ನವ ದೆಹಲಿ (ಡಿಸೆಂಬರ್ 06); ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ರೈತರು ಕೈಗೊಂಡಿರುವ ಹೋರಾಟ 11ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ರೈತ ಮುಖಂಡರು ಮತ್ತು ಸರ್ಕಾರದ ನಡುವೆ ಐದು ಸುತ್ತಿನ ಮಾತುಕತೆ ನಡೆದಿದ್ದು, ಮಾತುಕತೆ ವಿಫಲವಾದ ಪರಿಣಾಮ ರೈತ ಸಂಘಟನೆಗಳು ಡಿಸೆಂಬರ್ 8ಕ್ಕೆ ಭಾರತ್ ಬಂದ್ಗೆ ಕರೆ ನೀಡಿರುವುದು ಖಚಿತವಾಗಿದೆ. ಅಲ್ಲದೆ, ಭಾರತ್ ಬಂದ್ ಯೋಜಿಸಿದಂತೆ ನಡೆಯಲಿದೆ ಎಂದು ಕೃಷಿ ಒಕ್ಕೂಟದ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಈ ಬಂದ್ಗೆ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಬಿಜೆಪಿಯೇತರ ಸರ್ಕಾರಗಳು, ಎಡ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಅಲ್ಲದೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಸಹ ರೈತ ಪ್ರತಿಭಟನೆಗೆ ಇಂದು ಭೇಷರತ್ ಬೆಂಬಲ ಘೋಷಿಸಿದೆ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧದ ರೈತರ ಹೋರಾಟದ ಬಲ ದಿನೇ ದಿನೇ ಹೆಚ್ಚುತ್ತಿದೆ ಎನ್ನಲಾಗುತ್ತಿದೆ.
ಇದಲ್ಲದೆ ರೈತರ ಹೋರಾಟಕ್ಕೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) 10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಗಳು ದೇಶಾದ್ಯಂತ ನಡೆಯಲಿರುವ ಮುಷ್ಕರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿವೆ.
ಭಾರತ್ ಬಂದ್ ಕುರಿತು ಮಾತನಾಡಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್, "ಸರ್ಕಾರದೊಂದಿಗಿನ ಸಭೆಯಲ್ಲಿ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ನಾವು ಮನವಿ ಮಾಡಿದ್ದೇವೆ. ಆದರೆ, ಸರ್ಕಾರದ ಜೊತೆಗಿನ ಮಾತುಕತೆಯಿಂದ ಯಾವುದೇ ಪ್ರಯೋಜನವಿಲ್ಲ. ಅವರು ಕಾಯ್ದೆಗಳನ್ನು ವಾಪಸ್ ಪಡೆಯಲು ಮುಂದಾಗುತ್ತಿಲ್ಲ. ಹೀಗಾಗಿ ರೈತರು ಹೋರಾಟ ತೀವ್ರಗೊಳಿಸುವುದು ಅನಿವಾರ್ಯ. ಪರಿಣಾಮ ಮಂಗಳವಾರ ಭಾರತ್ ಬಂದ್ ನಡೆಸಲಿದ್ದೇವೆ. ದೆಹಲಿಯ ಪ್ರತಿ ರಸ್ತೆಗಳನ್ನು, ಪ್ರತಿ ಟೋಲ್‌ಗಳನ್ನು ಬಂದ್ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
Telangana CM & TRS chief K Chandrashekhar Rao (in file photo) has extended TRS’ total support to Bharat bandh called on December 8 by farmers. He said that the TRS rank & file would participate actively in the proposed bandh: Chief Minister's Office pic.twitter.com/ICXIAy4gbZ
— ANI (@ANI) December 6, 2020
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC), ಹಿಂದ್ ಮಜ್ದೂರ್ ಸಭಾ (HMS), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU), ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಮತ್ತು ಟ್ರೇಡ್ ಯೂನಿಯನ್ ಕೋ- ಆರ್ಡಿನೇಷನ್ ಸೆಂಟರ್ (TUCC) ಕಾರ್ಮಿಕ ಸಂಘಟನೆಗಳು ಸಹ ರೈತರ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಿವೆ.
ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ರೈತರ ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆಗಳು ನಡೆಯಲಿವೆ. ಪ್ರತಿಭನಟನಾ ನಿರತ ರೈತ ಸಂಘಟನೆಗಳು, ಉತ್ತರ ಪ್ರದೇಶ ಮತ್ತು ಹರಿಯಾಣ ಗಡಿಯ ರೈತರಿಗೆ ತಮ್ಮೊಂದಿಗೆ ಸೇರಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕಳೆದ 10 ದಿನಗಳಿಂದ, ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನು (ಎನ್‌ಸಿಆರ್) ಸಂಪರ್ಕಿಸುವ ರಸ್ತೆಗಳು, ದೆಹಲಿ ಗಡಿ ಭಾಗಗಳು ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳ ಸಾವಿರಾರು ರೈತರ ಪ್ರತಿಭಟನೆಗೆ ಸಾಕ್ಷಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ