ಭಾರತ್ ಬಂದ್ ಭಾರೀ ಯಶಸ್ವಿ ಎಂದ ವಿಪಕ್ಷಗಳು; ಇದು ಗೂಂಡಾಗಿರಿ ಎಂದ ಬಿಜೆಪಿ


Updated:September 10, 2018, 5:56 PM IST
ಭಾರತ್ ಬಂದ್ ಭಾರೀ ಯಶಸ್ವಿ ಎಂದ ವಿಪಕ್ಷಗಳು; ಇದು ಗೂಂಡಾಗಿರಿ ಎಂದ ಬಿಜೆಪಿ

Updated: September 10, 2018, 5:56 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಸೆ. 10): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಕ್ಷೇಪಿಸಿ ಕಾಂಗ್ರೆಸ್ ಪಕ್ಷ ಕರೆಕೊಟ್ಟ ಭಾರತ್ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 21 ವಿಪಕ್ಷಗಳ ಬೆಂಬಲವಿದ್ದ ಈ ಬಂದ್​ ವೇಳೆ ಕೆಲ ಕಡೆ ಹಿಂಸಾಚಾರಗಳಾಗಿವೆ. ಅನೇಕ ಕಡೆ ಟಯರ್ ಸುಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಹಲವೆಡೆ ಬಂದ್​ಗೆ ಓಗೊಟ್ಟು ಜನರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿದ್ದಾರೆ. ಇನ್ನೂ ಹಲವೆಡೆ ಬಲವಂತವಾಗಿ ಮಳಿಗೆಗಳನ್ನ ಮುಚ್ಚಿಸಲಾಯಿತು. ಕರ್ನಾಟಕ, ಪಂಜಾಬ್, ಬಿಹಾರ, ಮಹಾರಾಷ್ಟ್ರ, ತ್ರಿಪುರಾ ರಾಜ್ಯಗಳಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದೆ. ಪ್ರವಾಹಪೀಡಿತ ಕೇರಳದಲ್ಲಿ ಮೌನವಾಗಿಯೇ ಬಂದ್ ಆಚರಿಸಲಾಯಿತು. ಗುಜರಾತ್, ತೆಲೆಂಗಾಣ, ಆಂಧ್ರ ಮೊದಲಾದ ರಾಜ್ಯಗಳಲ್ಲಿ ಭಾರತ್ ಬಂದ್​ಗೆ ಮಿಶ್ರ ಸ್ಪಂದನೆ ಸಿಕ್ಕಿತು. ದೆಹಲಿ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಲ್ಲಿ ಜನಜೀವನಕ್ಕೆ ಅಂತಹ ತೊಂದರೆ ಆಗಲಿಲ್ಲ. ಬಿಹಾರದಲ್ಲಿ ಬಂದ್​ನಿಂದಾಗಿ ಒಂದು ಮಗು ಬಲಿಯಾಗಬೇಕಾಯಿತು. ಆ್ಯಂಬುಲೆನ್ಸ್​ಗೆ ಹೋಗಲು ಸ್ಥಳವಿಲ್ಲದೆ ಆ ಮಗು ಸಾವನ್ನಪ್ಪಿದ್ದು ಬಿಟ್ಟರೆ ಬಂದ್ ವೇಳೆ ಅಂತಹ ಅಹಿತಕರ ಘಟನೆಗಳು ನಡೆದದ್ದು ವರದಿಯಾಗಿಲ್ಲ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತದಾದ್ಯಂತ ಬಂದ್ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ, ಭಾರತ್ ಬಂದ್​ನ್ನು ಗೂಂಡಾಗಿರಿ ಬಂದ್ ಎಂದು ಬಿಜೆಪಿ ಟೀಕಿಸಿದೆ. ಬಿಹಾರದಲ್ಲಿ ಒಂದು ಮಗು ಬಲಿಯಾಗಿರುವುದಕ್ಕೆ ಯಾರು ಹೊಣೆ ಎಂದು ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಪ್ರಶ್ನಿಸಿದೆ. ಜನರು ಸ್ವಯಂಪ್ರೇರಿತವಾಗಿ ಬಂದ್​ಗೆ ಬೆಂಬಲ ಕೊಟ್ಟಿಲ್ಲ. ಗೂಂಡಾಗಿರಿ ಮೂಲಕ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಯಿತು ಎಂದು ಬಿಜೆಪಿ ಆರೋಪಿಸಿದೆ.

ಕೇಂದ್ರ ಸರಕಾರವು ಪೆಟ್ರೋಲ್ ಮೇಲೆ ವಿಧಿಸುತ್ತಿರುವ ಅಬಕಾರಿ ಸುಂಕದ ದರವನ್ನು ಇಳಿಸಬೇಕೆಂದು ವಿಪಕ್ಷಗಳು ಬಲವಾಗಿ ಆಗ್ರಹಿಸಿವೆ. ಆದರೆ, ಪೆಟ್ರೋಲ್ ಬೆಲೆ ಏರಿಕೆಗೆ ಕೇಂದ್ರ ಕಾರಣವಲ್ಲ. ಅಂತಾರಾಷ್ಟ್ರೀಯ ತೈಲ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಬೆಲೆ ನಿಗದಿಯಾಗಿದೆ ಎಂದು ಬಿಜೆಪಿ ತನ್ನ ವಾದ ಮುಂದುವರಿಸಿದೆ.

ಇದೇ ವೇಳೆ, ಕರ್ನಾಟಕದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಯಶಸ್ವಿಯಾಗಿ, ಜನಜೀವನ ಒಂದಷ್ಟು ಮಟ್ಟಿಗೆ ಅಸ್ತವ್ಯಸ್ತಗೊಂಡಿತು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಹುತೇಕ ಸ್ಥಗಿತಗೊಂಡಿತ್ತು. ನಗರಗಳಲ್ಲಿ ರಸ್ತೆಗಿಳಿದಿದ್ದ ಅಲ್ಪಸ್ವಲ್ಪ ಕ್ಯಾಬ್​ಗಳು ಮತ್ತು ಆಟೋಗಳಿಗೆ ವಿಪರೀತ ಬೇಡಿಕೆ ಇತ್ತು. ಪ್ರಯಾಣಿಕರು ತೀರಾ ದುಬಾರಿ ದರ ತೆತ್ತು ಪ್ರಯಾಣಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಬೆಂಗಳೂರಿನ ಬಹುತೇಕ ಕಡೆ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಪೆಟ್ರೋಲ್ ಬಂಕ್, ಔಷಧಿ ಮಳಿಗೆ ಇತ್ಯಾದಿ ತೆರೆದಿದ್ದವು.

ಪ್ರತಿಭಟನಾಕಾರರ ಆಕ್ರೋಶ ಮಧ್ಯಾಹ್ನದಷ್ಟರಲ್ಲಿ ತಣ್ಣಗಾಯಿತು. ಸಂಜೆ 4 ಗಂಟೆ ಬಳಿಕ ಪರಿಸ್ಥಿತಿ ಯಥಾಸ್ಥಿತಿಗೆ ಮರಳತೊಡಗಿತು. ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ಸುಗಳ ಸಂಚಾರ ಕ್ರಮೇಣ ಪ್ರಾರಂಭಗೊಂಡವು.
First published:September 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...