಒಗ್ಗಟ್ಟನ್ನು ಘೋಷಿಸುತ್ತದೆ" ಎಂದು SDPI ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  ಪಕ್ಷವು ಆರಂಭದಿಂದಲೂ ರೈತರ ಆಂದೋಲನವನ್ನು ಬೆಂಬಲಿಸುತ್ತಿದೆ ಮತ್ತು ಕೃಷಿ ಕಾಯಿದೆಗಳ ವಿರುದ್ಧ ದೇಶದಾದ್ಯಂತ ನೂರಾರು ಪ್ರತಿಭಟನೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

  ಬ್ಯಾಂಕ್ ಅಧಿಕಾರಿಗಳ ಸಂಘ;

  ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಅಲ್‌ಬಿಒಸಿ) ಸೋಮವಾರ ನಡೆಯಲಿರುವ ಭಾರತ್ ಬಂದ್‌ಗೆ ತನ್ನ ಬೆಂಬಲವನ್ನು ನೀಡಿದೆ. ರೈತರ ಬೇಡಿಕೆಗಳ ಕುರಿತು ಒಕ್ಕೂಟ ಸರ್ಕಾರ ಸಂವಾದ ನಡೆಸಬೇಕು ಮತ್ತು ಮೂರು ವಿವಾದಿತ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದೆ.

  ಇದನ್ನೂ ಓದಿ: Bharat Bandh: ರೈತರಿಂದ ನಾಳೆ ಹೆದ್ದಾರಿ ಬಂದ್, ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡಬೇಡಿ..!

  ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಗಳು, ಕಾರ್ಮಿಕ ಸಂಘಟನೆಗಳು, ಯುವಕರು, ಶಿಕ್ಷಕರು, ಕಾರ್ಮಿಕರು ಮತ್ತು ಜನಪರ ಸಂಘಟನೆಗಳು ಸೇರಿದಂತೆ ಹಲವು ವಿವಿಧ ಸಂಸ್ಥೆಗಳು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕರೆ ನೀಡಿರುವ ಭಾರತ್ ಬಂದ್‌ಗೆ ಸಂಪೂರ್ಣ ಬೆಂಬಲ ಸೂಚಿಸಿವೆ.
  Published by:MAshok Kumar
  First published: